ದೇಶದಲ್ಲಿ ಬೆಳೆಯುತ್ತಿರುವ ಪರ್ಯಾಯ ಮಾಧ್ಯಮಕ್ಕೆ ಅತ್ಯುತ್ತಮ ಮಾದರಿ ‘ವಾರ್ತಾಭಾರತಿ’
- ಡಾ. ಮಹಮ್ಮದ್ ಹಬೀಬ್, ಮಾನವಿ
ಕರಾವಳಿಯಿಂದ ತನ್ನ ಪಯಣವನ್ನು ಆರಂಭಿಸಿದ ‘ವಾರ್ತಾಭಾರತಿ’ಯು ಬೇರೆ-ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ಹಾಗೂ ರಾಷ್ಟ್ರಗಳಿಗೆ ವ್ಯಾಪಿಸುತ್ತಿರುವುದು ತುಂಬಾ ಸಂತೋಷದ ವಿಚಾರ. ತೀವ್ರತರದ ಸ್ಪರ್ಧೆ ಹಾಗೂ ಮುಂದುವರಿದ ತಂತ್ರಜ್ಞಾನ ಆಧರಿತವಾದ ಆಧುನಿಕ ಮಾಧ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸುವುದು ಒಂದೆಡೆಯಿರಲಿ, ಸ್ಪರ್ಧೆಯಲ್ಲಿ ಉಳಿಯುವುದೇ ಅತೀ ದೊಡ್ಡ ಸವಾಲಾಗಿದೆ. ಒಂದು ಸ್ಥಳೀಯ ಪತ್ರಿಕೆಯಾಗಿ ತನ್ನ ಪ್ರಯಾಣ ಆರಂಭಿಸಿ ಬದಲಾದ ಸನ್ನಿವೇಶದಲ್ಲಿ ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮದಲ್ಲಿಯೂ ತನ್ನ ಪ್ರಭಾವವನ್ನು ವಿಸ್ತರಿಸಿ ಯಶಸ್ಸು ಕಂಡುಕೊಳ್ಳುತ್ತಿರುವ ‘ವಾರ್ತಾಭಾರತಿ’ಯು ದೇಶದಲ್ಲಿ ಬೆಳೆಯುತ್ತಿರುವ ಪರ್ಯಾಯ ಮಾಧ್ಯಮಕ್ಕೆ ಅತ್ಯುತ್ತಮ ಮಾದರಿ. ಮಾಧ್ಯಮ ಕ್ಷೇತ್ರದಲ್ಲಿನ ಬದಲಾವಣೆಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಎಂದರೆ ಕೇವಲ ತಾಂತ್ರಿಕ ನೈಪುಣ್ಯತೆ ಹೊಂದುವುದಲ್ಲ. ಅದರ ಜೊತೆಗೆ ತನ್ನ ಮನಸ್ಥಿತಿಯಲ್ಲಿ ಮಾಡಿಕೊಳ್ಳಬೇಕಾದ ಮೂಲಭೂತ ಬದಲಾವಣೆಯೂ ಹೌದು. ‘ವಾರ್ತಾಭಾರತಿ’ಯು ಒಂದು ದಶಲಕ್ಷದಷ್ಟು ಓದುಗರನ್ನು, ವೀಕ್ಷಕರನ್ನು-ಕೇಳುಗರನ್ನು ಹೊಂದಿದ್ದು ಅವರ ವಿಶ್ವಾಸವನ್ನು ಕಾಪಾಡಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಮಾಧ್ಯಮ ವಲಯದ ಸಂಶೋಧನೆಯಲ್ಲಿ ತೊಡಗಿರುವವರಿಗೆ ‘ವಾರ್ತಾಭಾರತಿ’ಯ ಈ ಬೆಳವಣಿಗೆಯು ಅಧ್ಯಯನ ಯೋಗ್ಯ ವಿಷಯವೆಂದೇ ಹೇಳಬಹುದು.
ಹಾಗಂತ ‘ವಾರ್ತಾಭಾರತಿ’ಯ ಬೆಳವಣಿಗೆಯ ದಾರಿಯೇನು ಸುಲಭದ್ದಾಗಿರಲಿಲ್ಲ. ದೇಶದ ಬಹುತೇಕ ನಿಷ್ಪಕ್ಷಪಾತ ಪತ್ರಿಕೆಗಳ ಬೆನ್ನುಮೂಳೆಯನ್ನು ಮುರಿಯಲು ಆಯಾ ಕಾಲದ ಪ್ರಭುತ್ವದಿಂದ ಸೃಷ್ಟಿಯಾಗುವ ಎಲ್ಲಾ ರೀತಿಯ ಸಮಸ್ಯೆಗಳೂ ‘ವಾರ್ತಾಭಾರತಿ’ಗೂ ಎದುರಾಗಿದ್ದಿದೆ. 2017ರಲ್ಲಿ ಫೇಸ್ಬುಕ್ ‘ವಾರ್ತಾಭಾರತಿ’ಯ ಪೇಜನ್ನು ತಡೆಹಿಡಿದದ್ದು, ಹಿಂದಿನ ಬಿಜೆಪಿ ಆಡಳಿತದ ಸರಕಾರವು ಪತ್ರಿಕೆಗೆ ಸರಕಾರಿ ಜಾಹೀರಾತು ನಿಲ್ಲಿಸಿದ್ದು ಹೀಗೆ ಹತ್ತು ಹಲವು. ಕೆಲವೊಂದು ಸಾರಿಯಂತೂ ಆರ್ಥಿಕ ಬಿಕ್ಕಟ್ಟಿನಿಂದ ಪತ್ರಿಕೆಯು ಮುಚ್ಚುವ ಸ್ಥಿತಿಗೆ ಬಂದಿದ್ದರ ಕುರಿತೂ ಕೇಳಿದ್ದಿದೆ. ತನ್ನೆಲ್ಲಾ ಸಮಸ್ಯೆಗಳ ನಡುವೆಯೂ ರಾಜ್ಯದ, ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಿ ಮುಂದುವರಿಯುತ್ತಿರುವುದು ‘ವಾರ್ತಾಭಾರತಿ’ಯ ಬದ್ಧತೆ ಹಾಗೂ ಗಟ್ಟಿತನವನ್ನು ತೋರಿಸುತ್ತದೆ.
ಒಂದು ಪತ್ರಿಕೆಯ ಬೆನ್ನುಮೂಳೆ ಎಷ್ಟು ಗಟ್ಟಿಯಾಗಿದೆ ಎಂದು ತಿಳಿಯಲು ಆ ಪತ್ರಿಕೆಯ ಸಂಪಾದಕೀಯದ ಮೇಲೆ ಕಣ್ಣು ಹಾಯಿಸಿದರೆ ಸಾಕು. ಇತ್ತೀಚಿನ ಹಲವಾರು ಪತ್ರಿಕೆಗಳ ಸಂಪಾದಕೀಯವು ಸಂಪತ್ತಿನ ಸಂಪಾದನೆಯ ಹಾದಿಯನ್ನು ಹಿಡಿದಿರುವುದು ತುಂಬಾ ದುರದೃಷ್ಟಕರ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ‘ವಾರ್ತಾಭಾರತಿ’ಯು ತನ್ನ ತೀಕ್ಷ್ಣವಾದ ಸಂಪಾದಕೀಯದ ಮುಖಾಂತರ ಸಾಮಾಜಿಕ-ಜನಪರ ಕಾಳಜಿ ವಿಚಾರಗಳಲ್ಲಿ ಎಂದೂ ರಾಜಿಯಾಗಿಲ್ಲ. ಸಮಾಜ ವಿರೋಧಿ, ಮನುಷ್ಯ ವಿರೋಧಿ ಘಟನೆಗಳಿಗೆ ಹಾಗೂ ಜನವಿರೋಧಿ ಪ್ರಭುತ್ವಗಳಿಗೆ ನಿರಂತರವಾಗಿ ಎದೆಯೊಡ್ಡುತ್ತಾ ಬಂದಿದೆ. ಪ್ರಭುತ್ವ ಅಥವಾ ಅದಕ್ಕೆ ಹತ್ತಿರದ ವ್ಯಕ್ತಿಗಳಿಂದ ಯಾವುದಾದರೊಂದು ಪತ್ರಿಕೆ ಅಥವಾ ಪತ್ರಕರ್ತ ಟೀಕೆಗೊಳಪಡುತ್ತಿದ್ದರೆ ಅದು ಸರಿಯಾದ ದಾರಿಯಲ್ಲೇ ಸಾಗಿದೆ ಎಂದರ್ಥ. ಒಮ್ಮೆ ರಾಜ್ಯದ ಯುವ ಸಂಸದರೊಬ್ಬರು ತಮ್ಮ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ‘ವಾರ್ತಾಭಾರತಿ’ಯನ್ನು ಖರೀದಿಸಿ ಸರಿಮಾಡುತ್ತೇನೆ ಎಂದಾಗ, ‘ವಾರ್ತಾಭಾರತಿ’ಯ ಓದುಗರಿಗೆ ಪತ್ರಿಕೆ ಸರಿದಾರಿಯಲ್ಲಿಯೇ ಸಾಗುತ್ತಿದೆ ಎಂಬುದಕ್ಕೆ ಪುಷ್ಟಿ ಸಿಕ್ಕಂತಾಗಿತ್ತು.
‘ವಾರ್ತಾಭಾರತಿ’ಯ ಕುರಿತ ಸಂಸದರ ಆ ಒಂದು ಹೇಳಿಕೆಯಿಂದ ಅಂದು ಎರಡು ಸತ್ಯಗಳು ಹೊರಬಿದ್ದಿದ್ದವು. ಒಂದು ಯುವ ಸಂಸದರ ಬಳಿ ಇರುವ ಸಂಪತ್ತು ಹಾಗೂ ‘ವಾರ್ತಾಭಾರತಿ’ಯು ಸಾಗುತ್ತಿದ್ದ ದಾರಿ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ‘ವಾರ್ತಾಭಾರತಿ’ ಓದುವಾಗ, ಪತ್ರಿಕೆಯು ಬಿಜೆಪಿ ವಿರೋಧಿ ನಿಲುವು ಹೊಂದಿದೆಯೇನೋ ಎಂಬ ಭಾವನೆ ಮೂಡುತ್ತಿತ್ತು. ಈಗ ಸರಕಾರ ಬದಲಾಗಿದೆ, ಇದೇ ‘ವಾರ್ತಾಭಾರತಿ’ ಓದುವಾಗ, ಪತ್ರಿಕೆಯು ಕಾಂಗ್ರೆಸ್ ವಿರೋಧಿ ನಿಲುವು ಹೊಂದಿದೆಯೇನೋ ಎಂಬ ಭಾವನೆಮೂಡುತ್ತದೆ. ಒಬ್ಬ ಓದುಗನಲ್ಲಿ ಮೂಡುವ ಈ ಭಾವನೆಯೇ ಒಂದು ಮಾಧ್ಯಮದ ವಿಶ್ವಾಸಾರ್ಹತೆಗೆ ಇರುವ ಸಾಕ್ಷಿಯಾಗಿದೆ. ಪ್ರಭುತ್ವದ ಲೋಪಗಳಿಗೆ ಮಾಧ್ಯಮವು ಕನ್ನಡಿಯಾಗಬೇಕು. ಪ್ರಭುತ್ವದ ಹೊಗಳು-ಭಟ್ಟಂಗಿತನದಲ್ಲಿ ಮಗ್ನವಾಗಿರುವ ಬಹುಪಾಲು ಮಾಧ್ಯಮಲೋಕಕ್ಕೆ ‘ವಾರ್ತಾಭಾರತಿ’ಯಂತಹ ಬೆರಳಣಿಕೆಯಂತಹ ಪತ್ರಿಕೆಗಳು ಅಪವಾದದಂತಿವೆ. ಮಾಧ್ಯಮಗಳು ಜನರ ಮತ್ತು ಸರಕಾರಗಳ ನಡುವಿನ ಸಂಪರ್ಕ- ಸೇತುವೆಗಳಾಗಿ ಕಾರ್ಯನಿರ್ವಹಿಸಬೇಕೇ ಹೊರತು ಗೊಡೆಗಳಾಗಿಯಲ್ಲ. ಆದರೆ ಇಂದಿನ ಮಾಧ್ಯಮಗಳು ಆಡಳಿತ ಪಕ್ಷ ಇಚ್ಛಿಸುವ ಜನರಿಗಾಗಿ ಮಾತ್ರ ಸಂಪರ್ಕ ಸೇತುವೆಯಾಗಿ, ಉಳಿದ ಜನರ ಪಾಲಿಗೆ ಅಡ್ಡಗೋಡೆಯಾಗಿ ಕಾರ್ಯನಿರ್ವಹಿಸುತ್ತಿರುವುದು ತೀರಾ ಬೇಸರದ ಸಂಗತಿ. ಕರಾವಳಿಯ ಗಾಳಿಯಲ್ಲಿ ಸೇರಿಕೊಂಡಿರುವ ಕೋಮುವಿಷಕ್ಕೆ ಬಲಿಯಾದ ಸಹೋದರರಾದ ಪ್ರವೀಣ್, ಮಸೂದ್ ಮತ್ತು ಫಾಝಿಲ್ ವಿಚಾರದಲ್ಲಿ ರಾಜ್ಯದ ಬಹುಪಾಲು ಮಾಧ್ಯಮಗಳು ಸೇತುವೆಯಾಗದೇ ಕಂದಕವಾಗಿದ್ದೇ ಈ ಆರೋಪಕ್ಕೆ ಸಾಕ್ಷಿ. ಅಂದಿನ ಬಿಜೆಪಿ ಸರಕಾರ ಕೇವಲ ಪ್ರವೀಣ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಪರಿಹಾರ ನೀಡಿ ಹತ್ತಿರದಲ್ಲಿಯೇ ಇದ್ದ ಮಸೂದ್/ಫಾಝಿಲ್ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡದ ಸಂದರ್ಭದಲ್ಲಿ ರಾಜ್ಯದ ಬಹುಪಾಲು ಮಾಧ್ಯಮಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಬಿಟ್ಟಿದ್ದವು. ಸರಕಾರ ಬದಲಾದ ಸನ್ನಿವೇಶದಲ್ಲಿ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೂ ಪ್ರವೀಣ್ ಕುಟುಂಬಕ್ಕೆ ದೊರೆತಂತಹ ಪರಿಹಾರವನ್ನು ಕೊಡಿಸುವವರೆಗೂ ವಿರಮಿಸದ ‘ವಾರ್ತಾಭಾರತಿ’ಯು ಜವಾಬ್ದಾರಿಯುತ ಮಾಧ್ಯಮದ ಒಂದು ಉತ್ತಮ ಉದಾಹರಣೆಯಾಗಿದೆ. ಮಾಧ್ಯಮವು ಶೋಷಿತರ, ನಿರ್ಗತಿಕರ, ಬಡವರ ಮತ್ತು ಧ್ವನಿಯಿಲ್ಲದವರ ಧ್ವನಿಯಾದಾಗ ಮಾತ್ರ ಪ್ರಜಾಪ್ರಭುತ್ವ ಸದೃಢಗೊಳ್ಳುತ್ತದೆ. ಇಂದು ಕಾರ್ಪೊರೇಟ್ ಬಾಲಂಗೋಚಿಯಲ್ಲದ ಪರ್ಯಾಯ ಮಾಧ್ಯಮ ವ್ಯವಸ್ಥೆಯು ದೇಶದಲ್ಲಿ ಬೆಳೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆಯ ಕುರಿತು ಆಶಾವಾದ ಮೂಡಿಸುತ್ತದೆ.
ಜನರಿಗೆ ಮಾಹಿತಿ ನೀಡುವುದು ಮಾಧ್ಯಮದ ಹಲವಾರು ಜವಾಬ್ದಾರಿಗಳಲ್ಲಿ ಮಹತ್ವದ್ದು. ಆದರೆ ಇಂದು ಸುಳ್ಳು ಮಾಹಿತಿ ಹರಡುವಲ್ಲಿ ದೇಶದ ಬಹುತೇಕ ಮಾಧ್ಯಮದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈಜ ಸುದ್ದಿ/ಮಾಹಿತಿ ತಿಳಿಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ತೀವ್ರವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಮಾಧ್ಯಮ ವಲಯವು ಅವಕಾಶಗಳ ಜೊತೆಗೆ ಸವಾಲುಗಳನ್ನೂ ಎದುರಿಸುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಒಂದು ಜವಾಬ್ದಾರಿಯುತ ಮಾಧ್ಯಮ ಸಂಸ್ಥೆಗೆ ಸುಳ್ಳು ಸುದ್ದಿಗಳೊಂದಿಗೆ ಸೆಣಸಾಡುವ ಕಾರ್ಯವು ತನ್ನ ಓದುಗರಿಗೆ ವೇಗವಾಗಿ ಸುದ್ದಿಯನ್ನು ತಲುಪಿಸುವ ಕಾರ್ಯಕ್ಕಿಂತಲೂ ದೊಡ್ಡ ಸವಾಲಾಗಿಬಿಟ್ಟಿದೆ. ಹೀಗಾಗಿ ಸುದ್ದಿಸಂಗ್ರಹಕ್ಕಿಂತಲೂ ಹೆಚ್ಚಿನ ಸಮಯವನ್ನು ಸುದ್ದಿ ಪರಿಶೀಲನೆಗೆ ಮೀಸಲಿಡಬೇಕಾದ ಪರಿಸ್ಥಿತಿಗೆ ಇಂದಿನ ಮಾಧ್ಯಮ ತಳ್ಳಲ್ಪಟ್ಟಿದೆ. ವಾಟ್ಸ್ಆ್ಯಪ್ ಯುನಿವರ್ಸಿಟಿಯಿಂದ ಹೊರಬರುವ ಸುಳ್ಳು ಸುದ್ದಿ-ಮಾಹಿತಿಗಳಿಂದ ಸಮಾಜ ಕಲುಷಿತವಾಗುತ್ತಿದ್ದು ಇದರ ದುಷ್ಪರಿಣಾಮವನ್ನು ರಾಜ್ಯ ಮತ್ತು ದೇಶದಲ್ಲಿ ಬಹುದೊಡ್ಡ ವರ್ಗವು ಅನುಭವಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕನ್ನಡದ ಬೆರಳೆಣಿಕೆಯಷ್ಟು ಮಾಧ್ಯಮಗಳು ಮಾತ್ರ ವೇಗದ ಸುದ್ದಿ ಹಿಡಿಯುವ ಸ್ಪರ್ಧೆಯಲ್ಲಿ ಒಮ್ಮೆಯೂ ಸುಳ್ಳು ಸುದ್ದಿಗೆ ಬಲಿಯಾಗದೆ ಉಳಿದಿವೆ. ಆ ಬೆರಳೆಣಿಕೆಯ ಮಾಧ್ಯಮಗಳಲ್ಲಿ ‘ವಾರ್ತಾಭಾರತಿ’ಯನ್ನು ಮುಂಚೂಣಿಯ ಸಾಲಿನಲ್ಲಿಡಲು ಒಬ್ಬ ಓದುಗ/ವೀಕ್ಷಕನಾಗಿ ನನಗೆ ತುಂಬಾ ಹೆಮ್ಮೆಯಾಗುತ್ತದೆ. ಸಂವೇದನಾರಹಿತ ಹಾಗೂ ತಪ್ಪು ಮಾಹಿತಿಯಿಂದ ಗುರುತಿಸಲ್ಪಟ್ಟಿರುವ ಯುಗದಲ್ಲಿ ನಿಖರ, ನಿಷ್ಪಕ್ಷ ಸುದ್ದಿ/ಮಾಹಿತಿಗಳಿಂದಾಗಿ ‘ವಾರ್ತಾಭಾರತಿ’ಯು ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ. ಒಂದು ಪತ್ರಿಕೆ ಅಥವಾ ಮಾಧ್ಯಮವು ಕೇವಲ ಮಾಹಿತಿ ನೀಡಿಕೆಗೆ ಸೀಮಿತವಾಗದೆ ತನ್ನ ಓದುಗರನ್ನು/ವೀಕ್ಷಕರನ್ನು ಪರಿಪೂರ್ಣ ಮಾಹಿತಿಯುಳ್ಳ, ಸಮಾಜದ ಆಗು-ಹೋಗುಗಳಿಗೆ ಸಕ್ರಿಯವಾಗಿ ಪ್ರತಿಕ್ರಿಯಿಸುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ‘ವಾರ್ತಾಭಾರತಿ’ಯಲ್ಲಿ ಮೂಡಿಬರುವ ವೈಚಾರಿಕ, ಸತ್ಯಶೋಧಕ, ವಿಶ್ಲೇಷಣಾತ್ಮಕ ಸಂಪಾದಕೀಯ ಹಾಗೂ ಲೇಖನಗಳು ತನ್ನ ಓದುಗರನ್ನು ತಿಳುವಳಿಕೆಯುಳ್ಳ ಹಾಗೂ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಎರಡು ದಶಕಗಳಿಂದ ‘ವಾರ್ತಾಭಾರತಿ’ಯು ಜನಸಂವಾದವನ್ನು ರೂಪಿಸುತ್ತಾ, ವಿಭಿನ್ನ ವಿಚಾರಗಳಿಗೆ ಮುಕ್ತ ವೇದಿಕೆಯನ್ನು ಒದಗಿಸುತ್ತಾ ರಾಜ್ಯದ ಮತ್ತು ಅದರಾಚೆಗಿನ ಜನರೊಂದಿಗೆ ಬಾಂಧವ್ಯವನ್ನು ಬೆಸೆಯುತ್ತಾ ಬೆಳೆದುಬಂದಿದೆ.
ಮುಚ್ಚಿದ ಕೋಣೆಗಳಿಗೆ, ಕಾಂಪೌಂಡಿನ ಒಳಭಾಗಕ್ಕೆ ಸೀಮಿತವಾದ ಜೀವನ ಹಾಗೂ ತೀವ್ರವಾಗಿ ಧ್ರುವೀಕರಣಗೊಳ್ಳುತ್ತಿರುವ ಸಮಾಜದ ಕವಲುದಾರಿಯಲ್ಲಿ ನಾವು ಸಾಗಿದ್ದೇವೆ. ಇಂತಹ ಸಂದರ್ಭದಲ್ಲಿ ವಿಭಿನ್ನ ಜಾತಿ, ಲಿಂಗ, ವರ್ಗ, ಧರ್ಮ, ಪಂಗಡ ಮತ್ತು ಪ್ರದೇಶಗಳಿಗೆ ಸಂಬಂಧಿಸಿದ ವಿಚಾರಗಳನ್ನು ವ್ಯಕ್ತಪಡಿಸಲು ಒಂದು ಸಾಮಾನ್ಯ ವೇದಿಕೆಯ ಜರೂರತ್ತು ಇಂದು ಹಿಂದಿಗಿಂತಲೂ ತುಸು ಹೆಚ್ಚೇ ಇದೆ. ಕರ್ನಾಟಕದ ಮಟ್ಟಕ್ಕೆ ‘ವಾರ್ತಾಭಾರತಿ’ಯು ಇಂತಹ ಒಂದು ವೇದಿಕೆಯಾಗಿ ಮಾರ್ಪಡುತ್ತಿರುವುದು ಅತೀ ಸಂತಸದ ವಿಷಯ.
ರಾಜ್ಯದಲ್ಲಿ ಹಲವಾರು ಪತ್ರಿಕೆಗಳು ಚಾಲನೆಯಲ್ಲಿದ್ದರೂ ಪ್ರತಿಯೊಂದು ಪತ್ರಿಕೆಯೂ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ‘ವಾರ್ತಾಭಾರತಿ’ಯು ಪ್ರತಿದಿನ ಹೆಚ್ಚು-ಹೆಚ್ಚು ಓದುಗರಿಗೆ ತಲುಪುತ್ತಿರುವುದು ತನ್ನ ಸಂಪಾದಕೀಯ ನಿಲುವು, ವೈಚಾರಿಕ ಲೇಖನಗಳು, ಸ್ಥಳೀಯ ಹಾಗೂ ನೈಜ ದೃಷ್ಟಿಕೋನಗಳಿಂದಾಗಿ ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗಂತ ಇದು ಕೇವಲ ಸ್ಥಳೀಯ ಪ್ರದೇಶಕ್ಕೆ ಸೀಮಿತವಾಗಿಲ್ಲ. 1960ರಲ್ಲಿ ಕೆನಡಾದ ವಿಚಾರವಾದಿ ಮಾರ್ಷಲ್ ಮ್ಯಾಕ್ಲುಹಾನ್ ನೀಡಿದ ‘ಗ್ಲೋಬಲ್ ವಿಲೇಜ್’ (ಜಗತ್ತೇ ಒಂದು ಗ್ರಾಮ) ಎಂಬ ಪರಿಕಲ್ಪನೆಯಂತೆ ಬೆಳೆಯುತ್ತಿರುವ ತಂತ್ರಜ್ಞಾನದ ಸಹಾಯದಿಂದ ಕ್ಷಣಮಾತ್ರದಲ್ಲಿ ಜಗತ್ತಿನ ಇತರ ಭಾಗದ ಸುದ್ದಿಗಳನ್ನು ನಮಗೆ ತಲುಪಿಸಿ ಹಾಗೂ ಸ್ಥಳೀಯ ಸುದ್ದಿಗಳನ್ನು ಕನ್ನಡಿಗರು ನೆಲೆಸಿರುವ ಜಗತ್ತಿನ ಇತರ ಭಾಗಗಳಿಗೆ ತಲುಪಿಸುತ್ತಾ ‘ಗ್ಲೋಬಲ್ ವಿಲೇಜ್’ ಪರಿಕಲ್ಪನೆಯಲ್ಲಿ ‘ವಾರ್ತಾಭಾರತಿ’ಯು ತನ್ನ ಪ್ರಸ್ತುತತೆಯನ್ನು ಗಟ್ಟಿಗೊಳಿಸಿದೆ. ಗೂಗಲ್ ಅನಾಲಿಟಿಕ್ಸ್ ಪ್ರಕಾರ ‘ವಾರ್ತಾಭಾರತಿ’ಯ ಒಟ್ಟು ಓದುಗರು, ವೀಕ್ಷಕರಲ್ಲಿ ಸುಮಾರು ಶೇ. 20ರಷ್ಟು ಜನ ಇತರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿದ್ದಾರೆ. ಇದನ್ನು ಕೇವಲ ಸಂಖ್ಯೆಯನ್ನಾಗಿ ಪರಿಗಣಿಸದೆ, ಸ್ಥಳೀಯ ಮತ್ತು ಅನಿವಾಸಿ ಕನ್ನಡಿಗರ ನಡುವೆ ನಾಡು-ನುಡಿಯ ಬಾಂಧವ್ಯವನ್ನು ಬೆಸೆಯುವ ಸಂಪರ್ಕ ಸೇತುವೆಯನ್ನಾಗಿ ಪರಿಗಣಿಸಬಹುದಾಗಿದೆ. ಅಷ್ಟೇ ಅಲ್ಲದೆ ಕುವೆಂಪುರವರ ಆಶಯದಂತೆ ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವ ಸ್ಫೂರ್ತಿಯನ್ನು ಕನ್ನಡಿಗರಲ್ಲಿ ಮೂಡಿಸುವಲ್ಲಿಯೂ ತನ್ನ ಜವಾಬ್ದಾರಿಯನ್ನು ಮೆರೆಯುತ್ತಿದೆ.
‘ವಾರ್ತಾಭಾರತಿ’ಯು ಕೇವಲ ಪ್ರಾದೇಶಿಕ ಸುದ್ದಿಗಳಿಗೆ ಸೀಮಿತವಾಗದೆ ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರೋಗ್ಯ, ಕ್ರೀಡೆ, ವಿಜ್ಞಾನ, ಮಹಿಳೆಯರು, ಯವಕರು ಹಾಗೂ ವಯಸ್ಕರಿಗೆ ಸಂಬಂಧಿಸಿದ ಹತ್ತು ಹಲವಾರು ಕ್ಷೇತ್ರಗಳ ಭಿನ್ನ ವಿಭಿನ್ನ ವಿಷಯಗಳ ಮೇಲಿನ ಕವರೇಜ್ನಿಂದಾಗಿ ತನ್ನ ಸಾಂಪ್ರದಾಯಿಕ ಓದುಗರನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ, ಹೊಸ ತಲೆಮಾರಿನ ಓದುಗರನ್ನೂ, ವೀಕ್ಷಕರನ್ನೂ ತನ್ನತ್ತ ಸೆಳೆಯುತ್ತಿದೆ. ಗೂಗಲ್ ಅನಾಲಿಟಿಕ್ಸ್ ಪ್ರಕಾರ ‘ವಾರ್ತಾಭಾರತಿ’ಯು ತನ್ನ ಒಟ್ಟು ಓದುಗರು/ವೀಕ್ಷಕರಲ್ಲಿ ಸುಮಾರು ಶೇ. 65ಕ್ಕಿಂತಲೂ ಹೆಚ್ಚಿನ ಸಂಖ್ಯೆಯು ಯುವ ಸಮುದಾಯದಿಂದ ಕೂಡಿದ್ದು ಪತ್ರಿಕೆಯ ಯುವಕರೊಂದಿಗಿನ ಬೆಸುಗೆಗೆ ಸಾಕ್ಷಿ. ಇದು ಸಮಾಜದಲ್ಲಿ ಒಂದು ಜವಾಬ್ದಾರಿಯುತ ಯುವ ಸಮೂಹವನ್ನು ರೂಪಿಸುವಲ್ಲಿಯೂ ತನ್ನ ಕೊಡುಗೆಯನ್ನು ನೀಡುತ್ತಿದೆ.
ನೆಲ, ಜಲ ಮತ್ತು ಜನರ ಪರವಾಗಿದ್ದ, ಜನರ ಮನಸ್ಸುಗಳನ್ನು ಬೆಸೆಯುತ್ತಿದ್ದ ಮಾಧ್ಯಮಗಳೇ ಇಂದು ಒಡೆದಾಳುವ ಒಡೆಯರ ಒಡನಾಡಿಗಳಾಗಿದ್ದು ದುರಂತವೇ ಸರಿ. ಹೀಗಾಗಿ ಕಾರ್ಪೊರೇಟ್ ಕಮ್ ಪ್ರಭುತ್ವದ ಅಡಿಯಾಳಾಗದ ಪರ್ಯಾಯ ಮಾಧ್ಯಮವು ಅತಿ ವೇಗವಾಗಿ ಬೆಳೆಯುತ್ತಿದೆ. ಅದೇ ಸಾಲಿನಲ್ಲಿ ‘ವಾರ್ತಾಭಾರತಿ’ಯು ಸಾಗುತ್ತಿರುವುದು ಸಂತೋಷ ಮತ್ತು ಅದು ನಮ್ಮ ನಾಡಿನ ಇಂದಿನ ಅಗತ್ಯವೂ ಕೂಡ. ‘ವಾರ್ತಾಭಾರತಿ’ಯು ಹೀಗೆಯೇ ಅತ್ಯುನ್ನತ ಪತ್ರಿಕೋದ್ಯಮದ ಮಾನದಂಡಗಳೊಂದಿಗೆ ಕನ್ನಡಿಗರ ಸದಾಕಾಲದ ಧ್ವನಿಯಾಗಿ ಮುಂದುವರಿಯಲಿ ಎಂದು ಆಶಿಸೋಣ.