ಕೋವಿಡ್ ಕಾಲದ ತಪ್ಪುಗಳನ್ನು ತಡೆಯುವ ಆರೋಗ್ಯ ಸೇವೆ ಬೇಕು
ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯ ವೈದ್ಯಕೀಯ ಕಾಲೇಜುಗಳಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯಲು ವೈದ್ಯರೇ ದೊರೆಯುತ್ತಿಲ್ಲ ಎಂದು ಹೇಳುತ್ತಾ, ಕಿರಿಯ ವೈದ್ಯರನ್ನು ಕಡ್ಡಾಯವಾಗಿ ಅಲ್ಲಿ ನಿಯೋಜಿಸಲಾಗುತ್ತಿದೆ. ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಲಿತವರಿಗಷ್ಟೇ ಇರುವ ಈ ನಿಯಮದಿಂದ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.
► ಸರಣಿ 5
ಕರ್ನಾಟಕ ರಾಜ್ಯಕ್ಕೆ ಭಾವನಾತ್ಮಕ, ಭ್ರಮಾತ್ಮಕ ಗದ್ದಲಗಳು, ಜಾತಿ-ಮತ-ಭಾಷೆಗಳ ಹೆಸರಲ್ಲಿ ನಿಗಮ, ಭವನ, ಪ್ರತಿಮೆ, ಮೇಳಗಳು ಬೇಕೋ ಅಥವಾ ಜಾಗತಿಕ ಮಟ್ಟದ ವೈಜ್ಞಾನಿಕ-ವೈಚಾರಿಕ ಶಿಕ್ಷಣ, ಭವಿಷ್ಯದ ಭದ್ರತೆಗಾಗಿ ಕೃಷಿ ಹಾಗೂ ಕೈಗಾರಿಕಾ ಹೂಡಿಕೆ, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಹಾಗೂ ಸಕಲರಿಗೆ ಸುಲಭದಲ್ಲಿ ದೊರೆಯಬಲ್ಲ ಅತ್ಯುತ್ತಮ ಆರೋಗ್ಯ ಸೇವೆಗಳು ಬೇಕೋ ಎಂದು ನಿರ್ಧರಿಸುವ ಸಮಯವೀಗ ಬಂದಿದೆ.
ಸರಕಾರದಿಂದಲೇ ಎಲ್ಲರಿಗೂ ಉಚಿತ ಆರೋಗ್ಯ ಸೇವೆಗಳಿರುವ ಇಂಗ್ಲೆಂಡಿನಲ್ಲೂ, ವಿಮೆಯ ಮೇಲೆ ಖಾಸಗಿ ರಂಗದಲ್ಲಿ ಹೆಚ್ಚಿನ ಆರೋಗ್ಯ ಸೇವೆಗಳು ದೊರೆಯುವ ಅಮೆರಿಕದಲ್ಲೂ ಸಾರ್ವಜನಿಕ ಆರೋಗ್ಯ ಸೇವೆಗಳ ವಿಚಾರವೇ ಪ್ರತೀ ಚುನಾವಣೆಯ ಮುಂಚೂಣಿಯಲ್ಲಿರುತ್ತದೆ. ನಮ್ಮಲ್ಲಿ ಕೂಡ ಆರೋಗ್ಯ ಸೇವೆಗಳೇ ಚುನಾವಣೆಯ ಅತಿ ಮುಖ್ಯ ವಿಷಯವಾಗಬೇಕೇ ಹೊರತು, ಯಾರ ಎಷ್ಟೆತ್ತರದ ಪ್ರತಿಮೆಯನ್ನು ಎಲ್ಲಿ ಏರಿಸಲಾಗಿದೆ ಎಂಬುದಲ್ಲ. ಇನ್ನೂರ ಇಪ್ಪತ್ನಾಲ್ಕು ವರ್ಷಗಳ ಹಿಂದೆ ಟಿಪ್ಪು ಸುಲ್ತಾನರನ್ನು ಯಾರು ಕೊಂದರೆಂಬುದು ಚರ್ಚೆಯಾಗುವ ಬದಲು, ಈಗ ಪ್ರತಿನಿತ್ಯವೂ ಗರ್ಭಿಣಿಯರು, ತಾಯಂದಿರು, ಮಕ್ಕಳು ಮತ್ತು ಅಪಘಾತದ ಗಾಯಾಳುಗಳು ಸರಿಯಾಗಿ ಚಿಕಿತ್ಸೆ ದೊರೆಯದೆ ಸಾಯುತ್ತಿರುವುದಕ್ಕೆ ಯಾರು ಹೇಗೆ ಕಾರಣರು ಎಂಬುದಷ್ಟೇ ಚರ್ಚೆಯಾಗಬೇಕು, ಅವಕ್ಕೆ ಕಾರಣರಾದವರನ್ನು ಅಧಿಕಾರದಿಂದ ಕೆಳಗಿಳಿಸಬೇಕು.
ಕೊರೋನ ಕಾಲದ ತಪ್ಪುಗಳು
ಕಳೆದ ಮೂರು ವರ್ಷಗಳಲ್ಲಿ ಕೊರೋನ ಸೋಂಕನ್ನು ನಿಭಾಯಿಸಿದ ಬಗೆಯು ಆರೋಗ್ಯ ಸೇವೆಗಳು ಹೇಗೆ ಇರಬಾರದು ಎನ್ನುವುದಕ್ಕೆ ಮಾದರಿಯಾಯಿತೆಂದೇ ಹೇಳಬಹುದು. ಕೊರೋನ ನಿರ್ವಹಣೆಗೆ ಸರಕಾರಿ ಆರೋಗ್ಯ ಸೇವೆಗಳಲ್ಲಿರುವ ಅನುಭವಿ, ತಜ್ಞ ಅಧಿಕಾರಿಗಳ ಬದಲಿಗೆ ವಿಷಯ ತಜ್ಞರೇ ಅಲ್ಲದವರ (ಹೃದ್ರೋಗ, ಚರ್ಮ ರೋಗ, ಕ್ಯಾನ್ಸರ್, ಮೂಳೆ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು ಇತ್ಯಾದಿ) ಸಲಹೆಗಳಿಗೆ ಮನ್ನಣೆಯಿತ್ತು ಅಂಥವರನ್ನೇ ಕಾರ್ಯಪಡೆಗಳಲ್ಲಿ ತುಂಬಿಸಿದ್ದು; ಖಾಸಗಿ ಕಾರ್ಪೊರೇಟ್ ವೈದ್ಯರ ಆಣತಿಯಂತೆ ಅನಗತ್ಯವಾಗಿ ಲಾಕ್‌ಡೌನ್, ಕಚೇರಿ ಬಂದ್, ಶಾಲೆ-ಕಾಲೇಜು ಬಂದ್, ಮನೆಯಿಂದಲೇ ಕೆಲಸ ಇತ್ಯಾದಿ ನಿಯಮಗಳನ್ನು ಮಾಡಿದ್ದು; ಆಧಾರರಹಿತವಾದ, ಅನಗತ್ಯವಾದ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಗಳನ್ನು ಬಳಸಲು ಆಧುನಿಕ ಹಾಗೂ ಬದಲಿ ವೈದ್ಯಕೀಯ ಪದ್ಧತಿಗಳವರಿಗೆ ಅವಕಾಶವಿತ್ತದ್ದು; ಸೋಂಕಿತರಾಗಿದ್ದವರಿಗೆ, ಮಕ್ಕಳಿಗೆ ಮತ್ತು ಯುವಜನರಿಗೆ ಅನಗತ್ಯವಾಗಿ ಲಸಿಕೆ ನೀಡಿದ್ದು, ಲಸಿಕೆ ಐಚ್ಛಿಕವೆಂದು ಹೇಳುತ್ತಲೇ ಪರೋಕ್ಷವಾಗಿ ಒತ್ತಡ ಹೇರಿ ಹಾಕಿಸಿದ್ದು; ಈ ತಪ್ಪುಗಳನ್ನು ಪ್ರಶ್ನಿಸಿದ್ದವರ ಮೇಲೆ, ಸಾಕ್ಷ್ಯಾಧಾರಿತ ಸಲಹೆಗಳನ್ನು ನೀಡಿದ್ದವರ ಮೇಲೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಸುಮ್ಮನಾಗಿಸಲು ಪ್ರಯತ್ನಿಸಿದ್ದು-ಇವೆಲ್ಲವನ್ನೂ ನಾಡಿನ ಪ್ರಜ್ಞಾವಂತ ಜನರು ನೆನಪಿಟ್ಟುಕೊಂಡು, ಭವಿಷ್ಯದಲ್ಲಿ ಈ ತಪ್ಪುಗಳಾವುವೂ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ, ಈ ವೈಫಲ್ಯಗಳನ್ನೇ ಮಹತ್ಸಾಧನೆಗಳೆಂದು ಬಿಂಬಿಸಿ ಮತ ಕೇಳಲು ಬಂದರೆ ಅದನ್ನು ಹಿಮ್ಮೆಟ್ಟಿಸಬೇಕಾಗಿದೆ. ಕೊರೋನ ಕಾಲದಲ್ಲಿ ಆರೋಗ್ಯ ಸೇವೆಗಳ ಸುಧಾರಣೆಗೆ ಕೋಟಿಗಟ್ಟಲೆ ರೂ. ಸುರಿಯಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ತಾಯಿ-ಮಕ್ಕಳ ಆರೈಕೆಯಲ್ಲಿ, ತುರ್ತು ಚಿಕಿತ್ಸೆ ಮತ್ತು ಅಪಘಾತದ ಗಾಯಾಳುಗಳ ಚಿಕಿತ್ಸೆಯಲ್ಲಿ ಪ್ರತಿನಿತ್ಯವೂ ಲೋಪಗಳು ಕಾಣುತ್ತಿರುವುದಕ್ಕೆ, ಆರೋಗ್ಯ ಸೇವೆಗಳಲ್ಲಿ ನಿತ್ಯವೂ ವರದಿಯಾಗುತ್ತಿರುವ ಭ್ರಷ್ಟಾಚಾರಕ್ಕೆ ಚುನಾವಣೆಗಳಲ್ಲಿ ಉತ್ತರವನ್ನು ನೀಡಬೇಕಾಗಿದೆ.
ಸಾರ್ವಜನಿಕ ಆರೋಗ್ಯ ಸೇವೆಗಳ ಅನುದಾನ ದುಪ್ಪಟ್ಟಾಗಲಿ
ಕೊರೋನ ಕಾಲದ ವೈಫಲ್ಯಗಳು ಪುನರಾವರ್ತಿಸಬಾರದು ಎಂದಾದರೆ ಆರೋಗ್ಯ ಸೇವೆಗಳ ಮೇಲೆ ಖಾಸಗಿ ಹಾಗೂ ಕಾರ್ಪೊರೇಟ್ ವ್ಯವಸ್ಥೆಯ ಹಿಡಿತವನ್ನು ಕೊನೆಗೊಳಿಸಿ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಬೇಕು.
ಮೂಲಭೂತ ಆರೋಗ್ಯ ಸೇವೆಗಳು ಹಾಗೂ ರೋಗ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಖಾಸಗಿ ವಲಯಕ್ಕೆ ಆಸಕ್ತಿಯಿಲ್ಲ, ಸರಕಾರ ಹಣ ಹೂಡುತ್ತಿಲ್ಲ, ಆರೋಗ್ಯ ವಿಮೆಯು ಕೆಲವೇ ಜನರಿಗೆ ಕೆಲವೇ ಚಿಕಿತ್ಸೆಗಳಿಗೆ ಸೀಮಿತಗೊಂಡಿದೆ. ಅಂತಲ್ಲಿ ಮೂಲಭೂತ ಆರೋಗ್ಯ ಸೇವೆಗಳು ಮತ್ತು ಕೋವಿಡ್ ಸಾಂಕ್ರಾಮಿಕದಂತಹ ರೋಗ ನಿಯಂತ್ರಣ ಕಾರ್ಯಗಳು ಉತ್ತಮಗೊಳ್ಳಬೇಕಿದ್ದರೆ ಸಾರ್ವಜನಿಕ ಆರೋಗ್ಯ ಸೇವೆಗಳ ಅನುದಾನವನ್ನು ದುಪ್ಪಟ್ಟು ಹೆಚ್ಚಿಸಬೇಕು. ರಾಜ್ಯ ಸರಕಾರದ ಜೊತೆಗೆ ಸ್ಥಳೀಯಾಡಳಿತಗಳು, ಉದ್ದಿಮೆಗಳ ಸಿಎಸ್‌ಆರ್ ನಿಧಿ, ಸ್ಥಳೀಯ ಸೇವಾ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಟನೆಗಳು, ದತ್ತಿ ಸಂಸ್ಥೆಗಳು ಹಾಗೂ ದಾನಿಗಳು, ಕಾರ್ಮಿಕ ಸಂಘಗಳು ಮುಂತಾದವು ಆಸ್ಪತ್ರೆ/ಆರೋಗ್ಯ ಕೇಂದ್ರಗಳಿಗೆ ನೆರವು ನೀಡುವುದನ್ನು ಉತ್ತೇಜಿಸಬೇಕು.
ಸಾರ್ವಜನಿಕ ಆರೋಗ್ಯ ಸೇವೆಗಳ ಆಡಳಿತ ವಿಕೇಂದ್ರೀಕರಣಗೊಳ್ಳಲಿ
ಸಾರ್ವಜನಿಕ ಆರೋಗ್ಯ ಸೇವೆಗಳ ವೆಚ್ಚಗಳಲ್ಲಿ ರಾಜಕಾರಣಿಗಳು ಮತ್ತವರ ಏಜೆಂಟರು ಶೇ. ೪೦-೬೦ ಹೊಡೆದುಕೊಳ್ಳುವುದನ್ನು ತಪ್ಪಿಸಲು ಸರಕಾರಿ ಆರೋಗ್ಯ ಸಂಸ್ಥೆಗಳ ಆಡಳಿತವನ್ನು ವಿಕೇಂದ್ರೀಕರಿಸಬೇಕು; ಸ್ಥಳೀಯರಿಗೆ ಮತ್ತು ಮೇಲೆ ಹೇಳಿದ ಸಂಸ್ಥೆ-ಸಂಘಟನೆಗಳವರಿಗೆ ಆರೋಗ್ಯ ಸಂಸ್ಥೆಗಳ ನಿರ್ವಹಣೆಯಲ್ಲಿ ಮತ್ತು ನಿಗಾವಣೆಯಲ್ಲಿ ಭಾಗೀದಾರಿಕೆ ನೀಡಬೇಕು.
ಸರಕಾರಿ ಆರೋಗ್ಯ ಸಂಸ್ಥೆಗಳ ಖರ್ಚು ಪಾರದರ್ಶಕ, ಸಾಕ್ಷ್ಯಾಧಾರಿತವಾಗಿರಲಿ
ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಯ ಉಪಕರಣಗಳು, ಸಾಮಗ್ರಿಗಳು ಹಾಗೂ ಔಷಧಗಳ ಖರೀದಿ, ಆಹಾರ ಪೂರೈಕೆ, ನಿರ್ಮಾಣ ಕಾರ್ಯಗಳು ಮುಂತಾದವು ಅಗತ್ಯಕ್ಕನುಗುಣವಾಗಿ, ಸಾಕ್ಷ್ಯಾಧಾರಿತವಾಗಿ ಇರಬೇಕು. ಹಣ ಹೊಡೆಯುವುದಕ್ಕಾಗಿಯೋ, ಷೋಕಿಗಾಗಿಯೋ ದುಬಾರಿ ಉಪಕರಣಗಳನ್ನು ಖರೀದಿಸುವಂತಿರಬಾರದು. ವಾರ್ಷಿಕ ಲೆಕ್ಕ ಪರಿಶೋಧನೆಯು ಕೂಡ ಪಾರದರ್ಶಕವಾಗಿರಬೇಕು.
ಜನರಿಗೆ ಪ್ರಯೋಜನವಿಲ್ಲದ ಪಿಪಿಪಿ ಬೇಡ
ಆರೋಗ್ಯ ಸೇವೆಗಳಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವದಿಂದ (ಪಿಪಿಪಿ) ಸರಕಾರಕ್ಕಾಗಲೀ, ಜನರಿಗಾ ಗಲೀ, ಆರೋಗ್ಯ ಸೇವೆಗಳಿಗಾಗಲೀ ಯಾವುದೇ ಪ್ರಯೋಜನಗಳಾಗಿವೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ, ಬದಲಿಗೆ, ಅಂಥ ಪ್ರಯೋಜನಗಳೇನೂ ಆಗಿಲ್ಲ ಎನ್ನುವುದಕ್ಕೂ, ಖಾಸಗಿಯವರಿಗಷ್ಟೇ ಲಾಭಗಳಾಗಿವೆ ಎನ್ನುವುದಕ್ಕೂ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಆದ್ದರಿಂದ ಆರೋಗ್ಯ ಉಪಕೇಂದ್ರಗಳಿಂದ ಹಿಡಿದು ಅತ್ಯುನ್ನತ ಆಸ್ಪತ್ರೆಗಳವರೆಗೆ ಖಾಸಗಿಯವರ ಜೊತೆ ಪಿಪಿಪಿ ಮಾದರಿಯ ವ್ಯವಸ್ಥೆಯನ್ನು ಉತ್ತೇಜಿಸಬಾರದು, ಬದಲಿಗೆ, ಮೇಲೆ ಹೇಳಿದಂತೆ, ಆರೋಗ್ಯ ಸೇವೆಗಳು ಸಾರ್ವಜನಿಕ ಒಡೆತನದಲ್ಲೇ ಇದ್ದು, ಖಾಸಗಿ ಸೇವಾಸಂಸ್ಥೆಗಳಿಗೆ ಸಾಮಾಜಿಕ ಬದ್ಧತೆಯ ರೂಪದಲ್ಲಿ ನೆರವು ನೀಡುವುದನ್ನು ಉತ್ತೇಜಿಸಬೇಕು ಅಥವಾ ಕಡ್ಡಾಯಗೊಳಿಸಲೂಬಹುದು. ಯಶಸ್ವಿನಿಯಂತಹ ಯೋಜನೆಗಳಲ್ಲಿ ಕೆಲವೇ ಕೆಲವು ಚಿಕಿತ್ಸೆಗೆ ಕೆಲವೇ ಕೆಲವು ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ನೂರಾರು ಕೋಟಿ ರೂ. ಬಿಲ್ ಸಂದಾಯ ಮಾಡುವ ಬದಲು ಅದೇ ಹಣವನ್ನು ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಒದಗಿಸಬೇಕು.
ಕೆಪಿಎಂಇ ಮಾನದಂಡಗಳು ಸರಕಾರಿ ಸಂಸ್ಥೆಗಳಿಗೂ ಇರಲಿ
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಯಲ್ಲಿ ಸೂಚಿಸಲಾಗಿರುವ ಮಾನದಂಡಗಳು ಸರಕಾರಿ ಆರೋಗ್ಯ ಸೇವೆಗಳಿಗೂ ಅನ್ವಯವಾಗಬೇಕು. ಹಿಂದೆ ೨೦೧೬-೧೭ರಲ್ಲಿ ಶ್ರೀ ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದಾಗ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ನೇತೃತ್ವದ ಸಮಿತಿಯು ಅದೇ ಸಲಹೆಯನ್ನು ನೀಡಿತ್ತಾದರೂ, ಕೆಲವು ‘ಚಳವಳಿಗಾರರ’ ಒತ್ತಡದಿಂದ ಅದನ್ನು ಕೈಬಿಡಲಾಗಿತ್ತು. ಆರೋಗ್ಯ ಸೇವೆಗಳನ್ನು ಖಾಸಗಿ ಹಿಡಿತದಿಂದ ಬಿಡಿಸಬೇಕಾದರೆ ಸಾರ್ವಜನಿಕ ಆರೋಗ್ಯ ಸೇವೆಗಳು ಖಾಸಗಿ ಸೇವೆಗಳಷ್ಟೇ ಅಥವಾ ಅವಕ್ಕಿಂತಲೂ ಉತ್ತಮವಾಗಿ ಸಜ್ಜುಗೊಳ್ಳಬೇಕಾಗುತ್ತದೆ.
ಸರಕಾರಿ ಆರೋಗ್ಯ ಸೇವೆಗಳು ಸುಸಜ್ಜಿತವಾಗಿರಲಿ
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಸಜ್ಜಿತವಾದ ಹೆರಿಗೆ ಮತ್ತು ಮಕ್ಕಳ ಚಿಕಿತ್ಸಾ ಘಟಕಗಳಿರಬೇಕು. ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಗಾಯಾಳುಗಳ ತುರ್ತು ಚಿಕಿತ್ಸೆಗೆ ಸುಸಜ್ಜಿತ ಘಟಕಗಳು, ಸುಸಜ್ಜಿತವಾದ ತೀವ್ರ ನಿಗಾ ಘಟಕಗಳು ಮತ್ತು ಡಯಾಲಿಸಿಸ್ ಘಟಕಗಳಿರಬೇಕು. ತಾಲೂಕು ಆಸ್ಪತ್ರೆಗಳನ್ನು ತೃತೀಯ ಸ್ತರದ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸುವುದಲ್ಲದೆ, ಎಲ್ಲಾ ಜಿಲ್ಲೆಗಳಲ್ಲಿ ಅತ್ಯುನ್ನತ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ಒದಗಿಸಬೇಕು. ಈ ಎಲ್ಲಾ ಸಂಸ್ಥೆಗಳಿಗೂ ಅಗತ್ಯವಾದ, ಎಲ್ಲಾ ಸ್ತರಗಳ, ವಿಶೇಷತೆಗಳ, ವೈದ್ಯಕೀಯ ಮತ್ತು ಶುಶ್ರೂಷಾ ಸಿಬ್ಬಂದಿಯನ್ನು ನೇಮಿಸಬೇಕು. ತಜ್ಞ ವೈದ್ಯರ, ಅದರಲ್ಲೂ ತುರ್ತು ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಅರಿವಳಿಕೆ ತಜ್ಞರ, ಕೊರತೆಯಿರುವಲ್ಲಿ ಸ್ಥಳೀಯವಾಗಿ ಲಭ್ಯರಿರುವ ಖಾಸಗಿ ವೈದ್ಯಕೀಯ ತಜ್ಞರ ಸೇವೆಯನ್ನು ಪಡೆಯಬೇಕು.
ತುರ್ತು ಚಿಕಿತ್ಸೆ ಸುಲಭದಲ್ಲಿ ಸಿಗಲಿ
ಸರಕಾರಿ ಆರೋಗ್ಯ ಸೇವೆಗಳು ಸುಸಜ್ಜಿತಗೊಳ್ಳುವವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಪಘಾತ ಚಿಕಿತ್ಸೆಗೆ ರೂಪಿಸಲಾದ ಹರೀಶ್ ಸಾಂತ್ವನ ಯೋಜನೆಯನ್ನು ಬಲಪಡಿಸಬೇಕು, ಆಯ್ದ ಕೆಲವು ಖಾಸಗಿ ಆಸ್ಪತ್ರೆಗಳನ್ನು ಅದೇ ಯೋಜನೆಯಡಿಯಲ್ಲಿ ಸುಸಜ್ಜಿತಗೊಳಿಸಬಹುದು. ತುರ್ತು ಹೆರಿಗೆ, ಹೃದಯಾಘಾತದಂತಹ ತುರ್ತು ಅಗತ್ಯಗಳಿಗೂ ಇದೇ ರೀತಿಯ ಯೋಜನೆಗಳನ್ನು ರೂಪಿಸಬಹುದು.
ಸರಕಾರಿ ಆರೋಗ್ಯ ಸೇವೆಗಳ ಸಿಬ್ಬಂದಿ ಭರ್ತಿಯಿರಲಿ
ಈ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಎಲ್ಲ ಮಟ್ಟದ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಯ ಎಲ್ಲಾ ಸ್ಥಾನಗಳು ಯಾವತ್ತೂ ಭರ್ತಿಯಾಗಿಯೇ ಇರಬೇಕು. ಅದಕ್ಕಾಗಿ ಪ್ರತೀ ವರ್ಷವೂ ಅವರನ್ನು ಶಾಶ್ವತ ನೆಲೆಯಲ್ಲಿ ನೇಮಿಸುವ ಪ್ರಕ್ರಿಯೆ ಇರಲೇಬೇಕು. ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯ ವೈದ್ಯಕೀಯ ಕಾಲೇಜುಗಳಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯಲು ವೈದ್ಯರೇ ದೊರೆಯುತ್ತಿಲ್ಲ ಎಂದು ಹೇಳುತ್ತಾ, ಕಿರಿಯ ವೈದ್ಯರನ್ನು ಕಡ್ಡಾಯವಾಗಿ ಅಲ್ಲಿ ನಿಯೋಜಿಸಲಾಗುತ್ತಿದೆ. ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಲಿತವರಿಗಷ್ಟೇ ಇರುವ ಈ ನಿಯಮದಿಂದ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅದರ ಬದಲಿಗೆ ೩ ಪಟ್ಟು ಹೆಚ್ಚಿನ ಭತ್ತೆಯನ್ನು ನೀಡಿ ಪೂರ್ಣ ತರಬೇತಾದ ವೈದ್ಯರನ್ನೇ ನೇಮಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ, ವೈದ್ಯರಿಗೂ, ವೈದ್ಯಕೀಯ ಸಿಬ್ಬಂದಿಗೂ ಸೂಕ್ತವಾದ, ಸುರಕ್ಷಿತವಾದ ನಿವಾಸಗಳ ವ್ಯವಸ್ಥೆಯನ್ನೂ ಮಾಡಬೇಕು.
ಸಣ್ಣ ಆಸ್ಪತ್ರೆಗಳು ಬೇಕು, ಕಾರ್ಪೊರೇಟ್ ಸಾಕು
ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳನ್ನು ಪೋಷಿಸುವ ಬದಲು ಸಣ್ಣ ಆಸ್ಪತ್ರೆಗಳನ್ನು ಉತ್ತೇಜಿಸಬೇಕು. ರಾಜ್ಯದ ಶೇ. ೭೦ರಷ್ಟು ಖಾಸಗಿ ಆಸ್ಪತ್ರೆಗಳು ೧೦-೩೦ ಹಾಸಿಗೆಗಳ ಸಣ್ಣ ಆಸ್ಪತ್ರೆಗಳಾಗಿವೆ. ಈ ಆಸ್ಪತ್ರೆಗಳೂ, ಅಲ್ಲಿರುವ ವೈದ್ಯರೂ ಕೇವಲ ಚಿಕಿತ್ಸೆಯನ್ನಷ್ಟೇ ನೀಡುವುದಲ್ಲ, ಬದಲಿಗೆ ಸ್ಥಳೀಯವಾಗಿ ರೋಗ ನಿಯಂತ್ರಣ ಹಾಗೂ ಆರೋಗ್ಯ ಪಾಲನೆಯಲ್ಲೂ ಪಾತ್ರ ವಹಿಸುತ್ತಾರೆ. ಇಂತಹ ಆಸ್ಪತ್ರೆಗಳಿಗೆ ಸರಕಾರದಿಂದ ಯಾವ ರೀತಿಯ ಬೆಂಬಲವಾಗಲೀ, ಉತ್ತೇಜನವಾಗಲೀ ದೊರೆಯುವುದೇ ಇಲ್ಲ. ಆದರೆ, ವಿಪರೀತ ದರದಲ್ಲಿ ಸೀಮಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಭೂಮಿ, ತೆರಿಗೆ ವಿನಾಯಿತಿ ಮುಂತಾದ ಹಲಬಗೆಯ ನೆರವನ್ನು ನೀಡಲಾಗುತ್ತಿದೆ, ಮಾತ್ರವಲ್ಲ, ವಿಮಾ ಯೋಜನೆಗಳ ನೆಪದಲ್ಲಿ ಜನರನ್ನು ಅವುಗಳತ್ತ ತಳ್ಳಿ ಬೊಕ್ಕಸದ ಹಣವನ್ನೂ ನೀಡಲಾಗುತ್ತಿದೆ. ಆದ್ದರಿಂದ, ನಮ್ಮ ರಾಜ್ಯದ ಆರೋಗ್ಯ ಸೇವೆಗಳು ಸುಧಾರಿಸಬೇಕಾದರೆ ಖಾಸಗಿ ಆಸ್ಪತ್ರೆಗಳತ್ತ ಸರಕಾರದ ದೃಷ್ಟಿಕೋನವು ತಿರುವುಮುರುವಾಗಬೇಕು: ವಿಪರೀತ ದರದಲ್ಲಿ ಸೀಮಿತ ರೋಗಗಳಿಗೆ ಚಿಕಿತ್ಸೆ ನೀಡುವ ನಗರ ಕೇಂದ್ರಿತ ಬೃಹತ್ ಆಸ್ಪತ್ರೆಗಳಿಗೆ ನೆರವನ್ನು ನೀಡುವ ಬದಲು ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಮಿತದರದಲ್ಲಿ ಸಮಗ್ರ ಚಿಕಿತ್ಸೆಯನ್ನು ಒದಗಿಸುತ್ತಿರುವ ಸಣ್ಣ ಆಸ್ಪತ್ರೆಗಳಿಗೆ ಎಲ್ಲಾ ನೆರವನ್ನೂ ನೀಡಬೇಕು.
ಕೊರೋನ ಕಾಲದ ವೈಫಲ್ಯಗಳು ಪುನರಾವರ್ತಿಸಬಾರದು ಎಂದಾದರೆ ಆರೋಗ್ಯ ಸೇವೆಗಳ ಮೇಲೆ ಖಾಸಗಿ ಹಾಗೂ ಕಾರ್ಪೊರೇಟ್ ವ್ಯವಸ್ಥೆಯ ಹಿಡಿತವನ್ನು ಕೊನೆಗೊಳಿಸಿ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಬೇಕು.
ರೋಗ ನಿಯಂತ್ರಣ ಸಾಕ್ಷ್ಯಾಧಾರಿತವಾಗಿ, ಜನಸ್ನೇಹಿಯಾಗಿರಲಿ
ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿರುವ ಅನುಭವಿ ತಜ್ಞ ವೈದ್ಯರ ಸಲಹೆಗೆ ಮಹತ್ವ ನೀಡಬೇಕೇ ಹೊರತು ವಿಷಯ ತಜ್ಞರಲ್ಲದ, ಕಾರ್ಪೊರೇಟ್ ಹಿತಾಸಕ್ತಿಗಳನ್ನು ಪ್ರತಿನಿಧಿಸುವವರಿಗಲ್ಲ. ಈ ನಿಯಂತ್ರಣ ಕ್ರಮಗಳು ವೈಜ್ಞಾನಿಕವೂ, ಸಾಕ್ಷ್ಯಾಧಾರಿತವೂ ಆಗಿರಬೇಕು ಮತ್ತು ಜನರ ಒಟ್ಟಾರೆ ಹಿತವನ್ನು ರಕ್ಷಿಸುವಂತಿರಬೇಕು. ಬದಲಿ ವೈದ್ಯಕೀಯ ಪದ್ಧತಿಗಳಲ್ಲಿ ಸೂಕ್ಷ್ಮಾಣು ಸೋಂಕುಗಳೆಂಬ ಪರಿಕಲ್ಪನೆಯೇ ಇಲ್ಲದಿರುವಾಗ ಸೋಂಕು ರೋಗಗಳಿಗೆ ಬದಲಿ ಚಿಕಿತ್ಸೆಯಿದೆಯೆಂದು ಸುಳ್ಳುಗಳನ್ನು ಪ್ರಚಾರ ಮಾಡುವುದಕ್ಕೆ ಅವಕಾಶ ನೀಡಬಾರದು, ಸರಕಾರಿ ಆರೋಗ್ಯ ಸೇವೆಗಳಲ್ಲಿ ಅಂತಹ ಆಧಾರರಹಿತವಾದ, ಅಪಾಯಕಾರಿಯೂ ಆಗಬಹುದಾದ ಚಿಕಿತ್ಸೆಗಳಿಗೆ ಉತ್ತೇಜನ ನೀಡಬಾರದು.
ವೈದ್ಯಕೀಯ ಶಿಕ್ಷಣ ಕೆಡಿಸಬಾರದು
ಈಗಿನ ಒಕ್ಕೂಟ ಸರಕಾರವು ವೈದ್ಯರಿಂದಲೇ ಆಯ್ಕೆಯಾಗುತ್ತಿದ್ದ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದ್ದ ಭಾರತೀಯ ವೈದ್ಯಕೀಯ ಪರಿಷತ್ತನ್ನು ತೆಗೆದು ತಾನೇ ನಿಯಂತ್ರಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ತಂದಿತು. ಅದರ ಬೆನ್ನಿಗೆ ಹೊಸ ಶಿಕ್ಷಣ ನೀತಿಯನ್ನೂ ತಂದಿತು. ಇವೆರಡರ ಮೂಲಕ ಈಗ ಆಧುನಿಕ ವೈದ್ಯಕೀಯ ಶಿಕ್ಷಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹೊರಟಿದ್ದು, ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಆಯುರ್ವೇದ, ಯೋಗ ಇತ್ಯಾದಿಗಳನ್ನು ಕಲಬೆರಕೆ ಮಾಡಲು ಈಗಾಗಲೇ ಆರಂಭಿಸಿದೆ, ಮಾತ್ರವಲ್ಲ, ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗೆ ಕೇವಲ ಕೇಂದ್ರೀಯ ಮಟ್ಟದಲ್ಲಷ್ಟೇ ಕೌನ್ಸೆಲಿಂಗ್ ನಡೆಸಿ, ಶೇ. ೮೫ ಸ್ನಾತಕ ಸೀಟುಗಳಿಗೆ ರಾಜ್ಯಗಳಲ್ಲಿ ನಡೆಯುವ ಕೌನ್ಸೆಲಿಂಗ್ ಅನ್ನು ದಿಲ್ಲಿಯಿಂದಲೇ ನಡೆಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ವೈದ್ಯರು ಮತ್ತವರ ಸಂಘಟನೆಗಳು ಎನ್‌ಎಂಸಿ ಹಾಗೂ ಎನ್‌ಪಿಎ ವಿಚಾರದಲ್ಲಿ ಕೇಂದ್ರ ಸರಕಾರ ಮಾಡುತ್ತಿರುವುದನ್ನು ತೆಪ್ಪಗೆ ನೋಡುತ್ತಿರುವಾಗ ರಾಜ್ಯ ಸರಕಾರಗಳು ಮತ್ತು ವಿರೋಧ ಪಕ್ಷಗಳು ಕೂಡ ಗೋಣಾಡಿಸುತ್ತಾ ಕೂತಿವೆ. ದೇಶದ ಆಧುನಿಕ ವೈದ್ಯಕೀಯ ವ್ಯವಸ್ಥೆಯನ್ನೂ, ರಾಜ್ಯಗಳ ಅಧಿಕಾರವನ್ನೂ, ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳನ್ನೂ ನಾಶ ಮಾಡುವ ಈ ಹುನ್ನಾರವನ್ನು ರಾಜ್ಯ ಸರಕಾರವು ಕಟುವಾಗಿ ವಿರೋಧಿಸಬೇಕಾಗಿದೆ.
ಆಧಾರವಿಲ್ಲದ ಪ್ರಾಚೀನ ಪದ್ಧತಿಗಳಿಗೆ ಮನ್ನಣೆ ಬೇಡ
ಇತರ ಕಾಯಿಲೆಗಳಿಗೂ ಕೂಡ ಆಯುರ್ವೇದ, ಹೋಮಿ ಯೋಪತಿ, ಯುನಾನಿ ಪದ್ಧತಿಗಳ ಸಾಕ್ಷ್ಯಾಧಾರವಿಲ್ಲದ ಚಿಕಿತ್ಸೆ ಹಾಗೂ ಔಷಧಗಳಿಗೆ ಹಣವೊದಗಿಸಬಾರದು. ಉಪಕೇಂದ್ರಗಳಿಂದ ತೊಡಗಿ ಜಿಲ್ಲಾಸ್ಪತ್ರೆಗಳವರೆಗೆ ಎಲ್ಲೆಡೆ ಯೋಗ ಮತ್ತು ಬದಲಿ ಚಿಕಿತ್ಸೆಯ ಸೌಲಭ್ಯಗಳನ್ನು ನಿರ್ಮಿಸುವುದಕ್ಕೆ ವ್ಯರ್ಥ ಮಾಡಲಾಗುತ್ತಿರುವ ಹಣವನ್ನು ಆಧುನಿಕ ಚಿಕಿತ್ಸೆಗಳನ್ನು ಬಲಪಡಿಸುವುದಕ್ಕೆ ವಿನಿಯೋಗಿಸಬೇಕು. ಆಧುನಿಕ ವೈದ್ಯ ವಿಜ್ಞಾನದೊಳಕ್ಕೆ ಈ ಬದಲಿ ಪದ್ಧತಿಗಳನ್ನು ತೂರಿಸಲು ಹೊಸ ಶಿಕ್ಷಣ ನೀತಿಯಡಿಯಲ್ಲಿ ಆರಂಭಿಸಿರುವ ಪ್ರಯತ್ನಗಳನ್ನು ರಾಜ್ಯವು ವಿರೋಧಿಸಬೇಕು. ಸಮಗ್ರ ಆರೋಗ್ಯ ಸೇವೆಗಳೆಂದರೆ ಆಧುನಿಕ ಆರೋಗ್ಯ ಸೇವೆಗಳು, ಪೌಷ್ಟಿಕ ಆಹಾರ, ವೈಚಾರಿಕ-ವೈಜ್ಞಾನಿಕ ಆಧುನಿಕ ಶಿಕ್ಷಣವನ್ನು ನೀಡುವುದೇ ಹೊರತು ಶತಮಾನಗಳಷ್ಟು ಹಿಂದಿನ ಆಧಾರರಹಿತ ಬದಲಿ ಪದ್ಧತಿಗಳನ್ನು ಕಲಬೆರಕೆ ಮಾಡುವುದಲ್ಲ.
ಒಟ್ಟಿನಲ್ಲಿ, ನಮ್ಮ ಜನರಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಸಾರ್ವಜನಿಕವಾಗಿ ಒದಗಿಸಬೇಕೆಂಬ ೧೯೪೩ರ ಸರ್ ಜೋಸೆಫ್ ಭೋರ್ ಸಮಿತಿ ಮತ್ತು ಸ್ವಾತಂತ್ರ್ಯಾನಂತರ ನೆಹರೂ ಆಡಳಿತದ ಆಶಯಗಳನ್ನು ಸಾಕಾರಗೊಳಿಸಬಲ್ಲ ಸರಕಾರವನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿಯು ನಮ್ಮೆಲ್ಲರದ್ದಾಗಿದೆ.