ದೇಶದ ಇತರೆಡೆಗಳಿಗೂ ಒಂದು ಪಾಠವಾಗುವ ನಾಗಾ ಗ್ರಾಮದ ನೀರು ನಿರ್ವಹಣಾ ವ್ಯವಸ್ಥೆ
- ಬರಾಶ ದಾಸ್
ಭಾರತದಲ್ಲಿ ಮಳೆಯಾಧಾರಿತ ಕೃಷಿ, ಮಳೆಯ ಅನಿಶ್ಚಿತತೆಯಿಂದಾಗಿ ಅಪಾಯ ಎದುರಿಸುತ್ತಿದೆ ಎಂದು ಫೆಬ್ರವರಿ 2023ರಲ್ಲಿ ವಿಶ್ವಬ್ಯಾಂಕ್ ಪ್ರಕಟಿಸಿದ ಲೇಖನವೊಂದು ಹೇಳುತ್ತದೆ.
ಕೃಷಿ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಪ್ರಕಾರ, ಭಾರತದ ನಿವ್ವಳ ಬಿತ್ತನೆ ಪ್ರದೇಶದ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು 140 ಮಿಲಿಯನ್ ಹೆಕ್ಟೇರ್ಗಳಲ್ಲಿ ಶೇ.55ರಷ್ಟು-ಪ್ರಾಥಮಿಕವಾಗಿ ಮಳೆಯ ಮೇಲೆಯೇ ಅವಲಂಬಿತವಾಗಿದೆ. ಮಳೆಯಾಶ್ರಿತ ಕೃಷಿ ದೇಶದ ಒಟ್ಟು ಆಹಾರ ಧಾನ್ಯ ಉತ್ಪಾದನೆಯ ಸುಮಾರು ಶೇ.40ರಷ್ಟು ಪಾಲನ್ನು ನೀಡುತ್ತದೆ. ಜಾನುವಾರುಗಳ ಮೂರನೇ ಎರಡರಷ್ಟು ಭಾಗಕ್ಕೆ ಮೇವು ಮತ್ತು ಜನಸಂಖ್ಯೆಯ ಶೇ.40ರಷ್ಟು ಭಾಗದ ಜೀವನೋಪಾಯಕ್ಕೆ ಮಳೆಯಾಧಾರಿತ ಕೃಷಿಯೇ ಬೆಂಬಲವಾಗಿದೆ. ಆದ್ದರಿಂದ, ಇದು ದೇಶದ ಆರ್ಥಿಕತೆ ಮತ್ತು ಆಹಾರ ಭದ್ರತೆಗೆ ನಿರ್ಣಾಯಕ ಕೊಡುಗೆಯಾಗಿದೆ. ಶೇ.80ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರ ಜೀವನ ಮಳೆಯೊಂದಿಗೆ ಸಂಬಂಧ ಹೊಂದಿದೆ.
ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಪ್ರಕಾರ, ಭಾರತದಲ್ಲಿ ಮಳೆಯಾಶ್ರಿತ ಪ್ರದೇಶಗಳು ಅತ್ಯಂತ ಅನಿಶ್ಚಿತತೆ ಎದುರಿಸುತ್ತವೆ. ಮಳೆಯ ಅನಿರೀಕ್ಷಿತತೆಯಿಂದಾಗಿ ಮಳೆಯಾಧಾರಿತ ಕೃಷಿ ಅಪಾಯದಲ್ಲಿದೆ. ಆದರೂ, ಸಾಂಪ್ರದಾಯಿಕವಾಗಿ ಗ್ರಾಮೀಣ ಸಮುದಾಯಗಳು ತಮ್ಮ ಆರ್ಥಿಕತೆ, ಕೃಷಿ-ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು, ಜಾನುವಾರುಗಳನ್ನು ಮತ್ತು ಈ ಪ್ರದೇಶಗಳಲ್ಲಿ ಬೆಳೆಯುವ ವಿವಿಧ ಬೆಳೆಗಳನ್ನು ಎಚ್ಚರಿಕೆಯಿಂದ ಅಭಿವೃದ್ಧಿಪಡಿಸಲು ಈ ಅನಿಶ್ಚಿತತೆ ಮತ್ತು ಅನಿರೀಕ್ಷಿತತೆಯನ್ನೂ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದಿದ್ದವು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ನಾಗಾಲ್ಯಾಂಡ್ನ ಕಿಕ್ರುಮಾ ಎಂಬ ಹಳ್ಳಿ ಇಂಥ ಒಂದು ಪುರಾವೆಯಾಗಿದೆ.
ಈ ಪ್ರದೇಶದಲ್ಲಿನ ನೀರಾವರಿ ಮತ್ತು ಕೃಷಿ ಪದ್ಧತಿ, ಝಾಬೋ ಎಂದು ಹೆಚ್ಚು ಜನಪ್ರಿಯವಾಗಿ ಕರೆಯಲ್ಪಡುವ ರುಝಾ ವ್ಯವಸ್ಥೆ, ಸುಮಾರು ಒಂದು ಶತಮಾನದಿಂದ ಉತ್ತಮ ಫಸಲನ್ನು ನೀಡುತ್ತಿರುವ ವಿಶಿಷ್ಟ ನೀರಿನ ನಿರ್ವಹಣೆ ಕ್ರಮವಾಗಿದೆ.
ಕಿಕ್ರುಮಾ ಎಂಬ ಸುಂದರ ಗ್ರಾಮ ನಾಗಾಲ್ಯಾಂಡ್ನ ಫೆಕ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ 1,643 ಮೀಟರ್ ಎತ್ತರದಲ್ಲಿದೆ. ನಾಗಾಲ್ಯಾಂಡ್ನ ಸರಾಸರಿ ವಾರ್ಷಿಕ ಮಳೆ ಬೀಳುವ 150 ದಿನಗಳಲ್ಲಿ 2,000 ಮಿ.ಮೀ. ಆಗಿದ್ದರೆ, ಕಿಕ್ರುಮಾ ವಾರ್ಷಿಕವಾಗಿ ಸುಮಾರು 461.18 ಮಿ.ಮೀ. ಮಳೆಯನ್ನು ಮಾತ್ರ ಪಡೆಯುತ್ತದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕೃಷಿ ವಿಜ್ಞಾನದ ಮುಖ್ಯ ತಾಂತ್ರಿಕ ಅಧಿಕಾರಿ ಹನ್ನಾ ಕ್ರುಜಿಯಾ ಅಸಂಗ್ಲಾ ಹೇಳುತ್ತಾರೆ.
ಹಳ್ಳಿಯ ದಕ್ಷಿಣ ಮತ್ತು ಉತ್ತರಕ್ಕೆ ಕ್ರಮವಾಗಿ ಹರಿಯುವ ಸೀಡ್ಜು ಮತ್ತು ಖುಜಾ ನದಿಗಳು ಅದರ ನೀರಿನ ಅಗತ್ಯಗಳನ್ನು ಪೂರೈಸುವುದಿಲ್ಲ. ದೀರ್ಘಕಾಲಿಕ ನೀರಿನ ಕೊರತೆ ನೀಗಿಸಲು, ಹಳ್ಳಿಗರು ರುಝಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ನೀರನ್ನು ತಡೆದು ನೀರಾವರಿಗಾಗಿ ಬಳಸಿಕೊಳ್ಳುತ್ತಾರೆ.
ತಡೆಹಿಡಿದ ನೀರು
ಹಿಂದಿನ ತಲೆಮಾರಿನವರು ನದಿಯ ದಡದಲ್ಲಿ ವಾಸಿಸುತ್ತಿದ್ದರು ಮತ್ತು ಅಲ್ಲಿಯೇ ಕೃಷಿ ಮಾಡುತ್ತಿದ್ದರು. ಜನಸಂಖ್ಯೆ ಹೆಚ್ಚಿದ ಬಳಿಕ ಅನೇಕರು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು. ಯಾವುದೇ ಶಾಶ್ವತ ನೀರಿನ ಮೂಲ ಮತ್ತು ಅಲ್ಪ ಪ್ರಮಾಣದ ಮಳೆಯಿಲ್ಲದೆ, ಈ ಕೃಷಿಕ ಕುಟುಂಬಗಳು ಅಂತಿಮವಾಗಿ, ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ರುಝಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಸುಮಾರು 80ರಿಂದ 100 ವರ್ಷಗಳ ಹಿಂದೆ ಈ ವ್ಯವಸ್ಥೆಯನ್ನು ಅವರು ರೂಪಿಸಿಕೊಂಡರು.
‘ರುಝಾ’ ಎಂದರೆ ಚೋಕ್ರಿ ಉಪಭಾಷೆಯಲ್ಲಿ, ನೀರು ಅಥವಾ ಹರಿಯುವ ನೀರಿನ ಕೊಳ ಅಥವಾ ನೀರಾವರಿ ಕೊಳ ಎಂದರ್ಥ. ಆದರೆ ಸಂಶೋಧಕರು ಮತ್ತು ವರದಿಗಳು ಇದನ್ನು ಹೆಚ್ಚು ಪ್ರಸಿದ್ಧಿಗೆ ತಂದಿರುವುದು ‘ಝಬೋ ಸಿಸ್ಟಮ್’ ಎಂಬ ಹೆಸರಿನಲ್ಲಿ.
ಝಬೋ ಎಂಬುದು ಭತ್ತದ ಹೊಲದೊಳಗೆ ಅಗೆಯುವ ಸಣ್ಣ ಹೊಂಡವಾಗಿದ್ದು, ಮೀನುಗಳನ್ನು ಸಾಕಲು ಬಳಸಲಾಗುತ್ತದೆ. ಆದರೆ, ರುಝಾ ಒಂದು ದೊಡ್ಡ ಕೊಳವಾಗಿದ್ದು, ಸುಮಾರು 0.2 ಹೆಕ್ಟೇರ್ಗಳಷ್ಟು ವಿಸ್ತಾರಕ್ಕೆ ಹರಡಿಕೊಂಡಿರುತ್ತದೆ. ಹರಿದು ಹೋಗುವ ನೀರನ್ನು ಸಂಗ್ರಹಿಸಲು ಇದನ್ನು ಬಳಸಲಾಗುತ್ತದೆ.
ಅರಣ್ಯ ಪ್ರದೇಶಗಳು ಮುಖ್ಯ ಜಲಾನಯನ ಪ್ರದೇಶಗಳಾಗಿವೆ. ಗ್ರಾಮದ ನಿವಾಸಿಗಳು ಮಳೆನೀರನ್ನು ಕೊಳಗಳಿಗೆ ಹರಿಸಲು ಕಾಡುಗಳಲ್ಲಿ ಮತ್ತು ಸಾಧ್ಯವಿರುವ ಪ್ರತಿಯೊಂದು ಜಲಾನಯನ ಪ್ರದೇಶದಲ್ಲಿಯೂ ಕಾಲುವೆಗಳನ್ನು ನಿರ್ಮಿಸುತ್ತಾರೆ. ಹಲವಾರು ಕಡಿದಾದ ಹಳ್ಳಿಯ ರಸ್ತೆಗಳ ಮೂಲಕ ಹರಿಯುವ ನೀರನ್ನು ತಡೆದು, ಅದರ ಹರಿವನ್ನು ರುಜಾಗೆ ತಿರುಗಿಸಲಾಗುತ್ತದೆ.
ರುಝಾ ಅಥವಾ ಕೊಯ್ಲು ಕೊಳಗಳು ಸಾಕಷ್ಟು ಎತ್ತರದಲ್ಲಿರುತ್ತವೆ. ಇವು ಕಿರಿದಾದ ಕಾಲುವೆಗಳ ಮೂಲಕ ತಗ್ಗು ಪ್ರದೇಶಗಳ ಗದ್ದೆಗಳಿಗೆ ಹರಿಯುವಂತೆ ಮಾಡಲಾಗಿರುತ್ತದೆ. ಹೊಲಗಳಿಗೆ ನೀರುಣಿಸುವ ಸಮಯ ಬರುವವರೆಗೆ ಕಲ್ಲು ಮತ್ತು ಮಣ್ಣಿನಿಂದ ಈ ಕಾಲುವೆಗಳನ್ನು ಮುಚ್ಚಲಾಗಿರುತ್ತದೆ.
ಕಿಕ್ರುಮಾದಲ್ಲಿ 200ಕ್ಕೂ ಹೆಚ್ಚು ಕೊಯ್ಲು ಕೊಳಗಳಿವೆ ಮತ್ತು ಪ್ರತಿಯೊಂದನ್ನೂ ಹೊಲಗಳಿಗೆ ನೀರಾವರಿ ಮಾಡಲು ರೈತರು ಹಂಚಿಕೊಂಡಿದ್ದಾರೆ. ರೈತರು ನಿರಂತರವಾಗಿ ಈ ವ್ಯವಸ್ಥೆಯಲ್ಲಿ ಸುಧಾರಣೆಯನ್ನೂ ತರುತ್ತಿದ್ದಾರೆ, ವಿಶೇಷವಾಗಿ ನೀರಿನ ನಷ್ಟವನ್ನು ತಡೆಯಲು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ. ಇತ್ತೀಚೆಗೆ, ನೀರನ್ನು ಹರಿಸಲು ಬಿದಿರು ಮತ್ತು ಪೈಪ್ಗಳನ್ನು ಬಳಸಲು ಶುರು ಮಾಡಿದ್ದಾರೆ.
ಹರಿಯುವ ನೀರನ್ನು ಜಾನುವಾರುಗಳನ್ನು ಬಿಡುವ ನಿರ್ದಿಷ್ಟ ಜಾಗಗಳ ಮೂಲಕವೂ ಹರಿಸಲಾಗುತ್ತದೆ. ಇದರಿಂದ ಆ ಸ್ಥಳ ಸ್ವಚ್ಛಗೊಳ್ಳುವುದರ ಜೊತೆಗೆ, ಗದ್ದೆಗಳಿಗೆ ಅಲ್ಲಿಂದ ಗೊಬ್ಬರವನ್ನೂ ನೀರು ಸಾಗಿಸುತ್ತದೆ. ಇದೊಂದು ಕ್ರಮ ವಾದರೆ, ಕೆಲವು ರೈತರು ಕೊಳಗಳಿಂದ ನೀರನ್ನು ದೂರದ ಗದ್ದೆಗಳಿಗೆ ಹರಿಸಲು ಪಂಪ್ಗಳನ್ನು ಬಳಸುವುದೂ ಇದೆ.
ನಾಗಾಲ್ಯಾಂಡ್ ಒಂದು ಸಾವಯವ ರಾಜ್ಯವಾಗಿದ್ದು, ರಾಸಾಯನಿಕ ಗೊಬ್ಬರದ ಬಳಕೆ ಇಲ್ಲಿ ಅತ್ಯಂತ ಕಡಿಮೆ ಎಂಬುದು ಮತ್ತೊಂದು ವಿಶೇಷ. ಗೊಬ್ಬರದ ಹೊರತಾಗಿ ಸಿರಿಸ್, ಆಲ್ಡರ್, ಬೇವು ಮತ್ತು ಅಜೋಲಾಗಳಂತಹ ಸ್ಥಳೀಯ ಮರಗಳ ದರಗನ್ನು (ಒಣಗಿಬಿದ್ದ ಎಲೆಗಳು) ಗೊಬ್ಬರವಾಗಿ ಬಳಸಲಾಗುತ್ತದೆ. ಹೊಲಗಳ ಬಳಿಯೇ ಮರಗಳನ್ನು ನೆಡಲಾಗುತ್ತದೆ. ಮಣ್ಣನ್ನು ಉಳುಮೆ ಮಾಡಿದ ನಂತರ ಅದರಲ್ಲಿ ಮರದ ದರಗನ್ನು ಬೆರೆಸುತ್ತಾರೆ. ಭತ್ತದ ಸಸಿಗಳು ತೀರಾ ಚಿಕ್ಕದಾಗಿದ್ದಾಗ ಮಾತ್ರ ಸಾಮಾನ್ಯ ಉಪ್ಪು ಅಥವಾ ರಾಸಾಯನಿಕ ಗೊಬ್ಬರವನ್ನು ಕನಿಷ್ಠ ಪ್ರಮಾಣದಲ್ಲಿ ಬಳಸುತ್ತಾರೆ.
ಸಮಗ್ರ ಸಾವಯವ ಕೃಷಿ
ಝಬೋ ಅಥವಾ ರುಝಾ ವ್ಯವಸ್ಥೆ ಸುಸ್ಥಿರವಾದ ಸಮಗ್ರ ಕೃಷಿಯಾಗಿದ್ದು, ಅರಣ್ಯ, ತೋಟಗಾರಿಕೆ, ಕೃಷಿ, ಮೀನುಗಾರಿಕೆ ಮತ್ತು ಪಶುಸಂಗೋಪನೆಯನ್ನು ಸುಸಜ್ಜಿತವಾದ ಮಣ್ಣು ಮತ್ತು ಜಲ ಸಂರಕ್ಷಣೆಯ ಕ್ರಮಗಳೊಂದಿಗೆ ಮಾಡಲಾಗುತ್ತದೆ. ಮುಖ್ಯ ಬೆಳೆ ಭತ್ತ. ಅಕ್ಕಿಯ ಸುಮಾರು 17 ವಿಧಗಳನ್ನು ತೇವವಿರುವ ತಾರಸಿಗಳಲ್ಲಿ ಬೆಳೆಸಲಾಗುತ್ತದೆ. ಪ್ರತೀ ಹೆಕ್ಟೇರ್ಗೆ ಮೂರರಿಂದ ನಾಲ್ಕು ಟನ್ಗಳಷ್ಟು ಭತ್ತದ ಇಳುವರಿ ಬರುವುದಾಗಿ ಹೇಳಲಾಗುತ್ತದೆ.
ಕೊಳಗಳು, ದನದ ಕೊಟ್ಟಿಗೆಗಳು ಮತ್ತು ನೀರಿನ ಕಾಲುವೆಗಳ ಸಮೀಪವಿರುವ ತಾರಸಿಗಳ ಉದ್ದಕ್ಕೂ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಮುಖ್ಯವಾಗಿ ಮಾವು, ಪೇರಲ, ಬಾಳೆ, ಪಪ್ಪಾಯಿ, ದಾಳಿಂಬೆ, ಜೋಳ, ಆಲೂಗಡ್ಡೆ, ಕುಂಬಳಕಾಯಿ, ಕೊಲೊಕಾಸಿಯಾ, ಸೌತೆಕಾಯಿ, ಎಲೆಕೋಸು, ಬೆಳ್ಳುಳ್ಳಿ, ಮರದ ಟೊಮೆಟೊ, ರಾಜ ಮೆಣಸಿನಕಾಯಿ ಇವುಗಳಲ್ಲಿ ಸೇರಿವೆ. ಇದರ ಜೊತೆಗೆ, ದ್ವಿದಳ ಧಾನ್ಯಗಳಾದ ರಾಜ್ಮಾ ಮತ್ತು ಬೀನ್ಸ್ ಸಹ ಬೆಳೆಯಲಾಗುತ್ತದೆ.
ಹೆಚ್ಚಿನ ರೈತರು ಭತ್ತ ಮತ್ತು ಮೀನು ಕೃಷಿಯನ್ನು ಒಟ್ಟಿಗೇ ಮಾಡುತ್ತಾರೆ. ಪ್ರತೀ ಹೆಕ್ಟೇರ್ಗೆ ಸರಾಸರಿ 50-60 ಕೆಜಿ ಮೀನು ಉತ್ಪಾದನೆ ಮಾಡಲಾಗುತ್ತದೆ.
ಪೀಳಿಗೆಯ ಜ್ಞಾನ
ಮಕ್ಕಳು ಚಿಕ್ಕ ವಯಸ್ಸಿನಿಂದಲೇ ತಮ್ಮ ಕುಟುಂಬದ ಕೆಲಸವನ್ನು ನೋಡುತ್ತ, ಕೆಲಸಗಳಲ್ಲಿ ನೆರವಾಗುತ್ತ, ಸಾಂಪ್ರದಾಯಿಕ ರುಝಾ ವ್ಯವಸ್ಥೆಯನ್ನು ಕಲಿಯುತ್ತಾರೆ. ಎಷ್ಟೋ ಸಲ ಶಾಲಾ ವಿದ್ಯಾರ್ಥಿಗಳು ತಮ್ಮ ರಜೆಯ ಸಮಯದಲ್ಲಿ ಕೃಷಿ ಕೆಲಸದಲ್ಲಿ ಸಹಾಯ ಮಾಡುವುದೂ ಇದೆ.
ಪರ್ವತದ ತುದಿಯಲ್ಲಿನ ಕಿಕ್ರುಮಾ ಗ್ರಾಮದಲ್ಲಿ ಸುಮಾರು 950 ಕುಟುಂಬಗಳು ರುಝಾ ವ್ಯವಸ್ಥೆಯನ್ನು ರೂಢಿಸಿಕೊಂಡಿವೆ. ಕಿಕ್ರುಮಾದಲ್ಲಿ ಒಟ್ಟು 915 ಹೆಕ್ಟೇರ್ ಕೃಷಿ ಭೂಮಿಯಲ್ಲಿ 26 ಹೆಕ್ಟೇರ್ ಮಾತ್ರ ರುಝಾ ಪದ್ಧತಿಯಲ್ಲಿ ಸಾಗುವಳಿಯಾಗುತ್ತದೆ. ಸಾಕಷ್ಟು ನೀರಿನ ಮೂಲವಿರುವ, ಕಡಿಮೆ ಎತ್ತರದಲ್ಲಿರುವ ರೈತರು ಈ ನೀರು ಕೊಯ್ಲು ವ್ಯವಸ್ಥೆಯನ್ನು ಬಳಸುವುದಿಲ್ಲ. ಆದರೆ, ಈಚೆಗೆ ನೀರಿನ ಕೊರತೆ ಹೆಚ್ಚಾಗುತ್ತಿದ್ದು, ಇತರ ಕೆಲವು ಹಳ್ಳಿಗಳಲ್ಲಿಯೂ ರುಝಾ ವ್ಯವಸ್ಥೆಯ ನೆರವು ಪಡೆಯಲಾಗುತ್ತಿದೆ.
ರೈತರು ತಮ್ಮ ಇಳುವರಿ ಮೂಲಕವೇ ಸ್ವಾವಲಂಬಿ ಗಳಾಗಿದ್ದಾರೆ. ಫಸಲನ್ನು ಅವರು ಮಾರಾಟ ಮಾಡುವುದು ಕಡಿಮೆ. ಕಡಿಮೆ ಮಳೆ ಅಥವಾ ತಡವಾದ ಮಳೆಯಿಂದಾಗಿ ಉಂಟಾಗುವ ಕೊರತೆಯ ಸಮಯದಲ್ಲಿ ಬಳಸಲು ಬೆಳೆದಿದ್ದನ್ನು ಶೇಖರಿಸಿಡುವ ಕ್ರಮವಿದೆ.
ರುಝಾ ಕೇವಲ ಕೃಷಿ ವಿಧಾನವಲ್ಲ ಮಾತ್ರವಾಗದೆ, ಕೃಷಿಕ ಸಮುದಾಯವನ್ನು ಬೆಸೆಯುವ ವ್ಯವಸ್ಥೆಯೂ ಆಗಿದೆ. ಪರಸ್ಪರ ಮಾತುಕತೆಗಳ ಮೂಲಕ ಕುಟುಂಬಗಳು ನೀರನ್ನು ಹಂಚಿ ಕೊಳ್ಳುತ್ತವೆ. ಈ ಎತ್ತರದ ಹಳ್ಳಿಯಲ್ಲಿನ ಭತ್ತದ ಗದ್ದೆಗಳು ಕಾಡಿನ ನಡುವೆ ಹರಡಿಕೊಂಡಿವೆ, ಹೊಲಗಳು ದೂರದವರೆಗೆ ಹರಡಿಕೊಂಡಿವೆ. ಇವನ್ನು ನೋಡಿಕೊಳ್ಳುವಲ್ಲಿ ರೈತರು ಪರಸ್ಪರ ನೆರವಾಗುತ್ತಾರೆ.
ರುಝಾ ಅಳವಡಿಕೆ:
ರುಝಾ ಬೇಸಾಯ ಪದ್ಧತಿ ಲಾಭದಾಯಕ, ಸಮರ್ಥನೀಯ, ಪರಿಸರ ಸ್ನೇಹಿ ಮತ್ತು ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸುತ್ತದೆ ಎಂದು ಪರಿಣತರು ಹೇಳುತ್ತಾರೆ. ಕಡಿಮೆ ಮಳೆಯಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಲಾಭದಾಯಕವಾಗಿದೆ.
ಪರಿಣಿತರು ಹೇಳುವ ಪ್ರಕಾರ, ರುಝಾ ವ್ಯವಸ್ಥೆಯನ್ನು ಇತರ ಸ್ಥಳಗಳಲ್ಲಿಯೂ ಅಳವಡಿಸಿಕೊಳ್ಳಬಹುದು. ಆದರೆ ಮೊದಲು, ಮಳೆನೀರನ್ನು ಹೀರಿಕೊಳ್ಳಲು ನೈಸರ್ಗಿಕ ಸಸ್ಯ ಮತ್ತು ಅರಣ್ಯದೊಂದಿಗೆ ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು. ಅದರ ನಂತರ, ತಾರಸಿಗಳನ್ನು ನಿರ್ಮಿಸಬೇಕು ಮತ್ತು ನೀರನ್ನು ಹರಿಸಬೇಕು. ನಿರಂತರ ನೀರಿನ ಹರಿವು ಇದ್ದಾಗ ಮಾತ್ರ ಶಾಶ್ವತ ಕೃಷಿ ಮಾಡಲು ಸಾಧ್ಯವಾಗುತ್ತದೆ. ಇದು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದು ಒಳ್ಳೆಯ ಆಯ್ಕೆ ಎಂಬುದು ಮಾತ್ರ ನಿಜ.
ಕೃಷಿ-ಅರಣ್ಯ ಮತ್ತು ತೋಟಗಾರಿಕೆಯಂತಹ ಸಮಗ್ರ ಮಧ್ಯಸ್ಥಿಕೆಯ ಮೂಲಕ ಶಾಶ್ವತ ಕೃಷಿ ಪದ್ಧತಿಯನ್ನು ಅಭಿವೃದ್ಧಿಪಡಿಸುವ ಕ್ರಮವಿದು. ಸರಿಯಾದ ಮರ, ಸರಿಯಾದ ಸಮಯ, ಸರಿಯಾದ ಉದ್ದೇಶಕ್ಕಾಗಿ ಸರಿಯಾದ ಸ್ಥಳ ಎಂಬ ತತ್ವವನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ವಹಿಸಲಾಗುತ್ತದೆ. ಆದರೆ, ಜಲಾನಯನ ಅಭಿವೃದ್ಧಿ ಆಗಬೇಕಿದೆ. ಇದೊಂದು ಸಾಂಪ್ರದಾಯಿಕ ವ್ಯವಸ್ಥೆ.
ಸಮಗ್ರ ಕೃಷಿ ಪದ್ಧತಿಗಾಗಿ ಮಳೆನೀರು ಕೊಯ್ಲು ಮತ್ತು ಹೆಚ್ಚಿನ ವೌಲ್ಯದ ಬೆಳೆಗಳಿಗೆ ಅದರ ಬಹು ಉಪಯೋಗಗಳ ಕುರಿತು ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಜಲಕುಂಡ್, ಬೆಟ್ಟದ ತುದಿಗಳಲ್ಲಿ ಸೂಕ್ಷ್ಮ ಮಳೆನೀರು ಕೊಯ್ಲು ರಚನೆ ನಿರ್ಮಿಸಲಾಗಿದೆ ಮತ್ತು ಸಂಗ್ರಹಿಸಿದ ನೀರನ್ನು ನೈಸರ್ಗಿಕ ಸಸ್ಯಗಳಿಗೆ ನೀರಾವರಿಗಾಗಿ ಬಳಸಲಾಗುತ್ತದೆ. ಈ ಯೋಜನೆಯನ್ನು ಈಶಾನ್ಯ ಭಾರತದ ಹಲವಾರು ರಾಜ್ಯಗಳಲ್ಲಿ ಐಸಿಎಆರ್ ಈಗಾಗಲೇ ಕೈಗೆತ್ತಿಕೊಂಡಿದೆ.
ಈ ಮಧ್ಯೆ, ಕಿಕ್ರುಮಾದಲ್ಲಿನ ಸ್ಥಳೀಯ ಮತ್ತು ಸುಸ್ಥಿರ ಬೇಸಾಯ ಪದ್ಧತಿಯನ್ನು ಸರಕಾರ ಸಂಭಾವ್ಯ ಪರಿಣಾಮಕಾರಿ ಪ್ರದೇಶ ಆಧಾರಿತ ಸಂರಕ್ಷಣಾ ಕ್ರಮ ಎಂದು ಗುರುತಿಸಿದೆ. ಸಂರಕ್ಷಿತ ಪ್ರದೇಶದಂತೆಯೇ ಜೈವಿಕ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಈ ಕ್ರಮವನ್ನು ನಿರ್ವಹಿಸಲಾಗುತ್ತದೆ.
ಕೃಪೆ: india.mongabay.com