ಏಕರೂಪ ನಾಗರಿಕ ಸಂಹಿತೆ ಭಾರತದ ಬಹುತ್ವಕ್ಕೆ ಮಾರಕ
ಫೈಲ್ ಫೋಟೋ
ಡಾ. ಬಿ.ಪಿ. ಮಹೇಶಚಂದ್ರ ಗುರು, ಮೈಸೂರು
ಭಾರತೀಯ ಸಂವಿಧಾನ ಒಳಗೊಳ್ಳುವ ಅಭಿವೃದ್ಧಿಗೆ ಪೂರಕವಾಗಿದ್ದರೆ, ಏಕತ್ವವನ್ನು ಪ್ರತಿಪಾದಿಸುವವರು ಸಮಾಜದ ಅಂಚಿಗೆ ನೂಕಲ್ಪಟ್ಟ ಜನವರ್ಗಗಳನ್ನು ಶೋಷಣೆಗೆ ಒಳಪಡಿಸುವ ಗೌಪ್ಯ ಕಾರ್ಯಸೂಚಿಯನ್ನು ಹೊಂದಿದ್ದಾರೆ. ಭಾರತದ ಇತಿಹಾಸವನ್ನು ಅವಲೋಕಿಸಿದಾಗ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಪ್ರಜಾಸತ್ತೆಗಳಿಗೆ ಬಹುತ್ವ ಉಪಯುಕ್ತ ಜೀವನ ವಿಧಾನವೆಂಬುದು ಅರ್ಥವಾಗುತ್ತದೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತವು ಧರ್ಮ ನಿರಪೇಕ್ಷತೆಯನ್ನು ಬಿಟ್ಟುಕೊಟ್ಟರೆ ಅದು ಭಾರತ ದೇಶವೇ ಅಲ್ಲ ಎಂದು ಸಾಕಷ್ಟು ಹಿಂದೆಯೇ ಎಚ್ಚರಿಸಿದ್ದಾರೆ. ಬಹುತ್ವ ವಿರೋಧಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಕ್ಕೆ ಪ್ರಬಲ ಪ್ರತಿರೋಧ ಸ್ವದೇಶದಲ್ಲಿ ಮತ್ತು ವಿದೇಶಗಳಲ್ಲಿ ವ್ಯಕ್ತವಾಗಿದೆ. ಏಕರೂಪ ನಾಗರಿಕ ಸಂಹಿತೆಯಿಂದಾಗಿ ಭಾರತದ ವಂಚಿತ ಜನವರ್ಗಗಳು ಅಸಮಾನತೆ ಮತ್ತು ಅರಾಜಕತೆಗಳಿಗೆ ಬಲಿಪಶುಗಳಾಗುವ ಅಪಾಯವಿದೆ. ಧರ್ಮದ ಆಧಾರದ ಮೇಲೆ ನೆರೆಹೊರೆಯ ದೇಶಗಳ ಜನರಿಗೆ ಪೌರತ್ವ ಹಕ್ಕನ್ನು ನೀಡುವುದು ಭಾರತೀಯ ಸಂವಿಧಾನ ಅನುಚ್ಛೇದ 14ರ ಆಶಯಗಳಿಗೆ ತದ್ವಿರುದ್ಧವಾಗಿದೆ. ಹಿಂದಿನ ನಮ್ಮ ರಾಷ್ಟ್ರ ನಾಯಕರು ವಿಶಾಲ ಮನೋಧರ್ಮ ಹೊಂದಿದ್ದು ಬಹುತ್ವ ಮತ್ತು ದೇಶದ ಸಮಗ್ರತೆಗಳನ್ನು ಸುಸ್ಥಿರಗೊಳಿಸುವ ಸಲುವಾಗಿ ಭಾರತವನ್ನು ಒಂದು ದೇಶ ಮತ್ತು ಒಂದು ಧರ್ಮಕ್ಕೆ ಸೀಮಿತಗೊಳಿಸದೆ ಸಂವಿಧಾನದಲ್ಲಿ ಧರ್ಮನಿರಪೇಕ್ಷತೆ ಮತ್ತು ಬಹುತ್ವಗಳನ್ನು ಎತ್ತಿ ಹಿಡಿದಿದ್ದಾರೆ. ಮನುವಾದಿಗಳ ನೇತೃತ್ವದ ಎನ್ಡಿಎ ಸರಕಾರ 2024ರಲ್ಲಿ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಹುನ್ನಾರದ ಭಾಗವಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಸ್ಪಷ್ಟ ಸೂಚನೆ ನೀಡಿದೆ. ಇಂತಹ ಕ್ರಮ ಮುಸಲ್ಮಾನರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ತಾರತಮ್ಯಕ್ಕೆ ಗುರಿಪಡಿಸುತ್ತದೆ. ಇದು ಭಾರತೀಯ ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿರುವುದಾಗಿ ಸರ್ವೋಚ್ಚ ನ್ಯಾಯಾಲಯ ಎಸ್.ಆರ್.ಬೊಮ್ಮಾಯಿ ಮತ್ತು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸ್ಪಷ್ಟವಾಗಿ ತೀರ್ಪು ನೀಡಿದೆ.
ಡಾ. ಬಿ.ಪಿ. ಮಹೇಶಚಂದ್ರ ಗುರು, ಮೈಸೂರುಬಹಳಷ್ಟು ಮಾತನಾಡಿ ಅತ್ಯಲ್ಪಕೆಲಸ ಮಾಡುವುದು ಅಥವಾ ಏನೂ ಮಾಡದೆ ಇರುವುದು ಮೋದಿ ಸರಕಾರದ ಮಹಿಮೆಯೆಂಬುದು ಭಾರತೀಯರಿಗೆ ತಿಳಿದಿದೆ. ನಾಗರಿಕ ಹಕ್ಕುಗಳು ಮತ್ತು ಸಾಂವಿಧಾನಿಕ ರಕ್ಷಣೆಗಳಿಗಾಗಿ ಹೋರಾಟ ನಡೆಸುವ ಪ್ರಗತಿಪರರನ್ನು ದೇಶದ್ರೋಹಿಗಳೆಂದು ಬಿಂಬಿಸುವ, ಬೆದರಿಸುವ ಮತ್ತು ದಮನಗೊಳಿಸುವ ಪ್ರಭುತ್ವದ ಈ ಮನೋಸ್ಥಿತಿಯನ್ನು ವ್ಯಾಪಕವಾಗಿ ದೇಶ ವಿದೇಶಗಳಲ್ಲಿ ಖಂಡಿಸಲಾಗಿದೆ. ಇಂದು ಮೌಢ್ಯತೆಗಿಂತ ಮತಾಂಧತೆ ಭಾರತೀಯ ಪ್ರಜಾಪ್ರಭುತ್ವವನ್ನು ತೀವ್ರವಾಗಿ ಬಾಧಿಸುತ್ತಿರುವ ವ್ಯಾಧಿಯಾಗಿದೆ. ಅಂದು ಮೌಢ್ಯದ ಎದೆಗೆ ಗುಂಡು ಹೊಡೆಯಿರಿ ಎಂದು ಮಹಾನ್ ದಾರ್ಶನಿಕ ಕುವೆಂಪು ಕರೆ ನೀಡಿದ್ದರು.
ಪ್ರಧಾನಿ ನರೇಂದ್ರಮೋದಿ ಅವರು ಏಕರೂಪ ನಾಗರಿಕ ಸಂಹಿತೆಗಾಗಿ ಒತ್ತಾಯಿಸುತ್ತಿದ್ದಾರೆ ಮತ್ತು ಈ ವಿಷಯದ ಬಗ್ಗೆ ಮುಸ್ಲಿಮರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆಂದು ಪ್ರತಿಪಕ್ಷಗಳನ್ನು ದೂಷಿಸುತ್ತಿದ್ದಾರೆ. ಏಕರೂಪ ನಾಗರಿಕ ಸಂಹಿತೆಯು ಪ್ರಜಾಸತ್ತಾತ್ಮಕ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳ ಆಧಾರದ ಮೇಲೆ ಭಾರತೀಯ ಗಣರಾಜ್ಯವನ್ನು ಬಲಪಡಿಸುವ ಸಾಂವಿಧಾನಿಕ ಬದ್ಧತೆಯನ್ನು ಸೋಲಿಸುತ್ತದೆ. ಭಾರತದಲ್ಲಿ ಹಿಂದೂಗಳು ಏಕರೂಪದ ಪದ್ಧತಿಗಳು ಮತ್ತು ಆಚರಣೆಗಳನ್ನು ಹೊಂದಿಲ್ಲ. ಅಸಂಖ್ಯಾತ ಜಾತಿಗಳು ಮತ್ತು ಉಪ-ಜಾತಿಗಳು ತಮ್ಮದೇ ಆದ ನಂಬಿಕೆಗಳು ಮತ್ತು ಆಚರಣೆಗಳನ್ನು ಹೊಂದಿವೆ. ಮದುವೆ ಮತ್ತು ಮರು ಮದುವೆಯಾಗುವ ವಿಷಯದಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆಯಿಲ್ಲ. ಇತ್ತೀಚೆಗೆ ಜರುಗುತ್ತಿರುವ ಮರ್ಯಾದೆ ಹತ್ಯೆಗಳು ಮತ್ತು ಲವ್ ಜಿಹಾದ್ನಂತಹ ಪ್ರತಿಗಾಮಿ ಆಚರಣೆಗಳು ಮನುಕುಲಕ್ಕೆ ಒಳ್ಳೆಯದಲ್ಲ. ಸಂವಿಧಾನದ 44ನೇ ವಿಧಿಯಲ್ಲಿ ಉಲ್ಲೇಖಿಸಿರುವಂತೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಂಸತ್ತು ಕಾನೂನು ರೂಪಿಸಬೇಕೆಂದು ಸೂಚಿಸಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ನಾಗರಿಕ ಸಮಾಜದಲ್ಲಿ ಏಕರೂಪತೆಗೆ ಅಡ್ಡಿಯಾಗಿವೆ. ಸಾಮಾನ್ಯ ನಾಗರಿಕ ಮತ್ತು ದಂಡ ಸಂಹಿತೆಯು ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು ಎಂದು ಖಚಿತಪಡಿಸುತ್ತದೆಯೆಂದು ಹಿಂದೂ ಮೂಲಭೂತವಾದಿಗಳು ವಾದಿಸಿದ್ದಾರೆ. ಭಾರತೀಯ ಆಡಳಿತಗಾರರು ಮತ್ತು ನಾಗರಿಕರು ಸಂವಿಧಾನದ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳಬೇಕು, ಮೈಗೂಡಿಸಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳಬೇಕು. ಪ್ರಸಕ್ತ ಸಂದರ್ಭದಲ್ಲಿ ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಪ್ರಜಾಸತ್ತಾತ್ಮಕವಾಗಿ ಹಿಮ್ಮೆಟ್ಟಿಸಬೇಕು. ಭಾರತದ ಶೋಷಿತ ಸಮುದಾಯಗಳು ಎಲ್ಲ ಅಸ್ಮಿತೆಗಳನ್ನು ಬದಿಗಿಟ್ಟು ಒಗ್ಗೂಡಿ ಹೋರಾಡಿದರೆ ಸಾಂವಿಧಾನಿಕ ಮೌಲ್ಯಗಳು ಮತ್ತು ಬಹುಜನ ಸಮುದಾಯಗಳ ರಕ್ಷಣೆ ಸಾಧ್ಯವಾಗುತ್ತದೆ.
ಭಾರತ ಗಣರಾಜ್ಯದಲ್ಲಿ ಧರ್ಮಾತೀತವಾಗಿ ಎಲ್ಲ ಪ್ರಜೆಗಳು ಏಕರೂಪ ನಾಗರಿಕ ಸಂಹಿತೆ ಹೊಂದುವುದು ಪ್ರಸಕ್ತ ಸಂಕೀರ್ಣ ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳಲ್ಲಿ ಪ್ರಾಯೋಗಿಕವಾಗಿ ಸಾಧುವಲ್ಲ. ಧರ್ಮನಿರಪೇಕ್ಷತೆ ರಕ್ಷಣೆಯಿಂದಲೇ ಭಾರತದಲ್ಲಿ ಭ್ರಾತೃತ್ವ ಮತ್ತು ಪ್ರಜೆಗಳ ಸಾರ್ವಭೌಮತ್ವವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಭಾರತವು ಸರ್ವಧರ್ಮಗಳ ಮತ್ತು ಸರ್ವಜನಾಂಗಗಳ ಶಾಂತಿಯ ತೋಟವಾಗಿ ಉಳಿಯಲು ಒಳಗೊಳ್ಳುವ ಅಭಿವೃದ್ಧಿ ನಿಜಕ್ಕೂ ರಾಜಮಾರ್ಗವಾಗಿದೆ. ಭಾರತದಲ್ಲಿ ಏಕಶ್ರೇಣಿಯ ಪೌರತ್ವವನ್ನು ರೂಪಿಸಿ ಅಲ್ಪಸಂಖ್ಯಾತರನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಹೊರದಬ್ಬುವ ಪ್ರವೃತ್ತಿ ಸಲ್ಲದು. ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ರಕ್ಷಿಸಿ ಭಾರತವನ್ನು ಪ್ರಬುದ್ಧ ರಾಷ್ಟ್ರವನ್ನಾಗಿ ರೂಪಿಸುವುದು ಸಮಸ್ತ ಭಾರತೀಯರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ