ಮೋದಿ ‘ಅಚ್ಛೇದಿನ’ಗಳು ಇವರಿಗೇಕೆ ಬೇಡವಾಗಿವೆ?
ಭಾರತೀಯ ಪೌರತ್ವ ತ್ಯಜಿಸುತ್ತಿರುವ ಲಕ್ಷಾಂತರ ಶ್ರೀಮಂತರು
ಪ್ರಧಾನಿ ಮೋದಿಯನ್ನು ಹಾಡಿಹೊಗಳುವ ಗೋದಿ ಮಾಧ್ಯಮ, ವಾಟ್ಸ್ಆ್ಯಪ್ ಯುನಿವರ್ಸಿಟಿ, ಬಿಜೆಪಿಯ ಐಟಿ ಸೆಲ್ ಇಲ್ಲೆಲ್ಲ ಎಂಥ ವಿಜೃಂಭಣೆಯ ಇಮೇಜ್ ಸೃಷ್ಟಿಸಲಾಗುತ್ತದೆ ಎಂಬುದನ್ನು ನೋಡಿದ್ದೇವೆ. ಕಳೆದ ಒಂಭತ್ತು ವರ್ಷಗಳಲ್ಲಿ ಭಾರತ ವಿಶ್ವಗುರು ಆಗುತ್ತಿದೆ, ಪ್ರಪಂಚದ ಸೂಪರ್ ಪವರ್ ದೇಶಗಳೆಲ್ಲ ಮೋದಿಯ ಗುಣಗಾನ ಮಾಡುತ್ತಿವೆ, ಅಮೆರಿಕ, ಚೀನಾ ದೇಶಗಳ ಅಧ್ಯಕ್ಷರೇ ಮೋದಿಯವರೊಂದಿಗೆ ಸೆಲ್ಫೀ ತೆಗೆಸಿಕೊಳ್ಳಲು ಕಾಯುತ್ತಾ, ರಶ್ಯ-ಉಕ್ರೇನ್ ಯುದ್ಧ ನಿಲ್ಲಿಸಲು ಮೋದಿ ಮಧ್ಯಪ್ರವೇಶಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ ಇತ್ಯಾದಿ ಇತ್ಯಾದಿ.
ವಾಸ್ತವವನ್ನು ಗಮನಿಸುವುದಾದರೆ, ಮೋದಿ ಸರಕಾರವೇ ಕೊಡುತ್ತಿರುವ ಅಂಕಿಅಂಶಗಳ ಪ್ರಕಾರ, 2011ರಿಂದ 16 ಲಕ್ಷಕ್ಕಿಂತಲೂ ಹೆಚ್ಚು ಭಾರತೀಯರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ. 2022, ಇದೊಂದೇ ವರ್ಷವೇ 2,25,620 ಮಂದಿ ಭಾರತೀಯ ಪೌರತ್ವ ತ್ಯಜಿಸಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 618 ಮಂದಿ.
ಈ ಅಂಕಿಅಂಶಗಳು ಏನನ್ನು ಹೇಳುತ್ತಿವೆ? ಯಾಕೆ ಶ್ರೀಮಂತ ಭಾರತೀಯರೆಲ್ಲ ದೇಶ ಬಿಟ್ಟು ವಿದೇಶಗಳಲ್ಲಿ ಹೋಗಿ ನೆಲೆಸುತ್ತಿದ್ದಾರೆ? ದೇಶದಲ್ಲಿ ಎಲ್ಲ ಚೆನ್ನಾಗಿದ್ದು ಅಚ್ಛೆದಿನ್ ಬಂದಿದ್ದರೆ ಯಾಕೆ ಇಷ್ಟೊಂದು ಜನ ಶ್ರೀಮಂತರು ಇಲ್ಲಿ ದುಡಿದು ಸಂಪಾದಿಸಿದ ಸಂಪತ್ತು ಹಿಡಿದುಕೊಂಡು ದೇಶ ಬಿಡುತ್ತಿದ್ದಾರೆ? ಅದಕ್ಕೆ ಅವರು ಕೊಡುತ್ತಿರುವ ಕಾರಣಗಳು ಏನು ಹೇಳುತ್ತಿವೆ? ದೇಶ ಬಿಟ್ಟು ಹೋಗಿ ವಿದೇಶಗಳಲ್ಲಿ ವಾಸವಾಗಿ, ಇಲ್ಲಿ ದೇಶದಲ್ಲಿರುವ ಜನಸಾಮಾನ್ಯರಿಗೆ ಅಲ್ಲಿಂದ ದೇಶಭಕ್ತಿಯ ಹೆಸರಲ್ಲಿ ದ್ವೇಷಭಕ್ತಿ ಹಾಗೂ ಮೋದಿ ಭಕ್ತಿಯ ಪಾಠ ಹೇಳುವ ಈ ಹೊಸ ದೇಶಭಕ್ತಿ ಎಂಥದ್ದು ?
ಅಂಕಿಅಂಶಗಳ ಪ್ರಕಾರ ಹಿಂದೆಂದಿಗಿಂತಲೂ ಹೆಚ್ಚಿನ ಭಾರತೀಯರು 2022ರಲ್ಲಿ ತಮ್ಮ ಪೌರತ್ವ ತ್ಯಜಿಸಿದ್ದಾರೆ ಮತ್ತು ಇತರ ದೇಶಗಳಲ್ಲಿ ಪೌರತ್ವ ಪಡೆದಿದ್ದಾರೆ. ಲೋಕಸಭೆಯಲ್ಲಿ ಈ ವರ್ಷದ ಮಾರ್ಚ್ನಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಕೊಟ್ಟಿರುವ ಉತ್ತರ ಈ ವಿಚಾರವನ್ನು ಬಹಿರಂಗಪಡಿಸಿದೆ.
ಏಕೆ ಹೀಗೆ? ಅವರೇಕೆ ಪೌರತ್ವ ತ್ಯಜಿಸುತ್ತಾರೆ? ಇಂಥದೊಂದು ಪ್ರಶ್ನೆ ಸಹಜ. ಆದರೆ ಇದಕ್ಕೆ ಉತ್ತರವಾಗಿ, ಅದು ಅವರ ಆಯ್ಕೆ ಎನ್ನುತ್ತದೆ ಸರಕಾರ. ಇನ್ನೂ ಮುಂದುವರಿದು, ಯಶಸ್ವಿ, ಸಮೃದ್ಧ ಮತ್ತು ಪ್ರಭಾವಿ ಅನಿವಾಸಿ ಭಾರತೀಯ ಸಮುದಾಯ ಭಾರತಕ್ಕೆ ಆಸ್ತಿಯಾಗಿದೆ. ಈ ಅನಿವಾಸಿ ಭಾರತೀಯರ ನೆಟ್ವರ್ಕ್ಗಳನ್ನು ಬಳಸಿಕೊಂಡು ದೇಶ ಬಹಳಷ್ಟು ಲಾಭ ಪಡೆಯಲು ಸಾಧ್ಯ ಎಂದೂ ಸಚಿವರು ಉತ್ತರ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.
ಆದರೆ ಶ್ರೀಮಂತರೂ, ಸುಶಿಕ್ಷಿತರೂ ಆಗಿರುವ ಅವರನ್ನು ದೇಶದಲ್ಲಿಯೇ ಉಳಿಸಿಕೊಂಡು ಲಾಭ ಪಡೆಯಬಹುದಲ್ಲವೇ ಎಂಬ ಪ್ರಶ್ನೆಯನ್ನು ಈ ದೇಶದ ಯಾವುದೇ ಸುದ್ದಿವಾಹಿನಿಗಳು ಕೇಂದ್ರ ಸರಕಾರದ ಬಳಿ ಕೇಳುವುದಿಲ್ಲ.
ವಲಸೆ ಮತ್ತು ಸ್ಥಳಾಂತರದ ಕುರಿತು ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಸಲಹೆ ನೀಡುವ ಲಂಡನ್ ಮೂಲದ ಸಂಸ್ಥೆ ಹೆನ್ಲಿ ಮತ್ತು ಪಾರ್ಟ್ನರ್ಸ್ ಹೇಳುವಂತೆ, ಭಾರತದಿಂದ ಜಗತ್ತಿನ ವಿವಿಧೆಡೆಗೆ ವಲಸೆ ಬಂದ ಭಾರತೀಯ ಹೈ ನೆಟ್ವರ್ತ್ ವ್ಯಕ್ತಿಗಳು ಅಂದರೆ HNWI ವ್ಯಕ್ತಿಗಳು ಜಗತ್ತಿನಾದ್ಯಂತ 2022ರಲ್ಲಿ ಎರಡನೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ಧಾರೆ. ಮಿಲಿಯನೇರ್ಗಳು, ಅಥವಾ ಈ HNWIಗಳೆಂದರೆ ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬಹುದಾದ ಸಂಪತ್ತನ್ನು ಹೊಂದಿರುವ ಸಿರಿವಂತರು. ಹೆಚ್ಚಿನ ಸಂಖ್ಯೆಯ HNWIಗಳು ಚೀನಾದವರಾಗಿದ್ದಾರೆ. ಚೀನಾದ ಪೌರತ್ವವನ್ನು ಬಿಟ್ಟುಕೊಟ್ಟಿರುವವರು 2023ರಲ್ಲಿ 13,500 ಎಂದು ಹೇಳಲಾಗಿದೆ. 2022ರಲ್ಲಿ ಇಂಥವರ ಸಂಖ್ಯೆ 10,800 ಆಗಿತ್ತು. ಭಾರತದಿಂದ 2022ರಲ್ಲಿ ವಲಸೆಹೋದ HNWIಗಳ ಸಂಖ್ಯೆ 7,500.
Henley Private Wealth Migration
ಈ ವರ್ಷದ ವರದಿ ಪ್ರಕಾರ, 6,500 ಮಿಲಿಯನೇರ್ಗಳು 2023ರಲ್ಲಿ ಭಾರತ ತೊರೆಯಲಿದ್ದಾರೆ. ಆದರೆ ಗ್ಲೋಬಲ್ ವೆಲ್ತ್ ಮೈಗ್ರೇಶನ್ ರಿವ್ಯೆ ಅಂಕಿಅಂಶಗಳು ಹೇಳುವ ಪ್ರಕಾರ, 2020ರಲ್ಲಾಗಲೇ ದೇಶದ ಮಿಲಿಯನೇರ್ಗಳಲ್ಲಿ ಶೇ.2ರಷ್ಟು ಮಂದಿ ವಿದೇಶ ಸೇರಿದ್ದಾರೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ, 2020ರಲ್ಲಿ ದೇಶದ 180 ಲಕ್ಷ ಜನರು ತಾಯ್ನೆಡಿನ ಹೊರಗೆ ನೆಲೆಸಿದ್ದು, ಇದರೊಂದಿಗೆ ಭಾರತ ವಿಶ್ವದಲ್ಲೇ ಅತಿ ದೊಡ್ಡ ಡಯಾಸ್ಪೊರಾ ಜನಸಂಖ್ಯೆಯನ್ನು ಹೊಂದಿದೆ.
ಶ್ರೀಮಂತ ಭಾರತೀಯರು ವಿದೇಶಗಳಲ್ಲಿ ನೆಲೆಸಲು ಬಯಸುವುದೇಕೆ ಎಂಬುದಕ್ಕೆ ಕೊಡಲಾಗುತ್ತಿರುವ ಕಾರಣಗಳೆಂದರೆ, ಉತ್ತಮ ಆರೋಗ್ಯ ರಕ್ಷಣೆ, ಮುಕ್ತ ಮತ್ತು ಹೊಂದಿಕೊಳ್ಳುವ ಉದ್ಯಮ ಪರಿಸರಗಳು, ಉತ್ತಮ ಶೈಕ್ಷಣಿಕ, ವೃತ್ತಿಪರ ಅವಕಾಶಗಳು ಹಾಗೂ ಆರ್ಥಿಕ ಯೋಗಕ್ಷೇಮ.
ಈ ಅಂಶಗಳ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಏಳುವುದು ಸಹಜ. ಡಯಾಸ್ಪೊರಾ ಭಾಗವಾಗಿ ಮೋದಿ ಆಡಳಿತವನ್ನು ವಿದೇಶಗಳಲ್ಲಿ ಕುಳಿತು ಕೊಂಡಾಡುವವರು ಮೋದಿ ಆಡಳಿತದಲ್ಲಿ ಇಲ್ಲೇ ದೇಶದಲ್ಲಿಯೇ ಇರಬಯಸದೆ ದೇಶವನ್ನು, ಅದರಲ್ಲೂ ಪೌರತ್ವವನ್ನೇ ತ್ಯಜಿಸಿ ಹೋಗುತ್ತಿರುವುದೇಕೆ? ಮೋದಿ ವಿದೇಶಕ್ಕೆ ಹೋದಾಗ ಅಲ್ಲಿ ಸ್ಟೇಡಿಯಂಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಅವರಿಗೆ ಜೈಕಾರ ಹಾಕುವವರು ಇಲ್ಲಿಯೇ ಬಂದು ಏಕೆ ಇರಲಾರರು? ಮೋದಿ ಆಡಳಿತದ ಅಚ್ಛೇದಿನಗಳು ಅವರಿಗೇಕೆ ಬೇಡವಾಗಿವೆ? ಪೌರತ್ವವನ್ನೇ ತೊರೆದು ವಿದೇಶಗಳಿಗೆ ಹೋಗುತ್ತಿದ್ದಾರೆಂದರೆ ಮೋದಿ ಸರಕಾರ ಕೊಡುವ ಅಚ್ಛೇದಿನಗಳಿಗಿಂತಲೂ ಹೆಚ್ಚಿನದು ವಿದೇಶಗಳಲ್ಲಿ ಇರಲೇಬೇಕು ಎಂದಲ್ಲವೆ? ಹಾಗಾದರೆ ಇವರೇಕೆ ಇನ್ನೂ ಕೊಡಲಿಕ್ಕಾಗದ ಅಚ್ಛೇದಿನಗಳ ಬಗ್ಗೆ ಇಷ್ಟೆಲ್ಲ ಅಬ್ಬರದಿಂದ ವಾಟ್ಸ್ಆ್ಯಪ್, ಫೇಸ್ ಬುಕ್ಗಳಲ್ಲಿ ಹುಯಿಲೆಬ್ಬಿಸುತ್ತಿದ್ದಾರೆ? ಅಷ್ಟಕ್ಕೂ ಇವರ ಅಚ್ಛೇದಿನಗಳನ್ನು ಕಂಡವರು ಯಾರು?
ದೇಶದ ಬ್ಯಾಂಕುಗಳಿಗೆ ಪಂಗನಾಮ ಹಾಕಿದವರೂ ವಿದೇಶಗಳಲ್ಲಿ ಹೋಗಿ ಕುಳಿತುಕೊಂಡು ಅಚ್ಛೇದಿನ ಅನುಭವಿಸುತ್ತಿದ್ದಾರೆ. ದೇಶದ ಶ್ರೀಮಂತರೂ ಇಲ್ಲಿಲ್ಲದ ಅಚ್ಛೇದಿನಗಳಿಗೋಸ್ಕರವೇ ವಿದೇಶಗಳಿಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಇವರ ಅಚ್ಛೇದಿನಗಳು ಹಸಿ ಹಸಿ ಸುಳ್ಳು ಎಂಬುದು ದೇಶದ ಬಡವರಿಗಂತೂ ಬಹಳ ಹಿಂದೆಯೇ ತಿಳಿದುಹೋಗಿದೆ.
ಹಾಗಾದರೆ ನಿಜವಾಗಿಯೂ ಈ ದೇಶದಲ್ಲಿ ಅಚ್ಛೇದಿನಗಳಿಗೆ ಕಾಯುತ್ತಿರುವವರು ಯಾರು?