ಫೈವ್ ಸ್ಟಾರ್ ಹೊಟೇಲ್ ಗಿಂತ ಕಡಿಮೆಯಿಲ್ಲ ಭಾರತದ ಈ ರೈಲು !
ಭಾರತೀಯ ರೈಲ್ವೆಯು ತನ್ನ ಐಷಾರಾಮಿ ಖಾಸಗಿ ಸಲೂನ್ಗಳಲ್ಲಿ ಪ್ರಯಾಣಿಸುವ ಅವಕಾಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದೆ. ಇಂತಹ ಮೊದಲ ಖಾಸಗಿ ಸಲೂನ್ ಕಾರ್ ಆರು ಪ್ರಯಾಣಿಕರೊಂದಿಗೆ ಶುಕ್ರವಾರ, ಮಾ.30ರಂದು ಹಳೆಯ ದಿಲ್ಲಿ ರೈಲ್ವೆ ನಿಲ್ದಾಣದಿಂದ ಜಮ್ಮು-ಕಾಶ್ಮೀರದ ಕತ್ರಾಕ್ಕೆ ಪ್ರಯಾಣಿಸಿದ್ದು, ಎ.2ರಂದು ವಾಪಸಾಗಲಿದೆ.
ಖಾಸಗಿ ಪ್ರವಾಸ ಸಂಸ್ಥೆ ರಾಯಲ್ ಇಂಡಿಯಾ ಟ್ರೇನ್ ಜರ್ನಿಸ್ ನಾಲ್ಕು ದಿನಗಳ ಪ್ರವಾಸಕ್ಕೆ ತನ್ನ ಆರು ಗ್ರಾಹಕರಿಗಾಗಿ ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ಈ ಸಲೂನ್ನ್ನು ಎರಡು ಲಕ್ಷ ರೂ.ಗಳನ್ನು ತೆತ್ತು ಬಾಡಿಗೆಗೆ ಪಡೆದುಕೊಂಡಿದ್ದು, ಅದನ್ನು ಜಮ್ಮು ಮೇಲ್ ರೈಲಿಗೆ ಜೋಡಿಸಲಾಗಿದೆ.
ಈ ಸಲೂನ್ ಲಿವಿಂಗ್ ರೂಮ್, ಎರಡು ಹವಾ ನಿಯಂತ್ರಿತ ಬೆಡ್ರೂಮ್ಗಳನ್ನು ಹೊಂದಿದೆ. ಈ ಪೈಕಿ ಒಂದು ಡಬಲ್ ಬೆಡ್ರೂಮ್ ಆಗಿದ್ದರೆ ಇನ್ನೊಂದು ಎಸಿ ಮೊದಲ ದರ್ಜೆಯ ಕೂಪೆಯಲ್ಲಿರುವ ಬೆಡ್ರೂಮ್ ಆಗಿದೆ. ಇವೆರಡೂ ಅಟ್ಯಾಚ್ಡ್ ಬಾತ್ರೂಮ್ಗಳನ್ನು ಹೊಂದಿವೆ. ಅಲ್ಲದೆ ಭೋಜನದ ಹಾಲ್ ಮತ್ತು ಸುಸಜ್ಜಿತ ಪಾಕಶಾಲೆ ಈ ಸಲೂನ್ನಲ್ಲಿವೆ. ಜೊತೆಗೆ ಬಟ್ಟೆಗಳನ್ನು ಒಗೆದು ಸ್ವಚ್ಛಗೊಳಿಸುವ ವ್ಯಾಲೆಟ್ ಸರ್ವಿಸ್ ಕೂಡ ಇದೆ. ಸದ್ಯ ಈ ಸೇವೆ ಉಚಿತವಾಗಿದೆ.
ಭಾರತೀಯ ರೈಲ್ವೆಯು ತನ್ನೆಲ್ಲ ರೈಲ್ವೆ ವಲಯಗಳಲ್ಲಿ ಒಟ್ಟು 336 ಸಲೂನ್ ಕಾರುಗಳನ್ನು ಹೊಂದಿದ್ದು, ಈ ಪೈಕಿ 62ರಲ್ಲಿ ಹವಾ ನಿಯಂತ್ರಣ ವ್ಯವಸ್ಥೆಯಿದೆ.
ಈವರೆಗೆ ರಸ್ತೆ ಮತ್ತು ವಾಯುಮಾರ್ಗದ ಸಂಪರ್ಕವಿಲ್ಲದ ಸ್ಥಳಗಳಿಗೆ ಹಿರಿಯ ರೈಲ್ವೆ ಅಧಿಕಾರಿಗಳನ್ನು ಕರೆದೊಯ್ಯಲು ಮೀಸಲಾಗಿದ್ದ ಈ ಸಲೂನ್ಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ ನಂತರ ಜಮ್ಮುವಿಗೆ ಪ್ರವಾಸ ಕೈಗೊಂಡಿರುವ ಆರು ವಿಐಪಿ ಗ್ರಾಹಕರು ಐಷಾರಾಮಿ ಅನುಭವವನ್ನು ಪಡೆಯುತ್ತಿರುವ ಮೊದಲ ಪ್ರಯಾಣಿಕರಾಗಿದ್ದಾರೆ.