ಕುಮಾರನ ಹೆಗಲ ಮೇಲೆ ಕೋವಿಯಿಟ್ಟ ಬಿಜೆಪಿ ಲೆಕ್ಕಾಚಾರವೇನು ?
ಭರ್ಜರಿ ಬಹುಮತವಿರುವ ಕಾಂಗ್ರೆಸ್ ಸರಕಾರ ಉರುಳಿಸೋದು ಸಾಧ್ಯವೇ ?
photo : PTI
ಸಿಂಗಾಪುರದಲ್ಲಿ ಕರ್ನಾಟಕ ಸರಕಾರ ಉರುಳಿಸೋ ಪ್ಲ್ಯಾನ್ ರೆಡಿ ಆಗ್ತಾ ಇದೆಯೇ ? ಇಂತಹದೊಂದು ಗಂಭೀರ ಆರೋಪ ಸೋಮವಾರ ಕೇಳಿ ಬಂದಿದೆ. ಆರೋಪ ಮಾಡಿರೋದು ಬೇರಾರೂ ಅಲ್ಲ, ಸ್ವತಃ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು.
ವಿದೇಶದಲ್ಲಿ ಕುಳಿತು ಕರ್ನಾಟಕದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರವನ್ನುಉರುಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೋಮವಾರ ಗಂಭೀರ ಆರೋಪ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಸಿಂಗಾಪುರದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ ಅವರೇನೋ ತಂತ್ರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾಡುವುದು ಬಿಟ್ಟು ಹೊರಗೆ ತಂತ್ರ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೇ ಇದ್ದರೂ, ಪರೋಕ್ಷವಾಗಿ ಕುಮಾರಸ್ವಾಮಿ ಸಿಂಗಾಪುರ ಪ್ರವಾಸದ ಬಗ್ಗೆ ಡಿ ಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ ಕುಮಾರಸ್ವಾಮಿ ಭಾನುವಾರ ಬೆಳಿಗ್ಗೆ ಕುಟುಂಬ ಸಮೇತ ಯುರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಫಿನ್ಲೆಂಡ್ ಗೆ ಭೇಟಿ ನೀಡಿ ಆಗಸ್ಟ್ 2 ರಂದು ವಾಪಸಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಈ ಬೆನ್ನಲ್ಲೇ ಡಿಕೆಶಿ ಹೇಳಿಕೆ ನೀಡಿದ್ದಾರೆ.
ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಪ್ಲಾನ್ ನಡೆಯುತ್ತಿದೆ. ಇದೆಲ್ಲಾ ಒಂದು ತಂತ್ರ. ಇದರ ಬಗ್ಗೆ ನಮಗೂ ಮಾಹಿತಿ ಬಂದಿದೆ. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಅಂತ ಸಿಂಗಾಪುರದಲ್ಲಿ ಕೂತು ಆಪರೇಷನ್ ಮಾಡುತ್ತಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ ಡಿಕೆಶಿ .
ಹಾಗಾದ್ರೆ, ಕುಮಾರಸ್ವಾಮಿ ಸ್ಪಷ್ಟ ಬಹುಮತವಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲೆಂದೇ ಸಿಂಗಾಪುರಕ್ಕೆ ಹೋಗಿದ್ದಾರೆಯೇ?
ಹಾಗೂ ಅಲ್ಲಿ ಯಾರ ಜೊತೆ ತಂತ್ರ ರೂಪಿಸುತ್ತಿದ್ದಾರೆ ? ಎಂಬೆಲ್ಲಾ ಪ್ರಶ್ನೆಗಳು ಈಗ ಮುನ್ನೆಲೆಗೆ ಬಂದಿವೆ.
ಡಿಕೆಶಿ ಹೇಳಿಕೆ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು , " ಡಿಸಿಎಂ ಗೆ ಈ ವಿಚಾರದಲ್ಲಿ ಮಾಹಿತಿ ಸಿಕ್ಕಿರಬಹುದು. ಹಾಗಾಗಿ ಮಾತನಾಡಿದ್ದಾರೆ. ಸರಕಾರವನ್ನು ಬೀಳಿಸುವ ಪ್ರಯತ್ನಗಳು ನಡೆಯುತ್ತಿರಬಹುದು. ಅಧಿಕಾರಕ್ಕಾಗಿ ಅವರು ಏನು ಮಾಡಲೂ ಹೇಸುವುದಿಲ್ಲ. ನಮ್ಮ ಶಾಸಕರ ಬಗ್ಗೆ ನಮಗೆ ನಂಬಿಕೆ ಇದೆ. ಆದರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ " ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಮಾತನಾಡಿ, " ಡಿಕೆಶಿ ಅವರ ಹೇಳಿಕೆಯನ್ನು ಅಲ್ಲಗಳೆಯಲಾಗದು. ಪಕ್ಷ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ. ಬಿಜೆಪಿಯವರು ಸರಕಾರವನ್ನು ಅಸ್ಥಿರಗೊಳಿಸುವುದು ಇದೇ ಮೊದಲಲ್ಲ. ಅವರು ಎಂದಿಗೂ ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ" ಎಂದಿದ್ದಾರೆ.
ಸರಕಾರದ ವಿರುದ್ಧದ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಹೋರಾಟ, ಕುಮಾರಸ್ವಾಮಿಯ ಸರಣಿ ಆರೋಪಗಳು, ಸಿಎಂ ಮಾಡೋದೂ ಗೊತ್ತು, ಕೆಳಗಿಳಿಸೋದೂ ಗೊತ್ತು ಎಂಬ ಹಿರಿಯ ಕಾಂಗ್ರೆಸ್ಸಿಗ ಬಿ.ಕೆ ಹರಿಪ್ರಸಾದ್ ಅಸಮಾಧಾನದ ಮಾತುಗಳ ಬೆನ್ನಲ್ಲೇ ಕುಮಾರಸ್ವಾಮಿ ಕುರಿತ ಡಿಕೆಶಿ ಹೇಳಿಕೆ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ಹೋಗಿರುವುದು ಇದು ಮೊದಲಲ್ಲ. ಹಿಂದೆಯೂ ಹಲವು ಬಾರಿ ಸಿಂಗಾಪುರಕ್ಕೆ ಹೋಗಿದ್ದರು. ಈ ಹಿಂದೆ ಅವರು ಸಿಎಂ ಆಗಿದ್ದಾಗ ಅಮೆರಿಕಾಕ್ಕೆ ಹೋದಾಗಲೇ ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಲುಗಾಡಿತ್ತು.
ರಾಜ್ಯ ಸರ್ಕಾರ ಬೀಳಿಸಲು ಸಿಂಗಾಪುರದಲ್ಲಿ ಸೀಕ್ರೆಟ್ ಸ್ಕೆಚ್ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ, " ಡಿಕೆಶಿ ಅವರ ಹೇಳಿಕೆಗೆ ಹಲವು ದೃಷ್ಟಿಕೋನ ಇದೆ. ಕಾಂಗ್ರೆಸ್ನಲ್ಲಿ ಬಹಳ ವ್ಯತ್ಯಾಸಗಳಿವೆ, ಏನೂ ಸರಿಯಿಲ್ಲ ಅನ್ನೋದು ಗೊತ್ತಾಗ್ತಿದೆ" ಅಂತ ತಿರುಗೇಟು ನೀಡಿದ್ದಾರೆ.
"ಒಳಗಿಂದಲೇ ಸಿಎಂ ಕುರ್ಚಿ ಅಲುಗಾಡಿಸುವ ಕೆಲಸಗಳು ಆಗ್ತಿವೆ. ಕಾಂಗ್ರೆಸ್ನವ್ರ ಸಹಕಾರ ಇಲ್ಲದೇ ಏನೂ ಆಗಲ್ಲ. ಬಹಳ ದೊಡ್ಡವರೇ ಇದಕ್ಕೆ ಸಹಕಾರ ಕೊಟ್ಟಂಗೆ ಕಾಣ್ತಿದೆ. ನನ್ನನ್ನು ಸಿಎಂ ಮಾಡ್ಲಿಲ್ಲ ಅಂದ್ರೆ ಈ ಸರ್ಕಾರ ಉಳಿಸಲ್ಲ ಅಂತ ಡಿಕೆಶಿ ಎಚ್ಚರಿಕೆ ಕೊಟ್ಟಂಗಿದೆ " ಅಂತ ಅಶ್ವತ್ಥ್ ನಾರಾಯಣ್ ತಿರುಗೇಟು ಕೊಟ್ರು. " ಕುಮಾರಸ್ವಾಮಿ ಅವರು ಯಾವ ರೀತಿ ಸರ್ಕಾರ ಬೀಳಿಸ್ತಾರೆ ಅಂತನೂ ಡಿಕೆಶಿ ಹೇಳಬೇಕಪ್ಪ" ಎಂದು ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.
ಜೆಡಿಎಸ್ ಆಪರೇಷನ್ ಮಾಡ್ತಿದ್ರೆ ಬಿಜೆಪಿ ಸಹಕಾರ ಇರುತ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, " ನಮ್ಮ ಪಕ್ಷ ಇಂತಹ ಯಾವುದೇ ಪ್ರಯತ್ನ ಮಾಡ್ತಿಲ್ಲ. ಈಗಲೇ ಅದರ ಬಗ್ಗೆ ಮಾತಾಡೋದು ಸರಿಯಲ್ಲ, ನಮ್ಮಿಂದ ಇಂಥ ಯಾವುದೇ ಪ್ರಯತ್ನಗಳೂ ಕೂಡ ನಡೆಯುತ್ತಿಲ್ಲ" ಅಂತ ಹೇಳಿದ್ರು.
ಇನ್ನು ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಡಿಕೆಶಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. "ಡಿಕೆ ಶಿವಕುಮಾರ್ ಹೇಳಿಕೆ ಏನು ಕೊಟ್ರೋ ಗೊತ್ತಿಲ್ಲ. ಅದ್ಯಾಕೆ ಹಾಗಂದರೋ ಅವರನ್ನೇ ಕೇಳಿ. ಆದರೆ ನಮ್ಮ ಸರ್ಕಾರ ಸುಭದ್ರವಾಗಿದೆ. ಬೆಂಗಳೂರಿನಲ್ಲಿ ಇರಲಿ ಸಿಂಗಾಪುರದಲ್ಲಾದ್ರೂ ಇರಲಿ , ಕಾಂಗ್ರೆಸ್ ಸರ್ಕಾರಕ್ಕೆ ಏನು ತೊಂದರೆ ಆಗಲ್ಲ, ಅದು ಬಂಡೆಯಂತೆ ಗಟ್ಟಿಯಾಗಿದೆ " ಅಂತ ವಿಶ್ವಾಸದ ಮಾತನ್ನಾಡಿದ್ದಾರೆ.
ಅತ್ತ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರು ಅಂತರಗಂಗೆ ಬೆಟ್ಟ ಇದ್ದಂತೆ. ಸರ್ಕಾರವನ್ನ ಬೀಳಿಸೊ ಶಕ್ತಿ ಯಾರಿಗೂ ಇಲ್ಲ ಎಂದಿದ್ದಾರೆ. ಇನ್ನು ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಉತ್ತರ ಕೊಟ್ಟ ಕೊತ್ತೂರು ಮಂಜುನಾಥ್, " ಗಾಳಿ ಮಳೆ ಹೇಳಿ ಕೇಳಿ ಬರುತ್ತಾ ? ಬಿ.ಕೆ ಹರಿಪ್ರಸಾದ್ ಮಾತು ಕೂಡ ಹಾಗೆ ಅಂದುಕೊಳ್ಳಿ" ಅಂತ ಹೇಳಿದ್ರು.
ಒಟ್ಟಾರೆ ಡಿ ಕೆ ಶಿವಕುಮಾರ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. "135 ಶಾಸಕರು ಇರುವ ಪಕ್ಷದ ಸರಕಾರವನ್ನು ಅದೇಗೆ ಉರುಳಿಸಲಾಗುತ್ತದೆ. ಇದೆಲ್ಲ ಆಗೋ ಹೋಗೋ ಮಾತಲ್ಲ" ಎಂಬಲ್ಲಿಂದ ಹಿಡಿದು " ಈ ಬಿಜೆಪಿಯವರನ್ನು ಹೇಳೋಕ್ಕಾಗಲ್ಲ, ಅವರು ಮನಸ್ಸು ಮಾಡಿದ್ರೆ ಏನೂ ಬೇಕಾದ್ರೂ ಮಾಡ್ತಾರೆ, ಅಷ್ಟೊಂದು ಪವರ್ ಹಾಗು ಮನಿ ಪವರ್ ಎರಡೂ ಅವರಲ್ಲಿದೆ " ಎಂಬಲ್ಲಿವರೆಗೆ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
ಇನ್ನು ಈ ಬಾರಿ ಮುಖ್ಯಮಂತ್ರಿ ಸ್ಥಾನವೇ ಸಿಗಬೇಕು ಎಂದು ಪಟ್ಟು ಹಿಡಿದಿದ್ದ ಡಿ ಕೆ ಶಿವಕುಮಾರ್ ಅವರೇ ಈ ಹೇಳಿಕೆ ಕೊಟ್ಟಿರೋದು ಬಿಜೆಪಿಯವರಿಗೆ ಹೊಸ ಅವಕಾಶ ಸೃಷ್ಟಿಸಿಕೊಟ್ಟಿದೆ. " ಹೇಗೂ ಅವರಿಗೆ ಅಸಮಾಧಾನವಿದೆ, ಹಾಗಾಗಿ ಅವರು ಈ ಮೂಲಕ ಪಕ್ಷಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ " ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಕುಮಾರಸ್ವಾಮಿಯವರ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಒಟ್ಟಾರೆ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಮುಂದಿನ ದಿನಗಳಲ್ಲಿ ಯಾವ್ಯಾವ ರೂಪ ಪಡೆಯುತ್ತೆ ಅಂತ ಕಾದು ನೋಡಬೇಕು.