ಹೋರಾಟಗಾತಿಯೊಬ್ಬಳ ಕತೆ ‘ವಖಾರಿ ಧೂಸ’
- ಗೌರಿ ಚಂದ್ರಕೇಸರಿ, ಶಿವಮೊಗ್ಗ
ಆಳುವವರು ಮತ್ತು ಆಳಿಸಿಕೊಳ್ಳುವವರ ಮಧ್ಯದ ಸಂಘರ್ಷ ಇಂದು ನಿನ್ನೆಯದಲ್ಲ. ಬಡವ-ಬಲ್ಲಿದ, ಮೇಲು-ಕೀಳುಗಳೆಂಬ ಭೇದ-ಭಾವ ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ. ಉಳ್ಳವರ ಅಧಿಕಾರದ ಸೊಕ್ಕು, ಹಣದ ಮದವನ್ನು ಇಳಿಸಲು ಕೆಲವೊಮ್ಮೆ ಶೋಷಣೆಗೊಳಗಾಗುವ ವರ್ಗವು ಹೋರಾಟ, ಆಂದೋಲನಗಳೆಂಬ ಅಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ಇವರ ಹೋರಾಟದ ಹಾದಿ ಕಲ್ಲು-ಮುಳ್ಳುಗಳಿಂದ ಕೂಡಿರುತ್ತದೆ. ಕೆಲವೊಮ್ಮೆ ನ್ಯಾಯಕ್ಕಾಗಿ ಧ್ವನಿ ಎತ್ತಿದವರ ದಮನವೂ ಆಗಬಲ್ಲದು ಎಂಬುದನ್ನು ಹೇಳುತ್ತದೆ ‘ವಖಾರಿ ಧೂಸ’ ನಾಟಕ.
‘ವಖಾರಿ ಧೂಸ’ ಇದು ಮರಾಠಿ ಶಬ್ದವಾಗಿದ್ದು, ‘ಗೋದಾಮಿನ ಧೂಳು’ ಎಂಬರ್ಥವನ್ನು ಕೊಡುತ್ತದೆ. ನಿಪ್ಪಾಣಿ, ಅದರ ಸುತ್ತ ಮುತ್ತಲಿನ ಪ್ರದೇಶಗಳ ಬೀಡಿ ಕಾರ್ಮಿಕರ ಬವಣೆಗಳನ್ನು ಹೇಳುತ್ತದೆ ಈ ನಾಟಕ. ಮಾಲಕರ ಶೋಷಣೆಯನ್ನು ಸಹಿಸಿಕೊಂಡೇ ಬಂದ ಭೀಮವ್ವ ಗಟ್ಟಿಗಿತ್ತಿ. ಶೋಷಣೆಗೊಳಗಾಗಿ ಕುಡಿತ, ಮೋಜುಗಳಲ್ಲಿಯೇ ಬದುಕನ್ನು ದೂಡುತ್ತಿರುವ ತನ್ನ ಸಮುದಾಯದ ಜನರ ಬದುಕನ್ನು ಮೇಲೆತ್ತಬೇಕೆಂಬ ಕಳಕಳಿಯುಳ್ಳವಳು. ಬೀಡಿ ಕಾರ್ಖಾನೆಯ ಮಾಲಕರು ವಖಾರಿಗೆ ದುಡಿಯಲು ಬರುವ ಹೆಂಗಸರ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ತಮ್ಮ ದೇಹದ ಹಸಿವನ್ನು ಇಂಗಿಸಿಕೊಳ್ಳುವವರು. ಕಚ್ಚಾ ಮಾಲನ್ನು ಪೂರೈಸುವ ತಂಬಾಕು ಬೆಳೆಗಾರರಿಗೆ ತರಾವರಿಯಾಗಿ ಮೋಸ ಮಾಡುವವರು. ಕಾರ್ಮಿಕರಲ್ಲಿ ಹೋರಾಟದ ಕಿಚ್ಚನ್ನು ಹುಟ್ಟು ಹಾಕುವ ಭೀಮವ್ವ ಬೃಹತ್ ಪ್ರಮಾಣದಲ್ಲಿ ಆಂದೋಲನವನ್ನು ನಡೆಸಲು ಕಾರ್ಮಿಕರನ್ನು ಸಜ್ಜುಗೊಳಿಸುತ್ತಾಳೆ. ಇದರ ಸುಳಿವು ಸಿಕ್ಕ ಮಾಲಕರು, ವ್ಯಾಪಾರಿಗಳೆಲ್ಲ ಒಂದಾಗುತ್ತಾರೆ. ಆಂದೋಲನ ನಡೆದರೆ ಕಾರ್ಖಾನೆಗಳ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಕಾರ್ಮಿಕರ ನಾಯಕಿ ಭೀಮವ್ವಳನ್ನು ಮಟ್ಟ ಹಾಕಲು ನಾನಾ ವಿಧದಲ್ಲಿ ಬಲೆ ಹೆಣೆಯತ್ತಾರೆ. ಭೀಮವ್ವನ ಹೋರಾಟಕ್ಕೆ ಹೆಗಲು ಕೊಡಲು ನಿಂತ ಶಶಾಂಕ ದೇಶಪಾಂಡೆ ಎಂಬ ಕಾರ್ಮಿಕ ಹೋರಾಟಗಾರನ ದೌರ್ಬಲ್ಯಗಳನ್ನು ತಿಳಿದುಕೊಂಡು ಆತನನ್ನು ಬೆದರಿಸಿ, ವಿವಿಧ ಆಮಿಷಗಳನ್ನೊಡ್ಡುತ್ತಾರೆ. ಹೋರಾಟಗಾರನ ರೆಕ್ಕೆಗಳನ್ನು ಕತ್ತರಿಸುವಲ್ಲಿ ಯಶಸ್ವಿಯಾಗುತ್ತಾರೆ ಮಾಲಕರು. ಇದಕ್ಕೆಲ್ಲ ಬೆದರದ ಭೀಮವ್ವ ತನ್ನ ಅಚಲ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಆದರೆ ಸಮಯ ಸಾಧಿಸಿ ಭೀಮವ್ವಳನ್ನು ಹಾದಿಯ ಹೆಣವಾಗಿಸುತ್ತಾರೆ ಉಳ್ಳವರು. ಆಕೆಯ ಮಾರ್ಗದರ್ಶಿಯೂ ಹಿತೈಷಿಯೂ ಆದ ಸಾಧು ಬಾಬಾ ಭರವಸೆಯನ್ನು ಕಳೆದುಕೊಂಡ ಕಾರ್ಮಿಕರಲ್ಲಿ ಮತ್ತೆ ಹೋರಾಟದ ಕಿಚ್ಚನ್ನು ಹಚ್ಚುವ ಮೂಲಕ ನಾಟಕಕ್ಕೆ ಪರದೆ ಬೀಳುತ್ತದೆ.
ನಾಟಕದುದ್ದಕ್ಕೂ ಉಪಕತೆಯಂತೆ ಹಾಡುಗಳ ರೂಪದಲ್ಲಿ ಬಂದು ಹೋಗುವ ಸಂಗ್ಯಾ-ಬಾಳ್ಯಾ ನಾಟಕದ ಪ್ರಸಂಗಗಳು ಮುದಗೊಳಿಸುತ್ತವೆ. ನಂಬಿದ ಗೆಳೆಯನಿಂದಲೇ ಮೋಸ ಹೋಗಿ ಪ್ರಾಣ ಕಳೆದುಕೊಳ್ಳುವಂತೆ ಇಲ್ಲಿ ಭೀಮವ್ವ ಕೂಡ ತಾನು ನಂಬಿದ ತನ್ನ ಗೆಳೆಯನಿಂದಲೇ ಮೋಸ ಹೋಗುವ ಕತೆಯನ್ನು ಸೂಚ್ಯವಾಗಿ ಹೇಳಿದ್ದಾರೆ ಲೇಖಕರು. ಸಶಕ್ತ ನಾಟಕಗಳನ್ನು ಬರೆಯುವಲ್ಲಿ ನಿಸ್ಸೀಮರಾದ ಡಿ.ಎಸ್.ಚೌಗಲೆ ಅವರ ರಚನೆಯಾದ ‘ವಖಾರಿ ಧೂಸ’ ನಾಟಕ ಇತ್ತೀಚೆಗೆ ಶಿವಮೊಗ್ಗದ ಸಹ್ಯಾದ್ರಿ ರಂಗ ತರಂಗದ ಕಲಾವಿದರಿಂದ ಪ್ರಯೋಗಗೊಂಡಿತು. ಹಿರಿಯ ನಿರ್ದೇಶಕರಾದ ಕಾಂತೇಶ ಕದರಮಂಡಲಗಿ ಅವರ ನಿರ್ದೇಶನದಲ್ಲಿ ಈ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಉತ್ತರ ಕರ್ನಾಟಕದ ಗಡಸು ಭಾಷೆಯಿಂದ ಕೂಡಿದ ಸಂಭಾಷಣೆಗಳು, ಗೋಪಾಲ ಸ್ವಾಮಿ ಅವರ ನೆರಳು ಬೆಳಕು, ಸತೀಶ ಸಾಸ್ವೆಹಳ್ಳಿ ಅವರ ಪ್ರಸಾಧನ ನಾಟಕದ ಪ್ಲಸ್ ಪಾಯಿಂಟ್.