ಆಸ್ಪತ್ರೆ ಬೆಡ್‌ನಲ್ಲೇ ಕೂತು ಮಾಡಿದ ವೆಬ್‌ಸೈಟ್ ಈಗ ಕೋವಿಡ್ ಮಾಹಿತಿಯ ಕೇಂದ್ರ !
ಅಮೀನ್ ಮುದಸ್ಸರ್ ಪ್ರಯತ್ನದಿಂದ ಲಕ್ಷಕ್ಕೂ ಹೆಚ್ಚು ಮಂದಿಗೆ ಪ್ರಯೋಜನ

ಬೆಂಗಳೂರು, ಅ.11: ಕೋವಿಡ್ ಸೋಂಕು ತಗಲಿರುವುದು ದೃಢಪಡುತ್ತಿದ್ದಂತೆ ಬಡವರು, ಮಧ್ಯಮ, ಕೆಳ ವರ್ಗದ ಜನರಲ್ಲಿ ಆತಂಕ ಮನೆ ಮಾಡುವುದು ಸಹಜ. ಆದರೆ, ಇಂತಹ ಸಂದರ್ಭದಲ್ಲಿ ಸೋಂಕಿತರಿಗಾಗಿ ಸರಕಾರದಿಂದ ಲಭ್ಯವಿರುವ ಸೌಲಭ್ಯಗಳು, ಮಾರ್ಗಸೂಚಿಗಳು, ಆಸ್ಪತ್ರೆಗಳ ವಿವರ, ಆಕ್ಸಿಜನ್ ಸಿಲಿಂಡರ್, ಹಾಸಿಗೆಗಳ ಲಭ್ಯತೆ, ಪ್ಲಾಸ್ಮಾ ಲಭ್ಯತೆ ಇವೆಲ್ಲವೂ ಒಂದೇ ಕಡೆ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ?. ಇಂತಹದೊಂದು ಪ್ರಯತ್ನಕ್ಕೆ ಸ್ವಯಂಪ್ರೇರಿತರಾಗಿ ಕೈಹಾಕಿ ಯಶಸ್ವಿಯಾಗಿ ಲಕ್ಷಕ್ಕೂ ಹೆಚ್ಚು ಮಂದಿಗೆ ನೆರವಾಗಿದ್ದಾರೆ ಬೆಂಗಳೂರಿನ ಸಿಗ್ಮಾ ಫೌಂಡೇಶನ್‌ನ ಮುಖ್ಯಸ್ಥ ಅಮೀನ್ ಮುದಸ್ಸರ್ ಅವರು. ಆ ವೆಬ್‌ಸೈಟ್ ಹೆಸರು covidhelplinebangalore.com
ಕೋವಿಡ್ ಸೋಂಕಿತರಿಗೆ ನೆರವಾಗುವ ಮರ್ಸಿ ಮಿಷನ್ ತಂಡದಲ್ಲಿ ಸಕ್ರಿಯವಾಗಿದ್ದ ಅಮೀನ್ ಕೋವಿಡ್ ಸೋಂಕಿತರು ಎದುರಿಸುವ ಸಮಸ್ಯೆಗಳನ್ನು ಪ್ರತ್ಯಕ್ಷ ನೋಡಿದ್ದರು. ಆ ಪೈಕಿ ಅವರು ಗುರುತಿಸಿದ ಬಹುದೊಡ್ಡ ಸಮಸ್ಯೆ ಮಾಹಿತಿ ಕೊರತೆಯದ್ದು. ಬಳಿಕ ಸ್ವತಃ ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ ಅಮೀನ್ ಆಸ್ಪತ್ರೆ ಬೆಡ್‌ನಲ್ಲೇ ಕೂತು ಮೊದಲು ಮಾಡಿದ ಕೆಲಸ ಕೊರೊನ ಸಮಗ್ರ ಮಾಹಿತಿಗಳನ್ನು ಒಂದೇ ಕಡೆ ಒದಗಿಸುವ ಒಂದು ವೆಬ್ ಸೈಟ್ ಮಾಡುವ ತಯಾರಿ.
ಈ ವೆಬ್‌ಸೈಟ್‌ನಲ್ಲಿ ಕೋವಿಡ್-19ಗೆ ಸಂಬಂಧಿಸಿದ ತಾಜಾ ಸುದ್ದಿಗಳು, ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು ಮನವಿ, ಪ್ಲಾಸ್ಮಾಗಾಗಿ ಬೇಡಿಕೆ, ಕೋವಿಡ್ ಸೋಂಕಿನಿಂದ ಗುಣಮುಖರಾದವರ ಮಾಹಿತಿ, ಪ್ಲಾಸ್ಮಾ ದಾನ ಮಾಡಲು ಲಭ್ಯವಿರುವವರು, ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಆರ್ಥಿಕ ನೆರವು, ಆಕ್ಸಿಜನ್ ಸಿಲಿಂಡರ್‌ಗಳ ಮಾಹಿತ, ಕೋವಿಡ್ ಸೋಂಕಿತರಿಗೆ ಉಚಿತ ವೈದ್ಯಕೀಯ ಸಮಾಲೋಚನೆ, ಕೋವಿಡ್ ಪರೀಕ್ಷೆಯನ್ನು ಉಚಿತವಾಗಿ ಮಾಡುವಂತಹ ಸರಕಾರಿ ಫೀವರ್ ಕ್ಲೀನಿಕ್‌ಗಳ ಮಾಹಿತಿ, ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗೆ ಸೇರಿಸಲು ಲಭ್ಯವಿರುವ ಆ್ಯಂಬುಲೆನ್ಸ್‌ಗಳ ಮಾಹಿತಿ, ಉಚಿತ ಮೊಬೈಲ್ ವ್ಯಾನ್ ಪರೀಕ್ಷಾ ಘಟಕ, ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಮಾಹಿತಿ. ಖಾಸಗಿ ಪ್ರಯೋಗಾಲಯಗಳ ಮಾಹಿತಿ, ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರ, ಕೋವಿಡ್‌ಗಾಗಿ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿಯ ಮಾಹಿತಿ, ಪ್ರಯಾಣಿಕರಿಗೆ ಸರಕಾರಗಳಿಂದ ಕೊಟ್ಟಿರುವ ಮಾರ್ಗಸೂಚಿಗಳು, ಆರೋಗ್ಯ ಮಿತ್ರಕ್ಕೆ ಸಂಬಂಧಿಸಿದ ಮಾಹಿತಿ, ಔಷಧಿಗಳ ವಿತರಕರ ಮಾಹಿತಿ.
ಕೋವಿಡ್‌ಗೆ ಸಂಬಂಧಿಸಿದ ವೀಡಿಯೊಗಳು, ಕೇಂದ್ರ ಹಾಗೂ ರಾಜ್ಯ ಸರಕಾರದ ನೋಟಿಫಿಕೇಷನ್‌ಗಳು, ಬಿಬಿಎಂಪಿಯ ನೋಟಿಫಿಕೇಷನ್‌ಗಳು, ಐಸಿಎಂಆರ್ ನೋಟಿಫಿಕೇಷನ್‌ಗಳು ಹಾಗೂ ಬೆಂಗಳೂರಿನಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗಳ ಮಾಹಿತಿ. ಇವೆಲ್ಲವೂ ಒಂದೇ ಕಡೆ ಜನ ಸಾಮಾನ್ಯರಿಗೆ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ಮಾಹಿತಿಯ ಕೊರತೆಯಿಂದಾಗಿ ಜನಸಾಮಾನ್ಯರು ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯಲು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಲಕ್ಷಾಂತರ ರೂ.ಗಳನ್ನು ವ್ಯಯಿಸುವಂತಾಗಿದೆ. ಜು.11 ರಂದು ಲೋಕಾರ್ಪಣೆಗೊಂಡ ಈ ವೆಬ್‌ಸೈಟ್ ಗೆ ಅ.9ರವರೆಗೆ 1.45 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ವಿವಿಧ ವಿಭಾಗಗಳ ಒಟ್ಟು ಸುಮಾರು 11 ಲಕ್ಷ ಪೇಜ್ ಗಳನ್ನು ಜನರು ಇದರಲ್ಲಿ ನೋಡಿದ್ದಾರೆ. ರಾಜ್ಯ ಸರಕಾರವು ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಚಿಸಿದ ವಿಡಿಯೋಗಳಲ್ಲಿಯೂ ಈ ವೆಬ್‌ಸೈಟ್ ಅನ್ನು ಉಲ್ಲೇಖಿಸಿದೆ. ಅಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟ್ವೀಟರ್ ಪೇಜ್‌ನಲ್ಲಿ ಒಂದು ವಾರಗಳ ಕಾಲ ಈ ವೆಬ್‌ಸೈಟ್‌ನ ಮಾಹಿತಿಯನ್ನು ಪಿನ್ ಮಾಡಿ ಇಡಲಾಗಿತ್ತು.
ಶಿಕ್ಷಣ, ವೃತ್ತಿ ಆಯ್ಕೆ ಕುರಿತ ಕೌನ್ಸಿಲಿಂಗ್ ಮಾಡುವಂತಹ ಅಮೀನ್ ಮುದಸ್ಸರ್, ಈಗಾಗಲೆ ಸಾಕಷ್ಟು ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಬಳಿ ಸರ್ವರ್ ಸ್ಪೇಸ್ ಲಭ್ಯವಿದ್ದ ಕಾರಣ ಕಡಿಮೆ ಸಮಯದಲ್ಲಿ ಈ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ತಮ್ಮ ಹಾಗೂ ತಮ್ಮ ತಂಡದ ಸದಸ್ಯರ ಮೂಲಕ ಈ ವೆಬ್‌ಸೈಟ್‌ಗೆ ಅಗತ್ಯವಿರುವ ಸಂಪನ್ಮೂಲವನ್ನು ಕ್ರೋಢೀಕರಿಸಿ ಜನರ ಸೇವೆಗೆ ಮುಂದಾಗಿದ್ದಾರೆ. ಇಮ್ರಾನ್(ಇಪ್ಲಸ್), ಮುಹಮ್ಮದ್ ಝಬೀವುಲ್ಲಾ, ಇಬ್ರಾಹಿಮ್ ಖಲೀಲುಲ್ಲಾ ಖಾನ್, ಇಸಾಕ್ ಅಹ್ಮದ್ ಖಾನ್, ತೌಸಿಫ್ ಅಹ್ಮದ್, ಮುಹಮ್ಮದ್ ಇಸ್ಮಾಯಿಲ್, ಅಬ್ದುಲ್ ರಝಾಕ್ ನಾಯ್ಡು ಹಾಗೂ ಮುಹಮ್ಮದ್ ಶುಐಬ್ ಈ ಕೆಲಸದಲ್ಲಿ ಅಮೀನ್ ಅವರಿಗೆ ನೆರವಾಗಿದ್ದಾರೆ.
ಯುಟ್ಯೂಬ್ ಚಾನೆಲ್ ಅಭಿವೃದ್ಧಿ
ಈ ವೆಬ್‌ಸೈಟ್ ಜೊತೆಗೆ ಕೋವಿಡ್ ಹೆಲ್ಪ್‌ಲೈನ್ ಬೆಂಗಳೂರು ಹೆಸರಿನಲ್ಲಿಯೇ ಒಂದು ಯೂಟ್ಯೂಬ್ ಚಾನೆಲ್ ಅನ್ನು ಈ ತಂಡ ಅಭಿವೃದ್ಧಿಪಡಿಸಿದೆ. ಇದರಲ್ಲಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಜಾಗೃತಿ ಮೂಡಿಸುವ ವೀಡಿಯೊಗಳನ್ನು ಹಾಕಲಾಗುತ್ತಿದ್ದು, ಇವುಗಳು ಸಾಕಷ್ಟು ಜನಮನ್ನಣೆಗಳಿಸಿವೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಯಾವ ರೀತಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ ಎಂಬ ಮಾಹಿತಿಯನ್ನು ಒಳಗೊಂಡ ಕನ್ನಡ ವೀಡಿಯೊ ಸೆ.30ರಂದು ಹಾಕಿದೆವು. 9 ದಿನಗಳಲ್ಲಿ 18 ಸಾವಿರ ಮಂದಿ ವೀಕ್ಷಿಸಿದ್ದಾರೆ.
ನಾನು ಸೇರಿದಂತೆ ನನ್ನ ಕುಟುಂಬದಲ್ಲಿ ಐವರು ಕೋವಿಡ್ ಪಾಸಿಟಿವ್ ಆಗಿದ್ದರು. ನಮಗೆ ಎಲ್ಲ ಕ್ಷೇತ್ರಗಳ ಜನರ ಪರಿಚಯ ಇರುವುದರಿಂದ ಸುಲಭವಾಗಿ ಮಾಹಿತಿ ಸಿಕ್ಕಿತು. ಆದರೆ ಮಾಹಿತಿಯ ಕೊರತೆಯಿಂದ ಜನಸಾಮಾನ್ಯರು ಸಮಸ್ಯೆಗಳನ್ನು ಎದುರಿಸಬಾರದು ಎಂಬ ಸಂಕಲ್ಪದಿಂದ ಈ ವೆಬ್‌ಸೈಟ್ ಅನ್ನು ನನ್ನ ಸ್ನೇಹಿತರ ಜೊತೆ ಸೇರಿ ಅಭಿವೃದ್ಧಿಪಡಿಸಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಲಕ್ಷಾಂತರ ಜನರು ಈ ವೆಬ್‌ಸೈಟ್ ಮೂಲಕ ಮಾಹಿತಿಯನ್ನು ಪಡೆದಿದ್ದಾರೆ.
-ಅಮೀನ್ ಮುದಸ್ಸರ್, ಸಿಗ್ಮಾ ಫೌಂಡೇಷನ್ ಮುಖ್ಯಸ್ಥ