ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಬದಲಿಸುವುದು ಹೇಗೆ?
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಈಡಿಎಐ)ವು ಆಧಾರ್ ಕಾರ್ಡ್ ಹೊಂದಿರುವವರಿಗೆ ತಮ್ಮ ಆಧಾರ್ ಕಾರ್ಡ್ ನಲ್ಲಿಯ ಮಾಹಿತಿಗಳ ನಿಖರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಸೇರಿದಂತೆ ಆಧಾರ್ ಕಾರ್ಡ್ ವಿವರಗಳನ್ನು ನವೀಕರಿಸಲು ನಿಯಮಿತವಾಗಿ ಸಲಹೆ ನೀಡುತ್ತಿರುತ್ತದೆ. ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ತಮ್ಮ ಆಧಾರ್ ವಿವರಗಳನ್ನು ನವೀಕರಿಸಿಕೊಳ್ಳಬಹುದು. ಆದಾಗ್ಯೂ ಯುಐಡಿಎಐ ಕೆಲವು ವಿವರಗಳನ್ನು ಮಾತ್ರ ಆನ್ಲೈನ್ನಲ್ಲಿ ನವೀಕರಿಸಲು ಅವಕಾಶ ನೀಡುತ್ತದೆ. ಬಯೊಮೆಟ್ರಿಕ್ಸ್ ಅಥವಾ ಇತರ ವಿವರಗಳ ನವೀಕರಣಕ್ಕಾಗಿ ವ್ಯಕ್ತಿಯು ಸಮೀಪದ ಆಧಾರ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ನಿಮ್ಮ ಅಥವಾ ನಿಮ್ಮ ಕುಟುಂಬದ ಆಧಾರ ನೋಂದಣಿಗಾಗಿ ನೀವು ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ನಿಮ್ಮ ಜನಸಂಖ್ಯಾ ವಿವರಗಳು (ಹೆಸರು, ವಿಳಾಸ, ಜನ್ಮದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ) ನಿಮ್ಮ ಆಧಾರ್ ನಲ್ಲಿ ನವೀಕೃತಗೊಂಡಿಲ್ಲವಾದರೆ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅದನ್ನು ನವೀಕರಿಸಬಹುದು ಎಂದು ಆಧಾರ್ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐನ ಸೂಚನೆಯು ಹೇಳುತ್ತದೆ.
ಅಲ್ಲದೆ ಆಧಾರ್ ವಿವರಗಳನ್ನು,ವಿಶೇಷವಾಗಿ ಮಕ್ಕಳಿಗೆ 15 ವರ್ಷಗಳಾದಾಗ ಅವರ ಬಯೊಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಬೆರಳಚ್ಚು,ಐರಿಸ್ (ಕಣ್ಣಿನ ಪಾಪೆ) ಮತ್ತು ಭಾವಚಿತ್ರ ಸೇರಿದಂತೆ ಬಯೊಮೆಟ್ರಿಕ್ ವಿವರಗಳನ್ನು ಸಮೀಪದ ಆಧಾರ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಿಸುವುದು ಅಗತ್ಯವಾಗಿದೆ.
ಗಮನಾರ್ಹವಾಗಿ ಇತ್ತೀಚಿನ ಯುಐಡಿಎಐ ಪ್ರಕಟಣೆಯಂತೆ ದಾಖಲೆಗಳ ನವೀಕರಣ 2023,ಜೂ.14ರವರೆಗೆ ಉಚಿತವಾಗಿದೆ. ಜನರು ತಮ್ಮ ಗುರುತು ಮತ್ತು ವಿಳಾಸದ ಪುರಾವೆಗಳನ್ನು ಆನ್ಲೈನ್ ಮೂಲಕ ನವೀಕರಿಸಬಹುದು. ಆದಾಗ್ಯೂ ಮೊಬೈಲ್ ಸಂಖ್ಯೆಯ ನವೀಕರಣವನ್ನು ಆನ್ಲೈನ್ ನಲ್ಲಿ ಮಾಡಲಾಗುವುದಿಲ್ಲ ಮತ್ತು ಅದಕ್ಕೆ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಯಾವುದೇ ಅನಧಿಕೃತ ವ್ಯಕ್ತಿಯು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಕಲಿ ಸಂಖ್ಯೆಯೊಂದಿಗೆ ನವೀಕರಿಸಿ ಪ್ರಕ್ರಿಯೆಯ ದುರ್ಬಳಕೆ ಮಾಡಿಕೊಳ್ಳದಂತೆ ಈ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ.
ಹೀಗಾಗಿ ನೀವು ನಿಮ್ಮ ಸಿಮ್ ಕಾರ್ಡ್ ಬದಲಿಸಿದ್ದರೆ ಅಥವಾ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬಯಸಿದ್ದರೆ ನೀವು ಕಾಯಂ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಆಧಾರ್ ನವೀಕರಣ ಪ್ರಕ್ರಿಯೆಯಲ್ಲಿ ನಿಮಗೆ ನೆರವಾಗಲು ಹಂತ ಹಂತದ ಮಾರ್ಗದರ್ಶನ ಇಲ್ಲಿದೆ.....
►ನಿಮ್ಮ ಸಮೀಪದ ಆಧಾರ್ ಸೇವಾ ಕೇಂದ್ರ/ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ. ಯುಐಡಿಎಐ ವೆಬ್ಸೈಟ್ನಲ್ಲಿ (uidai.gov.in) ‘ಲೊಕೇಷನ್ ಎನ್ರೋಲ್ಮೆಂಟ್ ಸೆಂಟರ್’ ಮೇಲೆ ಕ್ಲಿಕ್ಕಿಸುವ ಮೂಲಕ ಸಮೀಪದ ಆಧಾರ್ ಕೇಂದ್ರವನ್ನು ತಿಳಿದುಕೊಳ್ಳಬಹುದು.
►ಮೊಬೈಲ್ ಸಂಖ್ಯೆಯನ್ನು ಬದಲಿಸಲು ಆಧಾರ್ ಸಹಾಯಾಧಿಕಾರಿ ನೀಡುವ ಆಧಾರ್ ಅಪ್ಡೇಟ್/ಕರೆಕ್ಷನ್ ಫಾರ್ಮ್ ಅನ್ನು ತುಂಬಿ.
►ನವೀಕರಣಕ್ಕಾಗಿ 50 ರೂ.ಗಳ ಕನಿಷ್ಠ ಸೇವಾ ಶುಲ್ಕವನ್ನು ಪಾವತಿಸಿ.
►ಆಧಾರ್ ಅಧಿಕಾರಿ ನಿಮಗೆ ನವೀಕರಣ ವಿನಂತಿ ಸಂಖ್ಯೆ (ಯುಆರ್ಎನ್)ಯನ್ನು ಒಳಗೊಂಡಿರುವ ಹಿಂಬರಹ ಚೀಟಿಯನ್ನು ನೀಡುತ್ತಾರೆ.
►ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಲು ನಿಮಗೆ ನೀಡಲಾಗಿರುವ ಯುಆರ್ಎನ್ ಅನ್ನು ಬಳಸಬಹುದು.
►ಸ್ಥಿತಿಗತಿಯನ್ನು ಪರಿಶೀಲಿಸಲು myaadhaar.uidai.gov.in ಗೆ ಭೇಟಿ ನೀಡಿ ಮತ್ತು Enrolement & Update Status ಮೇಲೆ ಕ್ಲಿಕ್ಕಿಸಿ. ನಿಮ್ಮ ಯುಆರ್ಎನ್ ಮತ್ತು ಕ್ಯಾಪ್ಚಾವನ್ನು ನಮೂದಿಸಿ
ಗಮನಿಸಿ, 90 ದಿನಗಳಲ್ಲಿ ಯುಐಡಿಎಐ ಡಾಟಾಬೇಸ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನವೀಕರಣಗೊಳ್ಳುತ್ತದೆ.