1977ರ ಬಳಿಕ ಅವಧಿ ಪೂರ್ಣಗೊಳಿಸಿದ ಪ್ರಪ್ರಥಮ ಕರ್ನಾಟಕ ಸಿಎಂ ಸಿದ್ದರಾಮಯ್ಯ
ಕಳೆದ 40 ವರ್ಷಗಳಲ್ಲಿ ರಾಜ್ಯಕಂಡ ಮುಖ್ಯಮಂತ್ರಿಗಳು ಯಾರು? ಅವರ ಅವಧಿ ಎಷ್ಟು?
ಸಿದ್ದರಾಮಯ್ಯ ಸರ್ಕಾರ ಐದು ವರ್ಷಗಳ ಸಂಪೂರ್ಣ ಅವಧಿಯನ್ನು ಮೇ 28ರಂದು ಪೂರೈಸುವ ಮುನ್ನ ಕರ್ನಾಟಕ ವಿಧಾನಸಭೆಗೆ ಮೇ 12ರಂದು ಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.
2013ರ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಇದರೊಂದಿಗೆ, ಕಳೆದ ನಲುವತ್ತು ವರ್ಷಗಳ ರಾಜಕೀಯ ಇತಿಹಾಸದಲ್ಲಿ ಐದು ವರ್ಷಗಳ ಸಂಪೂರ್ಣ ಅವಧಿ ಪೂರೈಸುವ ಮೊಟ್ಟಮೊದಲ ಸಿಎಂ ಎನಿಸಿಕೊಳ್ಳಲಿದ್ದಾರೆ.
ಈ ಹಿಂದೆ ಐದು ವರ್ಷಗಳ ಅವಧಿ ಪೂರೈಸಿದ ಕೊನೆಯ ಮುಖ್ಯಮಂತ್ರಿ ಡಿ.ದೇವರಾಜ ಅರಸ್. ಇವರು ಕೂಡಾ ಸಿದ್ದರಾಮಯ್ಯ ಅವರಂತೆ ಮೈಸೂರಿನವರು. ಅರಸು 1972ರಿಂದ 1977ರವರೆಗೆ ಅಧಿಕಾರದಲ್ಲಿದ್ದರು. 1980ರಲ್ಲಿ ಅರಸು ರಾಜೀನಾಮೆ ನೀಡುವುದರೊಂದಿಗೆ ಅವರ ಮುಂದಿನ ಅಧಿಕಾರಾವಧಿ ಮೊಟಕುಗೊಂಡಿತು. ಬಳಿಕ ಆರ್.ಗುಂಡೂರಾವ್ ಕರ್ನಾಟಕದ ಮುಖ್ಯಮಂತ್ರಿಯಾದರು.
ಆ ಬಳಿಕ ಕರ್ನಾಟಕದ ಮುಖ್ಯಮಂತ್ರಿಗಳಾದವರ ಅಧಿಕಾರಾವಧಿಯನ್ನು ಅನುಕ್ರಮಣಿಕೆಯಲ್ಲಿ ನೀಡಲಾಗಿದೆ. ಈ ಅವಧಿಯಲ್ಲಿ ಕರ್ನಾಟಕ 19 ಸರ್ಕಾರಗಳನ್ನು ಕಂಡಿದ್ದು, ನಾಲ್ಕು ಬಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇತ್ತು. ಎಸ್.ಎಂ.ಕೃಷ್ಣ 1999-2004ರ ಅವಧಿಯಲ್ಲಿ ಸ್ಥಿರ ಸರ್ಕಾರ ನೀಡಿದರೂ, ತಮ್ಮ ಐದು ವರ್ಷಗಳ ಅಧಿಕಾರಾವಧಿ ಮುಗಿಯುವ ಐದು ತಿಂಗಳು ಮೊದಲೇ ಚುನಾವಣೆ ಎದುರಿಸುವ ನಿರ್ಧಾರ ಕೈಗೊಂಡರು.
ಆರ್.ಗುಂಡೂರಾವ್: 1980ರ ಜನವರಿಯಿಂದ 1983ರ ಜನವರಿ
ಜನಪ್ರಿಯ ಕಾಂಗ್ರೆಸ್ ಮುಖಂಡ, ಖ್ಯಾತ ಬ್ಯಾಡ್ಮಿಂಟನ್ ಪಟು ಗುಂಡೂರಾವ್ ಅವರು ಡಿ.ದೇವರಾಜ ಅರಸ್ ನೇತೃತ್ವದ ಎರಡನೇ ಅವಧಿಯ ಸರ್ಕಾರದಲ್ಲಿ ಸಚಿವರಾಗಿ ಬಳಿಕ ಮುಖ್ಯಮಂತ್ರಿ ಹುದ್ದೆಗೇರಿದರು. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹದಿಂದ ಅರಸು ಶಾಸಕರ ಬೆಂಬಲ ಕಳೆದುಕೊಂಡ ಹಿನ್ನೆಲೆಯಲ್ಲಿ ಗುಂಡೂರಾವ್ ಸಿಎಂ ಗಾದಿ ಏರಿದರು. ಅವರ ಅವಧಿ ಮುಗಿದ ಬಳಿಕ, ಅವರು ಮುಂದಿನ ಗೆಲುವಿಗೆ 1989ರ ಲೋಕಸಭಾ ಚುನಾವಣೆವರೆಗೆ ಕಾಯಬೇಕಾಯಿತು.
ರಾಮಕೃಷ್ಣ ಹೆಗಡೆ: 1983- 1988 (ಮೂರು ಬಾರಿ)
ಮೂರು ಬಾರಿಯ ಸಿಎಂ ರಾಮಕೃಷ್ಣ ಹೆಗಡೆ, ಕರ್ನಾಟಕದ ಮೊಟ್ಟಮೊದಲ ಕಾಂಗ್ರೆಸ್ಸೇತರ ಪಕ್ಷದ ಮುಖ್ಯಮಂತ್ರಿ. 1983ರ ಚುನಾವಣೆಯಲ್ಲಿ ಜನತಾ ಪಕ್ಷ ಅತ್ಯಧಿಕ ಸ್ಥಾನಗಳನ್ನು ಗೆದ್ದು, ಹೆಗಡೆ ಮುಖ್ಯಮಂತ್ರಿಯಾದರು. ಆದರೆ 1984ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ದಯನೀಯವಾಗಿ ಸೋತ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. 1985ರ ಚುನಾವಣೆಯಲ್ಲಿ ಹೆಗಡೆ ನೇತೃತ್ವದ ಜನತಾ ಪಕ್ಷ 139 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಮುಖ್ಯಮಂತ್ರಿಯಾದರು. ಬಳಿಕ 1986 ಹಾಗೂ 1988ರಲ್ಲಿ ಹೀಗೆ ಎರಡು ಬಾರಿ ಭ್ರಷ್ಟಾಚಾರದ ಆರೋಪ ಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದರು.
ಎಸ್.ಆರ್.ಬೊಮ್ಮಾಯಿ: 1988ರ ಆಗಸ್ಟ್ ನಿಂದ 1989ರ ಏಪ್ರಿಲ್
ಭಾರತ ಬಿಟ್ಟು ತೊಲಗಿ ಚಳವಳಿಯ ಮುಖಂಡ, ಜನತಾದಳದ ಸೋಮಪ್ಪ ರಾಯಪ್ಪ ಬೊಮ್ಮಾಯಿ ಸಮೂಹ ನಾಯಕ. ಮೂರನೇ ಬಾರಿ ಹೆಗಡೆ ರಾಜೀನಾಮೆ ನೀಡಿದಾಗ ಇವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ಇವರ ಅಧಿಕಾರಾವಧಿ ಅಲ್ಪಾಯುಷಿ. ಜನತಾ ಪಕ್ಷದಲ್ಲೇ ಬದಲಾವಣೆಯಾಗಿ ಲೋಕದಳ ರಚನೆಯಾಯಿತು. ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಅವಕಾಶವನ್ನೂ ನೀಡದೇ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಿದರು. ಇದನ್ನು ಸುಪ್ರೀಂಕೋರ್ಟ್ನಲ್ಲಿ ಬಳಿಕ ಪ್ರಶ್ನಿಸಲಾಯಿತು. ಈ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದೇಶದ ರಾಜಕೀಯ ಇತಿಹಾಸದಲ್ಲೇ ಐತಿಹಾಸಿಕ ಎನಿಸಿದ ತೀರ್ಪು ನೀಡಿ, ರಾಜ್ಯಪಾಲರ ಅಧಿಕಾರಗಳಿಗೆ ಮಿತಿಯನ್ನು ಸೂಚಿಸಿತು.
ವೀರೇಂದ್ರ ಪಾಟೀಲ್: 1989ರ ನವೆಂಬರ್ ನಿಂದ 1990ರ ಅಕ್ಟೋಬರ್
ಗುಲ್ಬರ್ಗ ಜಿಲ್ಲೆಯ ಪ್ರಭಾವಿ ಮುಖಂಡ 1968ರಿಂದ 1971ರವರೆಗೆ ಕರ್ನಾಟಕದ ಚುಕ್ಕಾಣಿ ಹಿಡಿದಿದ್ದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಮತ್ತೆ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಆದರೆ ಬಳಿಕ ಪಕ್ಷದ ಹೈಕಮಾಂಡ್ ಅವರನ್ನು ಕಿತ್ತುಹಾಕಿತು. ಆಗ ರಾಜ್ಯಪಾಲರು ಮಧ್ಯಂತರ ಅವಧಿಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದರು.
ಎಸ್.ಬಂಗಾರಪ್ಪ: 1990ರ ಅಕ್ಟೋಬರ್ ನಿಂದ 1992ರ ನವೆಂಬರ್ ವರೆಗೆ
ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜೀವ್ಗಾಂಧಿ, ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದರು. ಆದರೆ ಪಕ್ಷದ ಕೇಂದ್ರ ನಾಯಕತ್ವದ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡಬೇಕಾಯಿತು.
ವೀರಪ್ಪ ಮೊಯ್ಲಿ : 1992ರ ನವೆಂಬರ್ ನಿಂದ 1994ರ ಡಿಸೆಂಬರ್
ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ 1970ರ ದಶಕದಲ್ಲಿ ಕರ್ನಾಟಕದಲ್ಲಿ ಸಚಿವರಾಗಿದ್ದ ಇವರನ್ನು ಅಂದಿನ ಪಕ್ಷಾಧ್ಯಕ್ಷ ರಾಜೀವ್ ಗಾಂಧಿಯವರು ಬಂಗಾರಪ್ಪನವರ ಉತ್ತರಾಧಿಕಾರಿಯಾಗಿ ನೇಮಕ ಮಾಡಿದರು. ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿ ಪೂರ್ಣಗೊಳ್ಳುವರೆಗೂ ಇವರು ಮುಖ್ಯಮಂತ್ರಿಯಾಗಿ ಮುಂದುವರಿದರು.
ಎಚ್.ಡಿ.ದೇವೇಗೌಡ: 1994ರ ಡಿಸೆಂಬರ್- 1996ರ ಮೇ
ಎಚ್.ಡಿ.ದೇವೇಗೌಡ ಅವರು 1994ರ ಚುನಾವಣೆಯಲ್ಲಿ ಜನತಾದಳ 115 ಸ್ಥಾನಗಳನ್ನು ಗೆದ್ದಾಗ ಮುಖ್ಯಮಂತ್ರಿ ಗಾದಿ ಏರಿದರು. ರಾಜ್ಯದಲ್ಲಿ ಅತ್ಯುನ್ನತ ನಾಯಕರಾಗಿದ್ದ ಅವರು ಸಹಜವಾಗಿಯೇ ಸಿಎಂ ಹುದ್ದೆಗೆ ಆಯ್ಕೆಯಾದರು. ಆದರೆ 1996ರಲ್ಲಿ ಆಕಸ್ಮಿಕವಾಗಿ ದೇಶದ ಪ್ರಧಾನಿ ಹುದ್ದೆಯ ಭಾಗ್ಯ ಒದಗಿಬಂದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಜೆ.ಎಚ್.ಪಟೇಲ್: 1996ರ ಮೇ ತಿಂಗಳಿಂದ 1999ರ ಅಕ್ಟೋಬರ್ ವರೆಗೆ
ಎಚ್.ಡಿ.ದೇವೇಗೌಡ ಅವರು ಸಿಎಂ ಹುದ್ದೆಗೆ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿ, ದೇಶದ ಪ್ರಧಾನಿಯಾದಾಗ ಜನತಾದಳದ ಜಯದೇವಪ್ಪ ಹಾಲಪ್ಪ ಪಟೇಲ್ ಸಿಎಂ ಹುದ್ದೆ ಅಲಂಕರಿಸಿದರು. ಜೆಡಿಎಸ್ 115 ಶಾಸಕರನ್ನು ಹೊಂದಿತ್ತು. ಇನ್ನೂ ಮೂರು ವರ್ಷಗಳ ಅಧಿಕಾರಾವಧಿ ಬಾಕಿ ಇತ್ತು. ಉಳಿದ ಅವಧಿಯನ್ನು ಪಟೇಲ್, ಸಿಎಂ ಆಗಿ ಪೂರ್ಣಗೊಳಿಸಿದರು.
ಎಸ್.ಎಂ.ಕೃಷ್ಣ: 1999-2004
1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಕೃಷ್ಣ, 2004ರವರೆಗೂ ಈ ಹುದ್ದೆಯಲ್ಲಿ ಮುಂದುವರಿದರು. ವಿಧಾನಸಭೆಯ ಅವಧಿ ಮುಕ್ತಾಯಕ್ಕೆ ಇನ್ನೂ ಐದು ತಿಂಗಳು ಇರುವಾಗಲೇ ಚುನಾವಣೆಗೆ ಮುಂದಾಗದಿದ್ದರೆ, ಎಸ್.ಎಂ.ಕೃಷ್ಣ ಐದು ವರ್ಷಗಳ ಅವಧಿ ಪೂರ್ಣಗೊಳಿಸಬಹುದಿತ್ತು.
ಧರಂ ಸಿಂಗ್: 2004 ಮೇ- 2006ರ ಜನವರಿ
2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 58 ಹಾಗೂ ಕಾಂಗ್ರೆಸ್ ಪಕ್ಷ 65 ಸ್ಥಾನ ಗೆದ್ದಿದ್ದವು. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಹಿರಿಯ ಮುಖಂಡ ಧರಂ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಮಣೆಹಾಕಲಾಗುತ್ತಿದೆ ಎಂದು ಆಪಾದಿಸಿ ಎರಡು ವರ್ಷಗಳ ಬಳಿಕ ಜೆಡಿಎಸ್, ಬೆಂಬಲ ಹಿಂದಕ್ಕೆ ಪಡೆಯವವರೆಗೂ ಇವರು ಮುಖ್ಯಮಂತ್ರಿಯಾಗಿದ್ದರು.
ಎಚ್.ಡಿ.ಕುಮಾರಸ್ವಾಮಿ: 2006ರ ಫೆಬ್ರವರಿ- 2007ರ ಅಕ್ಟೋಬರ್
ಜನತಾದಳ, ಕಾಂಗ್ರೆಸ್ ಜತೆಗಿನ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆ ಸೇರಿ ಸರ್ಕಾರ ನಡೆಸಲು ಮುಂದಾದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಯುಡಿಯೂರಪ್ಪ ಉಪಮುಖ್ಯಮಂತ್ರಿಯಾಗಲು ಬಿಜೆಪಿ ಒಪ್ಪಿಕೊಂಡಿತು. ಈ ಹಂತದಲ್ಲಿ ದೇವೇಗೌಡ ಅವರು ತಮ್ಮ ಮಗ ಬಿಜೆಪಿ ಜತೆ ಕೈಜೋಡಿಸಿದ್ದನ್ನು ವಿರೋಧಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು.
2007ರಲ್ಲಿ ಕುಮಾರಸ್ವಾಮಿ, ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದ ಹೈಡ್ರಾಮಾ ಬಳಿಕ ರಾಜೀನಾಮೆ ನೀಡಿದರು. ಎರಡು ದಿನ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಆದಾಗ್ಯೂ ಬಳಿಕ ಕುಮಾರಸ್ವಾಮಿ, ಬಿಜೆಪಿಗೆ ಬೆಂಬಲ ನೀಡಲು ಒಪ್ಪಿಕೊಂಡು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
2007ರ ನವೆಂಬರ್- 2008ರ ಮೇ: ರಾಷ್ಟ್ರಪತಿ ಆಳ್ವಿಕೆ
ಬಿ.ಎಸ್.ಯಡಿಯೂರಪ್ಪ: 2008 ಮೇ- 2011ರ ಜುಲೈ
ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದರೆ 2007ರ ನವೆಂಬರ್ ನಲ್ಲಿ ಏಳು ದಿನಗಳ ಅವಧಿಗೆ ಮತ್ತು ರಾಷ್ಟ್ರಪತಿ ಆಡಳಿತದ ವೇಳೆ ಸಿಎಂ ಆಗಿದ್ದ ಯಡಿಯೂರಪ್ಪ, ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಕಾರಣರಾದರು. ಬಿಜೆಪಿ 110 ಸ್ಥಾನಗಳನ್ನು ಗೆದ್ದಿತು. ಆದರೆ 2011ರಲ್ಲಿ ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಇವರನ್ನು ಹೆಸರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.
ಡಿ.ವಿ.ಸದಾನಂದ ಗೌಡ: 2011ರ ಆಗಸ್ಟ್- 2012ರ ಜುಲೈ
ಪ್ರಸ್ತುತ ಕೇಂದ್ರ ಸಚಿವರಾಗಿರುವ ಡಿ.ವಿ.ಸದಾನಂದಗೌಡ, ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಆದರು. ಯಡಿಯೂರಪ್ಪ ಅವರೇ ಸ್ವತಃ ಆಯ್ಕೆ ಮಾಡಿದ ಅಭ್ಯರ್ಥಿಯಾದರೂ, ಮುಖ್ಯಮಂತ್ರಿಯಾದ ಕೆಲವೇ ತಿಂಗಳಲ್ಲಿ ಯಡಿಯೂರಪ್ಪ ಜತೆಗೆ ಸಂಘರ್ಷಕ್ಕೆ ಇಳಿದರು. ಇದರಿಂದಾಗಿ ಯಡಿಯೂರಪ್ಪ ಹಾಗೂ ಸದಾನಂದ ಗೌಡ ಬಣಗಳನ್ನು ಒಗ್ಗೂಡಿಸುವುದು ಸಾಧ್ಯವಾಗಲಿಲ್ಲ. 2012ರ ಜುಲೈನಲ್ಲಿ ಪಕ್ಷದ ಹೈಕಮಾಂಡ್ ಅವರ ರಾಜೀನಾಮೆಗೆ ಸೂಚನೆ ನೀಡಿ, ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಿತು.
ಜಗದೀಶ್ ಶೆಟ್ಟರ್: 2012ರ ಜುಲೈ- 2013ರ ಮೇ
ಸಿದ್ದರಾಮಯ್ಯ ಅವರಿಗಿಂತ ಮೊದಲು ಈ ಹುದ್ದೆಯಲ್ಲಿದ್ದ ಜಗದೀಶ್ ಶೆಟ್ಟರ್, ಇದೀಗ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ. ಸದಾನಂದ ಗೌಡ ಅವರ ರಾಜೀನಾಮೆ ಪಡೆದ ಪಕ್ಷದ ಹೈಕಮಾಂಡ್, ಶೆಟ್ಟರ್ ಅವರನ್ನು ಸಿಎಂ ಗಾದಿಯಲ್ಲಿ ಕೂರಿಸಿತು. 2013ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ಶೆಟ್ಟರ್ ರಾಜೀನಾಮೆ ನೀಡಿದರು.
ಸಿದ್ದರಾಮಯ್ಯ ಸರ್ಕಾರ ಐದು ವರ್ಷಗಳ ಸಂಪೂರ್ಣ ಅವಧಿಯನ್ನು ಮೇ 28ರಂದು ಪೂರೈಸುವ ಮುನ್ನ ಕರ್ನಾಟಕ ವಿಧಾನಸಭೆಗೆ ಮೇ 12ರಂದು ಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.
ಸಿದ್ದರಾಮಯ್ಯ ಬಜೆಟ್ ದಾಖಲೆ
ಜತೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಆರನೆ ಹಾಗೂ ಹಣಕಾಸು ಸಚಿವರಾಗಿ ಹದಿಮೂರು ಆಯವ್ಯಯ ಮಂಡನೆ ಮಾಡಿದ ಹಿರಿಮೆಯೂ ಸಿದ್ದರಾಮಯ್ಯನವರ ಬೆನ್ನಿಗಿದ್ದು, ರಾಮಕೃಷ್ಣ ಹೆಗ್ಡೆ ( 13) ಬಳಿಕ ಸಿದ್ದರಾಮಯ್ಯನವರೇ ಅತ್ಯಂತ ಹೆಚ್ಚು ಬಜೆಟ್ ಮಂಡನೆ ಮಾಡಿದ್ದಾರೆಂಬುದು ಗಮನಾರ್ಹ.