‘ವಾರ್ತಾಭಾರತಿ’ ಒಂದು ಅಜೆಂಡಾ ಪತ್ರಿಕೆ!
ಇತ್ತೀಚೆಗೆ ‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗುತ್ತಿರುವ ನನ್ನ ‘ಪಿಟ್ಕಾಯಣ’ ಅಂಕಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಸುಶಿಕ್ಷಿತರೊಬ್ಬರು ಅದು ‘‘ಅಜೆಂಡಾ ಡ್ರಿವನ್ ಪತ್ರಿಕೆ’’ ಎಂದು ಪ್ರತಿಕ್ರಿಯಿಸಿದರು. ಹೌದಲ್ಲ! ಏನು ಅಜೆಂಡಾ?!!
13-14 ವರ್ಷಗಳ ಹಿಂದಿನ ನೆನಪೊಂದು ಹಾದು ಹೋಯಿತು. ನಾನು ನನ್ನ ವೃತ್ತಿ ಆಸಕ್ತಿಯ ಕಾರಣಕ್ಕಾಗಿ ಪ್ರತಿದಿನ 7 ಮುದ್ರಿತ ದಿನಪತ್ರಿಕೆಗಳು ಮತ್ತು ಇನ್ನಷ್ಟು ಡಿಜಿಟಲ್ ಪತ್ರಿಕೆಗಳನ್ನು ಓದುವವನು/ಕಣ್ಣಾಡಿಸುವವನು. ನಾನು ನನ್ನ ಬೇರೆ ಆರು ಪತ್ರಿಕೆಗಳನ್ನು ಸರಬರಾಜು ಮಾಡುತ್ತಿರುವವರಿಗೆ ‘ವಾರ್ತಾಭಾರತಿ’ ತರಿಸಿಕೊಡಿ ಎಂದು ಹಲವು ಬಾರಿ ಹೇಳಿದರೂ ಅದು ಏನೇನೋ ಸಬೂಬುಗಳಿಂದಾಗಿ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ಒತ್ತಾಯಿಸಿ ಕೇಳಿದಾಗಲೂ ‘‘ಅದು ನಿಮಗೆ ಬೇಕೇ ಬೇಕಾ?’’ ಎಂಬ ಪ್ರಶ್ನೆ; ‘‘ಅದು ಅವರದ್ದು’’ ಎಂಬ ಅರಿವು; ‘‘ಇದು... ಅದಕ್ಕಿಂತ ಇದು ಒಳ್ಳೆಯದು’’, ಎಂಬ ಸಲಹೆ. ಕಡೆಗೆ, ನಾನು ‘ವಾರ್ತಾಭಾರತಿ’ ಸರಬರಾಜು ಮಾಡುವವರನ್ನೇ ಹುಡುಕಿ ಉಳಿದ ಪತ್ರಿಕೆಗಳನ್ನು ಸರಬರಾಜು ಮಾಡಲು ಹೇಳಬೇಕಾದೀತು ಎಂದ ಬಳಿಕ ನನ್ನ ಮನೆಗೆ ‘ವಾರ್ತಾಭಾರತಿ’ ಪ್ರತಿದಿನ ಸರಬರಾಜಾಗತೊಡಗಿತು. ಇದು ಒಂದೇ ಉದಾರಣೆ ಅಲ್ಲ, ಇನ್ನೂ ಕೆಲವೆಡೆ ಇಂತಹ ಪ್ರಸಂಗಗಳು ನನ್ನ ಕಿವಿಗೆ ಬಿದ್ದಿದೆ. ಇದು ‘ವಾರ್ತಾಭಾರತಿ’ಗೆ ಮಾತ್ರವಲ್ಲ. ಮುಂಗಾರು ಕಾಲದಿಂದಲೂ ಕರಾವಳಿಯಲ್ಲಿ ‘ಜಾಹೀರಾತು’ ಪತ್ರಿಕೆಗಳ ಎದುರು ‘ಸುದ್ದಿ’ ಪತ್ರಿಕೆಗಳಿಗೆ ಇದೇ ಪರಿಸ್ಥಿತಿ.
ಇದಲ್ಲವೇ ‘ಅಜೆಂಡಾ?’.
ಯಾಕೆ ‘ವಾರ್ತಾಭಾರತಿ’?
ನಾಡಿನಲ್ಲಿ ‘ಸುದ್ದಿ’ ಬಿಗಡಾಯಿಸಿರುವುದು ಹೊಸ ಸುದ್ದಿಯೇನಲ್ಲ. ಬಹಳ ವ್ಯವಸ್ಥಿತವಾಗಿ ಸುದ್ದಿ, ಸುದ್ದಿಕೋಣೆಗಳನ್ನು ಬಿಗಡಾಯಿಸಲಾಗಿದೆ. ಕನ್ನಡದ ಸುದ್ದಿ ಪತ್ರಿಕೆಗಳ ಚರಿತ್ರೆ ಬಲ್ಲವರಿಗೆಲ್ಲ ಇದು ಚೆನ್ನಾಗಿ ಗೊತ್ತು. ಇಂದು ಇಲ್ಲಿ ಬಗ್ಗಿ ಎಂದರೆ ತೆವಳುವ ಸುದ್ದಿ ಮನೆಗಳದೇ ಕಾರುಬಾರು. ಹಾಗಾಗಿ, ಸುದ್ದಿ ಸಂತೆಯಲ್ಲಿ ಒಬ್ಬರಾಗದೆ, ತಲುಪಿಸಬೇಕಾಗಿರುವ ಸುದ್ದಿಗಳನ್ನು ಶ್ರದ್ಧೆಯಿಂದ ತಲುಪಿಸುವ, ಪ್ರಭುತ್ವಕ್ಕೆ ಕೇಳಬೇಕಾಗಿರುವ ಪ್ರಶ್ನೆಗಳನ್ನು ಕೇಳುವ, ಪತ್ರಿಕೋದ್ಯೋಗದ ಸಾಂಪ್ರದಾಯಿಕ ಶಿಸ್ತನ್ನು ಕಾಪಾಡಿಕೊಳ್ಳುವ ಒಂದು ಸುದ್ದಿ ಮನೆ ನಾಡಿಗೆ ಅಗತ್ಯವಿತ್ತು. ಆ ಸಾಮಾಜಿಕ, ಸಾಂಸ್ಕೃತಿಕ ಜವಾಬ್ದಾರಿಯನ್ನು ‘ವಾರ್ತಾಭಾರತಿ’ ಬಹಳ ಜತನದಿಂದ ನಿರ್ವಹಿಸುತ್ತಿದೆ. ಇಂತಹ ಜವಾಬ್ದಾರಿಯನ್ನು ಸತತವಾಗಿ ನಿರ್ವಹಿಸತೊಡಗಿದಾಗ ಸಹಜವಾಗಿಯೇ ಇದೊಂದು ಪ್ರಭುತ್ವವನ್ನು ಪ್ರಶ್ನಿಸುವ ‘ಅಜೆಂಡಾ ಡ್ರಿವನ್ ಪತ್ರಿಕೆ’ ಅನ್ನಿಸತೊಡಗುವುದು ಸಹಜ. ಈ ರೀತಿಯ ಪತ್ರಿಕೆಗಳ ಪರಂಪರೆ (ಕನಿಷ್ಠ ಪಕ್ಷ ಕರಾವಳಿಯ ಪ್ರಯೋಗ ಶಾಲೆಯ ಮಟ್ಟಿಗೆ) ಅಲ್ಪಕಾಲಿಕ ಎಂಬ ಮಿಥ್ನ್ನು ಮುರಿದು ‘ವಾರ್ತಾಭಾರತಿ’ 20 ವರ್ಷಗಳನ್ನು ದಾಟಿದೆ ಎಂಬುದು ಸಣ್ಣ ಸಂಗತಿ ಅಲ್ಲ.
ಮುಂದೆ ಎತ್ತ?
revelation ಈಗ ಕನ್ವರ್ಜಂಟ್ ಮಾಧ್ಯಮಗಳ ಕಾಲ. ‘ರಿಯಲ್ ಟೈಮ್’ ಸುದ್ದಿಗಳು ಸಿಗುವಾಗ 24-36 ತಾಸು ಹಳೆಯ ಸುದ್ದಿಗಳನ್ನು ಹೊತ್ತು ತರುವ ಪ್ರಿಂಟ್ ಮೀಡಿಯಾಕ್ಕೆ ತನ್ನ ಮುಂದಿನ ಹಾದಿ ಏನು? ಎಂಬ ಪ್ರಶ್ನೆ ಏಳುವುದು ಸಹಜ. ತನ್ನದೇ ವೆಬ್ಚಾನೆಲ್ ಹೊಂದಿರುವ ‘ವಾರ್ತಾಭಾರತಿ’ ಅಲ್ಟ್ರಾಲೋಕಲ್ ಸುದ್ದಿಗಳ ಜೊತೆ ನಾಡಿನ, ಜಗತ್ತಿನ ಸುದ್ದಿಗಳಿಂದಾಚೆಗಿನ ಜಗತ್ತನ್ನು ಪಾಮರರ ಭಾಷೆಯಲ್ಲಿ ಓದುಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಸಾಧ್ಯತೆಗಳಾನ್ವೇಷಣೆಯನ್ನು ಆರಂಭಿಸಲು ಇದು ಸಕಾಲ. ‘ವಾರ್ತಾಭಾರತಿ’ ಓದ ತೊಡಗಿದ ಮೇಲೆ, ಸುದ್ದಿ ಡೆಸ್ಕ್ಗಳಲ್ಲಿ ಕೆಲಸ ಮಾಡಿದ ಸಾಕಷ್ಟು ಅನುಭವ ಇರುವ ನನ್ನ ಮಟ್ಟಿಗೆ ದೊಡ್ಡದೊಂದು ಏನಂದರೆ, ಒಂದಿಡೀ ಸಮುದಾಯದ ಮರೆಮಾಚಲಾಗಿದ್ದ ಸಾಂಸ್ಕೃತಿಕ, ಬದುಕಿನ ಸುದ್ದಿಗಳು ಇಲ್ಲಿಕಾಣ ಸಿಗತೊಡಗಿದವು. ಅದು ನನ್ನಲ್ಲಿ ಕೆಲವೊಮ್ಮೆ ಅಪರಾಧಿ ಪ್ರಜ್ಞೆ ಹುಟ್ಟು ಹಾಕಿದ್ದಿದೆ.
20 ವರ್ಷ ಪೂರೈಸಿರುವ ‘ವಾರ್ತಾಭಾರತಿ’ ಬದಲಾಗುತ್ತಿರುವ ಸುದ್ದಿ ಸನ್ನಿವೇಶದಲ್ಲಿ ಪ್ರಸ್ತುತವೆನ್ನಿಸಿಕೊಂಡು, ಮುಂಚೂಣಿಯಲ್ಲಿ ಉಳಿಯುವ ಹಾದಿ ಕಂಡುಕೊಳ್ಳಲಿ ಎಂಬುದು ಈ ಹೊತ್ತಿನ ಹಾರೈಕೆ.