ಒಂದು ಹಬ್ಬದ ಹಲವು ಗಮನಾರ್ಹ ವಿಶೇಷತೆಗಳು
- ಯೂಸುಫ್ ಶುಕೂರ್ ಬೋಳಾರ್
ಬಕ್ರೀದ್ ಬಂತೆಂದರೆ ಸಾಕು. ಒಂದೆಡೆ ಹಬ್ಬ ಆಚರಿಸುವ ಸಡಗರವಾದರೆ ಇನ್ನೊಂದೆಡೆ ವಿವಿಧ ವಲಯಗಳಿಂದ ಕುತೂಹಲ ತುಂಬಿದ ಕೆಲವು ಪ್ರಶ್ನೆಗಳು ಹರಿದು ಬರತೊಡಗುತ್ತವೆ. ಮುಗ್ಧ ಕೌತುಕಕ್ಕೆ ಸಾಕ್ಷಿಯಾಗಿರುವ ಎರಡು ಸ್ಯಾಂಪಲ್ ಪ್ರಶ್ನೆಗಳು ಮತ್ತು ಆ ಕುರಿತು ಸಂಕ್ಷಿಪ್ತ ಸಮಜಾಯಿಷಿ ಇಲ್ಲಿವೆ:
1. ಪ್ರಾಣಿ ಬಲಿ ಒಂದು ಕ್ರೂರ ಕೃತ್ಯವಲ್ಲವೇ? ಬಕ್ರೀದ್ ದಿನ ಮತ್ತು ಅದರ ಮುಂದಿನ ಎರಡು ದಿನಗಳಲ್ಲಿ, ಮುಸ್ಲಿಮರು ಪ್ರಾಣಿ ಬಲಿ ನೀಡುತ್ತಾರೆ. ಇದು ಮೂಢನಂಬಿಕೆಯಲ್ಲವೇ? ದೇವರಿಗೆ ಪ್ರಾಣಿ ಬಲಿಯ ಅಗತ್ಯ ಇದೆಯೇ?
ಪರ್ಷಿಯನ್, ಉರ್ದು, ಹೀಬ್ರೂ ಮುಂತಾದ ಹಲವು ಭಾಷೆಗಳಲ್ಲಿ ಬಳಕೆಯಲ್ಲಿರುವ ‘ಕುರ್ಬಾನಿ’ ಎಂಬ ಜನಪ್ರಿಯ ಪದವನ್ನು ಸಾಮಾನ್ಯವಾಗಿ ‘ತ್ಯಾಗ’ ಎಂದು ಅನುವಾದಿಸಲಾಗುತ್ತದೆ. ಇದು ಕುರ್ಬಾನಿ ಎಂಬ ಪದದ ನೇರ ಹಾಗೂ ವಿವಾದಾತೀತವಾದ ಅನುವಾದ. ಆದರೆ ಈ ಪದವನ್ನು ಸಾಂಪ್ರದಾಯಿಕವಾಗಿ ‘ಬಲಿದಾನ’ ಎಂದು ಕೂಡಾ ಅನುವಾದಿಸಲಾಗುತ್ತದೆ. ಈ ಅನುವಾದವನ್ನು ಓದುವವರು ಅಥವಾ ಕೇಳುವವರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳುವಾಗ ತುಸು ಎಚ್ಚರ ವಹಿಸಬೇಕಾಗುತ್ತದೆ. ಏಕೆಂದರೆ ಜೊತೆಜೊತೆಯಾಗಿ ಬಳಸಲಾಗುವ ‘ತ್ಯಾಗ’ ಮತ್ತು ‘ಬಲಿದಾನ’ ಎಂಬ ಪದಗಳು ಜೋಡಿ ಪದಗಳಂತೆ ಕೇಳಿಸುತ್ತವೆಯಾದರೂ ‘ಬಲಿ’ ಎಂಬ ಪದಕ್ಕೆ ತನ್ನದೇ ಆದ ಒಂದು ಇತಿಹಾಸ ಮತ್ತು ಒಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇದೆ. ಭಾರತ ಸಮೇತ
ಜಗತ್ತಿನ ಎಷ್ಟೋ ಭಾಗಗಳಲ್ಲಿ ದೇವರನ್ನು, ಕಾಲ್ಪನಿಕ ಭೂತ ಪ್ರೇತಗಳನ್ನು, ಪಿಶಾಚಿಯನ್ನು, ಮಾರಿಯನ್ನು ಅಥವಾ ಸತ್ತವರ ಆತ್ಮಗಳನ್ನು ಮೆಚ್ಚಿಸಲಿಕ್ಕಾಗಿ ಪಕ್ಷಿ, ಪ್ರಾಣಿಗಳನ್ನು ಮಾತ್ರವಲ್ಲ ಕೆಲವೊಮ್ಮೆ ಸಾಕ್ಷಾತ್ ಮಾನವ ಜೀವವನ್ನೇ ಬಲಿಕೊಟ್ಟು ಬಿಡುವ ಸಂಪ್ರದಾಯ ಎಲ್ಲ ಕಾಲಗಳಲ್ಲೂ ಕಂಡು ಬಂದಿದೆ. ಬಕ್ರೀದ್ ದಿನ ಅಥವಾ ಅದರ ಮುಂದಿನ ಎರಡು ದಿನಗಳ ಅವಧಿಯಲ್ಲಿ ನಿರ್ದಿಷ್ಟ ಪ್ರಾಣಿಗಳನ್ನು, ನಿರ್ದಿಷ್ಟ ವಿಧಾನದಿಂದ ವಧಿಸಿ ಅದರ ಮಾಂಸವನ್ನು ಹಂಚುವ ಪ್ರಕ್ರಿಯೆಯನ್ನು ‘ಬಲಿದಾನ’ ಎಂದು ಕರೆದಾಗ ಅದನ್ನು ಕೇಳಿದವರು ಈ ಪ್ರಕ್ರಿಯೆಯನ್ನು ಕೂಡಾ ಅದೇ ಹಳೆಯ ಸಂಪ್ರದಾಯದ ಜೊತೆ ಜೋಡಿಸಿ ಬಿಡುವ ಅಪಾಯವಿದೆ. ಬಕ್ರೀದ್ ಸಂದರ್ಭದಲ್ಲಿ ನಡೆಯುವ ಪ್ರಾಣಿ ವಧೆ ಮತ್ತು ಅದರ ಮಾಂಸದ ವಿತರಣೆಯ ಪ್ರಕ್ರಿಯೆಗೆ ಪ್ರಸ್ತುತ ‘ಬಲಿ’ ಸಂಪ್ರದಾಯದೊಂದಿಗೆ ಯಾವ ನಂಟೂ ಇಲ್ಲ. ನಿಜವಾಗಿ ಯಾವುದೇ ಜೀವವನ್ನು ದೇವರಿಗೆ ಅರ್ಪಿಸುವ ಕಲ್ಪನೆಯೇ ಇಸ್ಲಾಮ್ ಧರ್ಮದಲ್ಲಿ ಇಲ್ಲ. ಇದನ್ನು ಕುರ್ಆನ್ ನಲ್ಲಿ ಯಾವುದೇ ಸಂದೇಹಕ್ಕೆ ಎಡೆ ಇಲ್ಲದಷ್ಟು ಸ್ಪಷ್ಟವಾಗಿ ಸಾರಲಾಗಿದೆ:
ಅವುಗಳ (ಬಲಿ ಪ್ರಾಣಿಗಳ) ಮಾಂಸವಾಗಲಿ, ಅವುಗಳ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮಿಂದ ಅವನಿಗೆ ತಲುಪು ವುದು (ನಿಮ್ಮ) ಧರ್ಮನಿಷ್ಠೆ ಮಾತ್ರ..... ೨೨:೩೭ ಕುರ್ಆನ್ನಲ್ಲಿರುವ ಇಬ್ರಾಹೀಂ(ಅ) ಅವರ ವೃತ್ತಾಂತವನ್ನು ತುಸು ಗಮನಿಸಿ ನೋಡಿದರೆ ಅಲ್ಲಿ, ಅವರು ತಮ್ಮ ಪುತ್ರನ ಜೀವವನ್ನು ದೇವರಿಗೆ ಅರ್ಪಿಸುತ್ತಿರುವುದಾಗಿ ಸ್ವಪ್ನ ಕಂಡಿದ್ದರೇ ಹೊರತು, ಪುತ್ರನನ್ನು ಬಲಿ ಅರ್ಪಿಸಬೇಕೆಂಬ ಯಾವುದೇ ದೇವಾದೇಶವನ್ನು ಅವರಿಗೆ ನೀಡ ಲಾಗಿರಲಿಲ್ಲ. ಹಾಗೆಯೇ ಅವರು ಪುತ್ರನ ಜೀವಾರ್ಪಣೆಗೆ ಮುಂದಾದಾಗ ದೇವರೇ ಅವರನ್ನು ತಡೆದ ಪ್ರಸ್ತಾಪ ಕುರ್ಆನ್ನಲ್ಲಿದೆ. ಆದ್ದರಿಂದ ಆ ಘಟನೆಯನ್ನು ತ್ಯಾಗ ಸನ್ನದ್ಧತೆಗೆ ಉದಾಹರಣೆಯಾಗಿಸಬಹುದೇ ಹೊರತು ಜೀವ ಬಲಿಗೆ ಆಧಾರವಾಗಿಸಲು ಸಾಧ್ಯವಿಲ್ಲ.
ಕುರ್ಬಾನಿಯ ಮೂಲಕ ಒಂದೆಡೆ ಇಬ್ರಾಹೀಮರ ತ್ಯಾಗಸನ್ನದ್ಧತೆ ಯನ್ನು ಸ್ಮರಿಸಿ ಅದರಿಂದ ಸ್ಫೂರ್ತಿ ಪಡೆಯಲಾಗುತ್ತದೆ. ಇನ್ನೊಂದೆಡೆ ಅದೇ ಘಟನೆಯನ್ನು ಸ್ಮರಿಸುವ ಹೆಸರಲ್ಲಿ ಲಕ್ಷಾಂತರ ಮಾಂಸಾಹಾರಿ ಗಳಿಗೆ ಅವರ ನೆಚ್ಚಿನ ಆಹಾರವನ್ನು ಉಡುಗೊರೆ ಅಥವಾ ದಾನದ ರೂಪದಲ್ಲಿ ನೀಡಲಾಗುತ್ತದೆ.
2. ಕುರ್ಆನ್ನಲ್ಲಿ ಇಬ್ರಾಹೀಮರು (ಅ) ವಿಗ್ರಹಗಳನ್ನು ಕೆಡವಿದ ಪ್ರಸ್ತಾಪವಿದೆ. ಅವರ ಆ ಕೃತ್ಯ ತಪ್ಪಲ್ಲವೇ?
ಕುರ್ಆನ್ನಲ್ಲಿರುವ ಇಬ್ರಾಹೀಂ (ಅ) ಅವರ ಇತಿಹಾಸವನ್ನು ತುಸು ಸೂಕ್ಷ್ಮವಾಗಿ ನೋಡಿದರೆ ಇಂತಹ ಹಲವು ಅನುಮಾನಗಳಿಗೆ ಪರಿಹಾರ ಸಿಕ್ಕಿ ಬಿಡುತ್ತದೆ.
ಇಬ್ರಾಹೀಮರು ತಮ್ಮ ಬಾಲ್ಯದಲ್ಲಿ ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಯಾಗಿರಲಿಲ್ಲ. ಅವರು ಒಬ್ಬ ಪುರೋಹಿತನ ಪುತ್ರನಾಗಿ ಜನಿಸಿದ್ದರು. ಆತ ಸ್ವತಃ ತನ್ನ ಕೈಯಾರೆ ವಿಗ್ರಹಗಳನ್ನು ತಯಾರಿಸಿ ಅವುಗಳಲ್ಲಿ ದೇವತ್ವ ಇದೆ ಎಂದು ಜನರನ್ನು ನಂಬಿಸಿ ಜನರನ್ನು ಆ ವಿಗ್ರಹಗಳ ಭಕ್ತರಾಗಿ ಮಾರ್ಪಡಿಸುತ್ತಿದ್ದನು. ಬಾಲ್ಯದಲ್ಲೇ ಸತ್ಯ ಶೋಧಕರಾಗಿದ್ದ ಇಬ್ರಾಹೀಮರಿಗೆ ತಮ್ಮ ತಂದೆಯ ಈ ಕೃತ್ಯಗಳು ತೀರಾ ಇಷ್ಟವಿರಲಿಲ್ಲ. ಆ ವಿಗ್ರಹಗಳನ್ನು ಪೂಜಿಸಲು ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಆದ್ದರಿಂದ ಅವರು ಆ ವಿಗ್ರಹಗಳ ದೇವತ್ವವನ್ನು ತಿರಸ್ಕರಿಸಿದರು. ಕುರ್ಆನ್ನಲ್ಲಿ ಪ್ರಸ್ತಾಪಿಸಿರುವ ಪ್ರಕಾರ, ಸತ್ಯಶೋಧ ನೆಯ ಹಾದಿಯಲ್ಲಿ, ಒಂದು ಹಂತದಲ್ಲಿ ಅವರು ನಕ್ಷತ್ರಗಳಲ್ಲಿ, ಚಂದ್ರನಲ್ಲಿ ಮತ್ತು ಸೂರ್ಯನಲ್ಲಿ ದೇವತ್ವವನ್ನು ಹುಡುಕಲು ಶ್ರಮಿಸಿದ್ದರು. ತಮ್ಮ ತಂದೆಯೇ ನಿರ್ಮಿಸಿದ್ದ ವಿಗ್ರಹಾಲಯದೊಳಗೆ ಹೋಗಿ ಅಲ್ಲಿನ ವಿಗ್ರಹಗಳ ಜೊತೆ ಮಾತನಾಡಲು ಪ್ರಯತ್ನಿಸಿದ್ದರು. ಆ ವಿಗ್ರಹಗಳಲ್ಲಿ ಯಾವ ಸಾಮರ್ಥ್ಯವೂ ಇಲ್ಲ ಎಂಬುದು ಮನವರಿಕೆಯಾದಾಗ ಆಕ್ರೋಶಿತರಾಗಿ ಅವರು ಅವುಗಳನ್ನು ಕೆಡವಿದ್ದರು. ಆಗ ಅವರು ಯಾವುದೇ ಧರ್ಮದ ಪ್ರಚಾರಕರಾಗಲಿ, ಅನುಯಾಯಿಗಳಾಗಲಿ ಆಗಿರಲಿಲ್ಲ. ಇನ್ನೊಂದು ಧರ್ಮದವರ ವಿರುದ್ಧ ಘರ್ಷಣೆಗೆ ಇಳಿದಿರಲಿಲ್ಲ. ಅವರು ಕೇವಲ ಒಬ್ಬ ಸತ್ಯಾರ್ಥಿಯಾಗಿದ್ದರು. ತಪ್ಪಾಗು ವುದು ಒಂದು ಧರ್ಮ ಅಥವಾ ಸಮುದಾಯದವರು ಇನ್ನೊಂದು ಧರ್ಮ ಅಥವಾ ಸಮುದಾಯದವರ ಆರಾಧನಾಲಯಕ್ಕೆ ಅಥವಾ ಆರಾಧ್ಯ ಮೂರ್ತಿಗಳಿಗೆ ಹಾನಿ ಮಾಡಿದಾಗ. ಇಲ್ಲಿ ಹಾಗೇನೂ ಆಗಿಲ್ಲ. ಇಲ್ಲಿ ಒಬ್ಬ ಸತ್ಯಾನ್ವೇಷಕ ಪುತ್ರ ತನ್ನ ತಂದೆಯ ಅನಾಚಾರಗಳ ವಿರುದ್ಧ ಬಂಡೆದ್ದಿದ್ದಾನೆ. ತನ್ನದೇ ತಂದೆಯ ಆರಾಧನಾಲಯದಲ್ಲಿ, ತನ್ನ ತಂದೆಯೇ ನಿರ್ಮಿಸಿ ಸ್ಥಾಪಿಸಿದ ವಿಗ್ರಹಗಳ ಜೊತೆ ಸಂವಾದಕ್ಕೆ ಶ್ರಮಿಸಿ ಯಾವುದೇ ಉತ್ತರ ಸಿಗದಿದ್ದಾಗ ಹತಾಶನಾಗಿ ತನ್ನ ಕೋಪ ತೀರಿಸಿದ್ದಾನೆ.
► ಎರಡೇ ಧಾರ್ಮಿಕ ಹಬ್ಬಗಳು
ಇತರ ಹಲವು ಧಾರ್ಮಿಕ ಸಮುದಾಯಗಳಿಗೆ ಹೋಲಿಸಿದರೆ, ಜಾಗತಿಕ ಮುಸ್ಲಿಮ್ ಸಮುದಾಯದಲ್ಲಿ ಹಬ್ಬಗಳ ಸಂಖ್ಯೆ ತುಂಬಾ ಕಡಿಮೆ. ಇತರ ಹಲವರು ಪ್ರತೀ ವರ್ಷ ಹತ್ತಾರು ಹಬ್ಬಗಳನ್ನು ಆಚರಿಸುವಾಗ ಮುಸ್ಲಿಮರು ಆಚರಿಸುವುದು ಕೇವಲ ಎರಡು ಹಬ್ಬಗಳನ್ನು. ಮೊದಲನೆಯದು, ಚಂದ್ರಮಾನ ವರ್ಷದ ರಮಝಾನ್ ಎಂಬ ಒಂಭತ್ತನೇ ತಿಂಗಳುದ್ದಕ್ಕೂ ಉಪವಾಸ ಆಚರಿಸಿ ಆ ತಿಂಗಳು ಮುಗಿದ ಬೆನ್ನಿಗೇ, ಶವ್ವಾಲ್ ಎಂಬ ಹತ್ತನೇ ತಿಂಗಳ ಮೊದಲ ದಿನ ಆಚರಿಸಲಾಗುವ ಈದುಲ್ ಫಿತರ್. ಎರಡನೆಯದು, ಚಂದ್ರಮಾನ ವರ್ಷದ ಕೊನೆಯ ತಿಂಗಳಾಗಿರುವ ದುಲ್ಹಜ್ನ ೧೦ನೇ ದಿನ ಆಚರಿಸಲಾಗುವ ‘ಈದುಲ್ ಅಝ್ಹಾ’ ಅಥವಾ ಬಕ್ರೀದ್. ಇದನ್ನು ‘ಈದುಲ್ ಅಕ್ಬರ್’ ಅಥವಾ ‘ದೊಡ್ಡ ಹಬ್ಬ’ ಎಂದೂ ಕರೆಯಲಾಗುತ್ತದೆ.
► ಮದ್ಯ ಮುಕ್ತ, ಪಟಾಕಿ ಮುಕ್ತ ಹಬ್ಬ
ಮುಸ್ಲಿಮರ ಎರಡೂ ಹಬ್ಬಗಳ ಸಂಭ್ರಮಗಳಲ್ಲಿ ಮದ್ಯ, ಸಿಡಿಮದ್ದುಗಳ ಪಾತ್ರವಿಲ್ಲ ಎನ್ನುವುದು ಇನ್ನೊಂದು ವಿಶೇಷ. ನಿತ್ಯ ಕುಡಿಯದವರೂ ಹಬ್ಬದ ದಿನ ಕುಡಿಯುವುದುಂಟು. ಸಿಡಿಮದ್ದನ್ನು ಖಂಡಿಸುವವರು ಕೂಡಾ ಹಬ್ಬದ ದಿನ ಸಿಡಿ ಮದ್ದು ಬಳಸುವುದುಂಟು. ಮುಸ್ಲಿಮರ ಪಾಲಿಗೆ ಇವೆರಡೂ ಹಬ್ಬದ ದಿನ ಮಾತ್ರವಲ್ಲ ಇತರ ದಿನಗಳಲ್ಲೂ ನಿರ್ಬಂಧಿತವಾಗಿವೆ. ಈ ಎರಡು ಸಾಧನಗಳಿಲ್ಲದೆ ಹಬ್ಬದ ಸಂಭ್ರಮ ಪೂರ್ಣವಾಗುವುದು ತಾನೇ ಹೇಗೆ ಎಂದು ಕೆಲವರು ಅಚ್ಚರಿಪಡುವು ದುಂಟು. ನಿಜವಾಗಿ, ಅಪಾಯ, ಹಾನಿ ಮತ್ತು ಅಪವ್ಯಯಗಳನ್ನು ನೇರವಾಗಿ ಪ್ರತಿನಿಧಿಸುವ ಈ ಅನಿಷ್ಟಗಳ ಅನುಪಸ್ಥಿತಿಯೇ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.
► ಹಂಚಿದರೆ ಹೆಚ್ಚುವ ಸಂಭ್ರಮ, ಸಡಗರ
ನೈಜ ಸಂಭ್ರಮ ಇರುವುದು ಸಂತಸವನ್ನು ಹಂಚಿಕೊಳ್ಳುವುದರಲ್ಲಿ ಎಂಬ ನಂಬಿಕೆಯ ಆಧಾರದಲ್ಲಿ ಮುಸ್ಲಿಮರು ತಮ್ಮ ಎರಡೂ ಹಬ್ಬಗಳಲ್ಲಿ ಸಂತಸ ಹಂಚುವ ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಊರಿನ ಎಲ್ಲ ಮುಸಲ್ಮಾನರು ಮಸೀದಿ ಅಥವಾ ಈದ್ಗಾದಲ್ಲಿ ಸೇರುತ್ತಾರೆ. ಮಸೀದಿಯಲ್ಲಿ ಸೇರಿದವರು ಪರಸ್ಪರ ಈದ್ ಮುಬಾರಕ್ ಹೇಳುತ್ತಾ ಒಬ್ಬರನ್ನೊಬ್ಬರು ತಬ್ಬಿಕೊಂಡು ಅವರ ಇಹ ಪರ ಹಿತಕ್ಕಾಗಿ ಪ್ರಾರ್ಥಿ ಸುತ್ತಾರೆ. ನಮಾಝ್ ಜೊತೆಗೆ, ವಿದ್ವಾಂಸರು ಎಲ್ಲ ಸಮಾಜ ಬಾಂಧವರಿಗೆ ನೈತಿಕ ಮೌಲ್ಯಗಳು, ಅಧ್ಯಾತ್ಮ, ಇತಿಹಾಸ ಹಾಗೂ ಸಮಕಾಲೀನ ಕರ್ತವ್ಯಗಳನ್ನು ನೆನಪಿಸುವ ಉಪದೇಶಗಳನ್ನು ನೀಡುತ್ತಾರೆ. ಎಲ್ಲರೂ ಸೇರಿ ಮಾನವ ಕುಲದ ಸಮಗ್ರ ಹಿತ, ಶಾಂತಿ, ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಸಾಮೂಹಿಕವಾಗಿ ಪ್ರಾಥಿಸುತ್ತಾರೆ.
ರಮಝಾನ್ ಹಬ್ಬದಲ್ಲಿ ಹೆಚ್ಚು ಸ್ಥಿತಿವಂತರು ತಮಗಿಂತ ಕಡಿಮೆ ಅನುಕೂಲವುಳ್ಳವರ ಜೊತೆ ಬೆರೆತು ಫಿತರ್ ದಾನವನ್ನು ಹಂಚಿ ಸಂಭ್ರಮಿಸುತ್ತಾರೆ. ಈ ಚಟುವಟಿಕೆ ಮತ್ತದರ ಸಿದ್ಧತೆ ಹಬ್ಬದ ಒಂದೆರಡು ದಿನ ಆರಂಭವಾಗಿ ಹಬ್ಬದ ದಿನ ಪೂರ್ಣಗೊಳ್ಳುತ್ತದೆ. ಬಕ್ರೀದ್ ದಿನ ಮಾತ್ರವಲ್ಲ ಮುಂದಿನ ಎರಡು ದಿನಗಳಲ್ಲಿ, ಸಮಾಜದ ಸ್ಥಿತಿವಂತರು ತಮ್ಮ ಬಂಧು ಬಳಗದ, ಅಕ್ಕಪಕ್ಕದ ಮತ್ತು ತಮಗಿಂತ ಕಡಿಮೆ ಸ್ಥಿತಿವಂತರ ಪೈಕಿ ಮಾಂಸಾಹಾರಿಗಳಿಗೆ ಮಾಂಸ ಹಂಚುವ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ.
ಎರಡೂ ಹಬ್ಬಗಳ ದಿನ ಮತ್ತು ಅದರ ಆನಂತರದ ಒಂದೆರಡು ದಿನಗಳಲ್ಲಿ ಮುಸ್ಲಿಮರು ಕುಟುಂಬ ಸಮೇತ ತಮ್ಮ ಬಂಧುಗಳ, ಮಿತ್ರರ ಮತ್ತು ಪರಿಚಯಸ್ಥರ ಮನೆಗಳಿಗೆ ಭೇಟಿ ನೀಡಿ, ಉಡುಗೊರೆ ಗಳನ್ನು ಹಂಚಿಕೊಂಡು ಪರಸ್ಪರ ಈದ್ ಮುಬಾರಕ್ ಹಾರೈಸುತ್ತಾರೆ. ಹೀಗೆ ಎಲ್ಲ ಮನೆಗಳಲ್ಲೂ ಆತಿಥ್ಯ ಮತ್ತು ಸತ್ಕಾರವೇ ಹಬ್ಬದ ದಿನದ ಒಂದು ಪ್ರಧಾನ ಚಟುವಟಿಕೆಯಾಗಿ ಬಿಡುತ್ತದೆ.
ಎರಡು ಹಬ್ಬಗಳ ಸನ್ನಿವೇಶದಲ್ಲೂ ಮುಸ್ಲಿಮರು ತಮ್ಮ ಮನೆ ಗಳಲ್ಲೂ, ಮಸೀದಿಗಳಲ್ಲೂ, ಹೊರಗೆ ತಿರುಗಾಡುತ್ತಿರುವಾಗಲೂ, ಪದೇ ಪದೇ ಜೋರಾಗಿಯೂ ಮೌನವಾಗಿಯೂ ‘ಅಲ್ಲಾಹು ಅಕ್ಬರ್’, ‘ಅಲ್ಲಾಹು ಅಕ್ಬರ್’ ಎನ್ನುತ್ತಾ, ವಿಶ್ವದೊಡೆಯನ ಮಹಿಮೆಯನ್ನು ಕೊಂಡಾಡುತ್ತಾರೆ. ಈ ಮೂಲಕ ಅವರು ಹಬ್ಬದ ಸಡಗರದಲ್ಲಿ ದೇವರನ್ನು ಮರೆತು ಬಿಡುವ ಸಂಭಾವ್ಯ ದುರಂತದಿಂದ ಮುಕ್ತರಾಗುತ್ತಾರೆ. ಮಾತ್ರವಲ್ಲ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹಬ್ಬದ ದಿನ ದೇವರನ್ನು ಇನ್ನೂ ಹೆಚ್ಚು ಸ್ಮರಿಸುತ್ತಾರೆ.
► ಎಲ್ಲ ಬದ್ಧತೆ ಮತ್ತು ಬಾಧ್ಯತೆಗಳನ್ನು ನೆನಪಿಸುವ ಹಬ್ಬಗಳು
ಮುಸ್ಲಿಮರ ಎರಡೂ ಹಬ್ಬಗಳ ಒಂದು ವಿಶೇಷತೆ ಏನೆಂದರೆ ಈ ಹಬ್ಬಗಳು ಅವರ ಪಾಲಿಗೆ ಮೈ ಮರೆಯುವ ಸಂದರ್ಭಗಳಾಗಿರುವುದಿಲ್ಲ. ಅವು ಅವರು ಮರೆತಿರಬಹುದಾದ ಹಲವು ಸತ್ಯಗಳನ್ನು ನೆನಪಿಸಿಕೊಳ್ಳುವ ಸಂದರ್ಭಗಳಾಗಿರುತ್ತವೆ. ಹಾಗೆಯೇ ಅವು, ಹಳತಾಗಿರಬಹುದಾದ ಹಲವು ಬದ್ಧತೆಗಳನ್ನು ನವೀಕರಿಸಿಕೊಳ್ಳುವ ಸಂದರ್ಭವಾಗಿ ರುತ್ತದೆ. ಆದ್ದರಿಂದಲೇ ನಿತ್ಯ ಐದು ಹೊತ್ತು ನಮಾಝ್ ಸಲ್ಲಿಸುವ ಮುಸಲ್ಮಾನರು ಹಬ್ಬದ ದಿನ ಹೆಚ್ಚುವರಿಯಾಗಿ ಇನ್ನೊಂದು ಹೊತ್ತು ನಮಾಝ್ ಸಲ್ಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಹಲವು ಮಸೀದಿಗಳಿರುವ ಊರುಗಳಲ್ಲಿ ಹಬ್ಬದ ನಮಾಝನ್ನು ಒಂದೇ ಕಡೆ ಸಲ್ಲಿಸುತ್ತಾರೆ.
ಪ್ರಸ್ತುತ ಹಬ್ಬದ ನಮಾಝ್ನ ಸಂದರ್ಭದಲ್ಲಿ, ವಿದ್ವಾಂಸರು ಎಲ್ಲ ಸಮಾಜ ಬಾಂಧವರಿಗೆ, ನೈತಿಕ ಮೌಲ್ಯಗಳು, ಅಧ್ಯಾತ್ಮ, ಇತಿಹಾಸ ಹಾಗೂ ಸಮಕಾಲೀನ ಕರ್ತವ್ಯಗಳನ್ನು ನೆನಪಿಸುವ ಉಪದೇಶಗಳನ್ನು ನೀಡುತ್ತಾರೆ. ಎಲ್ಲರೂ ಸೇರಿ ಮಾನವ ಕುಲದ ಸಮಗ್ರ ಹಿತ, ಶಾಂತಿ, ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸುತ್ತಾರೆ.
► ಹಬ್ಬದ ಹಿಂದಿನ ಇತಿಹಾಸ
ಬಕ್ರೀದ್ ಹಿನ್ನೆಲೆಯಲ್ಲಿರುವ ಇತಿಹಾಸವನ್ನು ಹೇಳುವಾಗ ಹೆಚ್ಚಿನವರು ಅದನ್ನು ಕಥೆಯಾಗಿಸಿ ಬಿಡುತ್ತಾರೆ. ಕಥೆಯಾಗಿ ಬಿಟ್ಟಮೇಲೆ ವಾಸ್ತವ, ನಂಬಿಕೆ, ಕಲ್ಪನೆಗಳೆಲ್ಲಾ ಬೆರೆತು ಬಿಡುತ್ತವೆ. ಕುರ್ಆನ್ ನಲ್ಲಿ ಇಬ್ರಾಹೀಮರನ್ನು ಪ್ರಸ್ತಾಪಿಸಿರುವುದರ ಮುಖ್ಯ ಉದ್ದೇಶ ನಾಲ್ಕು ವಿಭಿನ್ನ ಸಮುದಾಯಗಳ ಜನರಿಗೆ, ನಿಮ್ಮ ಮೂಲ ಒಂದೇ ಎಂಬುದನ್ನು ನೆನಪಿಸಿ ಅವರಿಗೆ ಪರಸ್ಪರ ಏಕತೆಯ ಬುನಾದಿಯನ್ನು ಒದಗಿಸುವುದಾಗಿದೆ.
ಕ್ರಿ.ಶ. ೫೭೧ರ ಸುಮಾರಿಗೆ ಅರೇಬಿಯದ ಮಕ್ಕಾದಲ್ಲಿ ಜನಿಸಿದ ಪ್ರವಾದಿ ಮುಹಮ್ಮದ್ (ಸ) ಸಾರಿದ ಸಂದೇಶ, ವಿಶ್ವದ ಸೃಷ್ಟಿಕರ್ತನನ್ನು ಗುರುತಿಸಿ ಅವನಿಗೆ ಶರಣಾಗಿ ಅವನ ಮಾರ್ಗದರ್ಶನವನ್ನು ಅನುಸರಿಸುತ್ತಾ ಬದುಕಬೇಕೆಂಬ ಏಕದೇವತ್ವದ ಸಂದೇಶವಾಗಿತ್ತು. ಬಹುದೇವಾರಾಧನೆ ಹಾಗೂ ವಿಗ್ರಹಾರಾಧನೆ ತಪ್ಪು ಎಂದು ಅವರು ಪ್ರತಿಪಾದಿಸಿದರು. ಅವರ ಈ ಸಂದೇಶಕ್ಕೆ ಅವರ ಊರವರು ಮಾತ್ರವಲ್ಲ ಸ್ವತಃ ಅವರ ಕುಲದವರ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅವರ ಊರವರು ಮತ್ತು ಕುಲದವರೆಲ್ಲಾ ಇದು
ಯಾವುದೋ ಹೊಸ ಸಂದೇಶ ಎಂಬಂತೆ ಅದನ್ನು ವಿರೋಧಿಸತೊಡ ಗಿದರು. ಅತ್ತ ಯೆಹೂದಿ ಮತ್ತು ಕ್ರೈಸ್ತ ಮತಸ್ಥರು ಕೂಡ, ಏಕ ದೇವತ್ವವೇ ತಮ್ಮ ಧರ್ಮಗಳ ಮೂಲ ತತ್ವ ಎಂಬುದನ್ನು ಮರೆತು ಅದನ್ನು ತಿರಸ್ಕರಿಸಿದರು.
ಇಂತಹ ಸನ್ನಿವೇಶದಲ್ಲಿ ೧. ಮುಹಮ್ಮದ್ (ಸ) ಅವರ ಅನುಯಾಯಿಗಳಾದ ಮುಸ್ಲಿಮರು, ೨. ಬಹುದೇವಾರಾಧಕರಾಗಿದ್ದ ಅರಬ್ ಕುಲಗೋತ್ರಗಳ ಜನರು (ಹಾಗೂ ತಮ್ಮ ಧರ್ಮಗಳ ಮೂಲ ತತ್ವಾದರ್ಶಗಳನ್ನು ಮರೆತಿದ್ದ) ೩. ಕ್ರೈಸ್ತರು ಮತ್ತು ೪. ಯೆಹೂದಿಗಳು - ಹೀಗೆ ನಾಲ್ಕು ಸಮುದಾಯಗಳನ್ನು ಒಂದಾಗಿಸಲಿಕ್ಕಾಗಿ ಕುರ್ಆನ್ನಲ್ಲಿ ಇಬ್ರಾಹೀಂ(ಅ)ರ ಚರಿತ್ರೆಯನ್ನು ನೆನಪಿಸಲಾಯಿತು. ಸುಮಾರು ಕ್ರಿ.ಪೂ. ೨೦೦೦ ದಲ್ಲಿ ಬದುಕಿದ್ದ ಇಬ್ರಾಹೀಂರನ್ನು ಪ್ರಸ್ತುತ ನಾಲ್ಕೂ ಸಮುದಾಯಗಳ ಜನರು ಅಪಾರ ಗೌರವದಿಂದ ಕಾಣುತ್ತಿದ್ದರು. ಅವರು ಶುದ್ಧ ಏಕದೇವತ್ವದ ಪ್ರತಿಪಾದಕರಾಗಿದ್ದರು ಮತ್ತು ಆದರ್ಶ ಪುರುಷರಾಗಿದ್ದರು ಎಂಬುದನ್ನು ಅವರೆಲ್ಲರೂ ಒಪ್ಪುತ್ತಿದ್ದರು. ಸ್ವತಃ ಪ್ರವಾದಿ ಮುಹಮ್ಮದ್ (ಸ) ಇಬ್ರಾಹೀಮರ ವಂಶಸ್ಥರಾಗಿದ್ದರು. ಮಕ್ಕಾದ ಬಹುದೇವಾರಾಧಕರು ಕೂಡಾ ತಾವು ಇಬ್ರಾಹೀಂರ ಸಂತತಿ ಎಂದು ಹೇಳಿಕೊಳ್ಳುತ್ತಿದ್ದರು. ಅತ್ತ ಕ್ರೈಸ್ತ ಮತ್ತು ಯೆಹೂದಿ ಮತಸ್ಥರು ಕೂಡ ತಾವು ಇಬ್ರಾಹೀಮರ ಪರಂಪರೆಯವರೆಂದು ಅಭಿಮಾನ ಪಡುತ್ತಿದ್ದರು.
ನೀವೀಗ, ನಿಮ್ಮ ನಡುವಣ ಭಿನ್ನತೆಗಳನ್ನು ತೊರೆದು, ನೀವೆಲ್ಲಾ ಒಪ್ಪುವ ಇಬ್ರಾಹೀಮರ ಆದರ್ಶವನ್ನು ಅನುಸರಿಸಿರಿ, ಅವರ ಪರಂಪರೆಯನ್ನು ಮುಂದುವರಿಸಿರಿ - ಶುದ್ಧ ಏಕದೇವತ್ವದ ಪಾಲಕರಾಗಿರಿ ಎಂದು ಅವರೆಲ್ಲರಿಗೆ ಕುರ್ಆನ್ ಕರೆ ನೀಡಿತು. ಈ ಹಿನ್ನೆಲೆಯಲ್ಲಿ ಇಬ್ರಾಹೀಂ(ಅ) ಅವರ ಬದುಕಿನ ದೃಶ್ಯಾವಳಿಗಳನ್ನು ಈ ನಾಲ್ಕೂ ಸಮುದಾಯಗಳ ಮುಂದಿಡುವುದು ಅವಶ್ಯಕವಾಗಿತ್ತು.
► ಹಜ್ ಎಂಬ ವಿಶ್ವಸಮ್ಮೇಳನದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಸಹಭಾಗಿತ್ವ
ಮುಸ್ಲಿಮರಲ್ಲಿ ಸ್ಥಿತಿವಂತರು ಜೀವನದಲ್ಲೊಮ್ಮೆ ಮಕ್ಕಾದಲ್ಲಿ ಸೇರಿ ಇಬ್ರಾಹೀಂ(ಅ) ಅವರ ಬದುಕಿನ ಹಲವು ನಿರ್ಣಾಯಕ ಘಟನೆಗಳನ್ನು ಸ್ಮರಿಸಿ, ಕೆಲವನ್ನು ಅನುಸರಿಸಿ, ಮತ್ತೆ ಕೆಲವನ್ನು ಅನುಕರಿಸಿ ಅದರಿಂದ ಸ್ಫೂರ್ತಿ ಪಡೆಯುವುದುಂಟು. ಹಜ್ ಎಂಬ ಈ ವಿಶ್ವ ಸಮ್ಮೇಳನ ನಡೆಯುವುದು ದುಲ್ ಹಜ್ ತಿಂಗಳಲ್ಲಿ. ಸುಮಾರು ಐದು ದಿನಗಳ ಹಜ್ ಸಂಬಂಧಿ ಚಟುವಟಿಕೆಗಳು ದುಲ್ ಹಜ್ ತಿಂಗಳ ೮ನೇ ತಾರೀಕಿಗೆ ಆರಂಭಗೊಂಡು ೧೩ನೇ ತಾರೀಕಿನಂದು ಪೂರ್ಣಗೊಳ್ಳುತ್ತದೆ. ಸುಮಾರು ೧೮೦ ಕೋಟಿಯಷ್ಟು ಜನಸಂಖ್ಯೆ ಇರುವ ಮುಸ್ಲಿಮ್ ಸಮುದಾಯದ ಕೇವಲ ಕೆಲವು ಲಕ್ಷ ಮಂದಿಗೆ ಮಾತ್ರ ಪ್ರತಿವರ್ಷ ‘ಹಾಜಿ’ಗಳಾಗಿ ಹಜ್ನಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗುತ್ತದೆ. ಉಳಿದವರು ಮಕ್ಕಾದಿಂದ ತುಂಬಾ ದೂರದ ತಮ್ಮ ಊರುಗಳಲ್ಲೇ ಇದ್ದುಕೊಂಡು ಕೆಲವು ಸಾಂಕೇತಿಕ ಚಟುವಟಿಕೆಗಳ ಮೂಲಕ ಹಾಜಿಗಳ ಜೊತೆ ಸೇರಿಕೊಳ್ಳುತ್ತಾರೆ. ಅನೇಕರು ದುಲ್ ಹಜ್ ತಿಂಗಳ ಮೊದಲ ೯ ದಿನ ಉಪವಾಸ ಆಚರಿಸುತ್ತಾರೆ. ಅದು ಸಾಧ್ಯ
ವಾಗದವರು ‘ಅರಫಾ ದಿನ’ ಅಂದರೆ ೯ನೇ ದಿನ ಉಪವಾಸ ಆಚರಿಸು ತ್ತಾರೆ. ಹಬ್ಬದ ಮೂಲಕ ಜಗತ್ತಿನ ಎಲ್ಲ ಮುಸ್ಲಿಮರು ಹಾಜಿಗಳ ಜೊತೆ ಹಜ್ ನಲ್ಲಿ ಸಹಭಾಗಿಗಳಾಗುತ್ತಾರೆ. ಹಾಗೆಯೇ ಸ್ಥಿತಿವಂತರು, ಹಜ್ ನ ಭಾಗವಾದ ಕುರ್ಬಾನಿಯನ್ನು ತಮ್ಮತಮ್ಮ ಊರುಗಳಲ್ಲೇ ನಡೆಸಿ ಆ ಮೂಲಕ ಹಜ್ನಲ್ಲಿ ಪಾಲುದಾರರಾಗುತ್ತಾರೆ. ಕುರ್ಬಾನಿ ಮಾಡಲು ನಿರ್ಧರಿಸಿದವರು ಆ ತಿಂಗಳಲ್ಲಿ ಕುರ್ಬಾನಿ ನಡೆಯುವ ತನಕವೂ (ಅಂದರೆ ಸುಮಾರು ೯ ರಿಂದ ೧೨ ದಿನ) ಕ್ಷಾರ (KSHAURA ಕ್ಷವುರ) ಮಾಡಿಸಿಕೊಳ್ಳುವುದಿಲ್ಲ. ಉಗುರು ಕತ್ತರಿಸುವುದಿಲ್ಲ.
ಕುರ್ಬಾನಿ ಅರ್ಪಿಸಲಾದ ಪ್ರಾಣಿಗಳ ಮಾಂಸವನ್ನು ಬಂಧು ಮಿತ್ರರು, ಬಡವರು, ನಿರಾಶ್ರಿತರು ಮುಂತಾದವರಿಗೆ ಹಂಚಲಾಗುತ್ತದೆ.
ಇತ್ತೀಚೆಗೆ ಈ ಚಟುವಟಿಕೆಯು ಬಹಳ ಸಂಘಟಿತ ಸ್ವರೂಪದಲ್ಲಿ ನಡೆಯುತ್ತದೆ. ಒಂದು ನಾಡಿನ ಕುರ್ಬಾನಿಯ ಮಾಂಸವನ್ನು ತೀರಾ ಅಲ್ಪಾವಧಿಯಲ್ಲಿ ದೂರದ ಬೇರಾವುದೋ ನಾಡಿನ ಅರ್ಹರಿಗೆ ತಲುಪಿಸುವ ಏರ್ಪಾಟು ಮಾಡಲಾಗುತ್ತದೆ.
ಹೀಗೆ ಅನ್ನದಾನ, ವಸ್ತ್ರದಾನ, ವಸತಿ ದಾನ ಇತ್ಯಾದಿಗಳಂತೆ ಕುರ್ಬಾನಿಯು ಅರ್ಹ ಮಾಂಸಾಹಾರಿಗಳಿಗೆ ಮಾಂಸ ದಾನ ಮಾಡುವ ಚಟುವಟಿಕೆಯಾಗಿ ಮಾರ್ಪಡುತ್ತದೆ.