ಔರಾದ್‌ನಲ್ಲಿ ಕಾನೂನು ಬಾಹಿರ ಕಟ್ಟಡಗಳಿಗೆ ಆಸ್ಪದ ಬೇಡ : ಶಾಸಕ ಪ್ರಭು ಚವ್ಹಾಣ್
ಬೀದರ್ : ಔರಾದ(ಬಿ) ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಕಟ್ಟಡಗಳನ್ನು ಅನಧಿಕೃತವಾಗಿ ನಿರ್ಮಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತವುಗಳಿಗೆ ಆಸ್ಪದ ಕೊಡಬಾರದೆಂದು ಶಾಸಕ ಪ್ರಭು.ಬಿ ಹೇಳಿದ್ದಾರೆ.
ಪಟ್ಟಣ ಪಂಚಾಯತ್ನಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಪಟ್ಟಣ ಪಂಚಾಯತ್ಗೆ ಒಂದು ಅರ್ಜಿ ಕೂಡ ಕೊಡದೇ ಕಾನೂನು ಬಾಹಿರವಾಗಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ನಾನು ಕಾನೂನು ಬಾಹಿರ ಕೆಲಸಗಳಿಗೆ ಯಾವತ್ತೂ ಆಸ್ಪದ ಕೊಡುವುದಿಲ್ಲ. ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಬೇಕೆಂದು ಶಾಸಕರು ಹೇಳಿದರು.
ಶಾಶ್ವತವಾಗಿ ನೀರಿನ ಸಮಸ್ಯೆ ಇತ್ಯರ್ಥಪಡಿಸಲು ಸಾಕಷ್ಟು ಪ್ರಯತ್ನ ವಹಿಸಿ ಕಾರಂಜಾ ಜಲಾಶಯದಿಂದ ಔರಾದ(ಬಿ) ಪಟ್ಟಣಕ್ಕೆ ನೀರು ಸರಬರಾಜು ಮಾಡಲು 84 ಕೋಟಿ ರೂ. ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಕೆಲವು ದಿನಗಳಲ್ಲಿ ಕೆಲಸ ಕೂಡ ಆರಂಭಗೊಳ್ಳಲಿದೆ ಎಂದು ಹೇಳಿದರು.
ಪಟ್ಟಣವನ್ನು ಸುಂದರವಾಗಿಸುವ ಕನಸು ಹೊಂದಿದ್ದು, ಅದರಂತೆ ಎಪಿಎಂಸಿ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಉತ್ತಮ ರಸ್ತೆಯನ್ನು ನಿರ್ಮಿಸಿ ಸುಂದರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಟ್ರೀ ಪಾರ್ಕ್ ನಿರ್ಮಿಸಲಾಗುತ್ತಿದೆ. ಪಟ್ಟಣಕ್ಕೆ ಮಾಸ್ಟರ್ ಪ್ಲಾನ್ ಕೂಡ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಣ ಸುಂದರೀಕರಣ ಕೆಲಸ ವ್ಯವಸ್ಥಿತವಾಗಿ ನಡೆಯಲಿದೆ. ರಿಂಗ್ ರೋಡ್ ನಿರ್ಮಿಸುವ ಯೋಜನೆ ಹೊಂದಿದ್ದು, ಅಧಿಕಾರಿಗಳು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿಗೆ ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಎಲ್ಲರೂ ಅವರಿಗೆ ಸಹಕರಿಸಬೇಕು. ಪಟ್ಟಣದ ಸ್ವಚ್ಛತೆ ಮೊದಲ ಆದ್ಯತೆಯಾಗಬೇಕು. ಪ್ರತಿ ವಾರ್ಡ್‌ನಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ಪಟ್ಟಣದಲ್ಲಿ ಉದ್ಯಾನಗಳಿಗೆ ಸ್ಥಳ ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು. ಪ್ರತಿ ವಾರ್ಡ್‌ನಲ್ಲಿ ನೀರು, ವಿದ್ಯುತ್ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕಾಲಕಾಲಕ್ಕೆ ಸಭೆಗಳನ್ನು ನಡೆಸಬೇಕು. ಅಧಿಕಾರಿಗಳು ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ಉಪಾಧ್ಯಕ್ಷರಾದ ರಾಧಾಬಾಯಿ ಕೃಷ್ಣ ನರೋಟೆ, ಪಟ್ಟಣ ಪಂಚಾಯತ್ ಸದಸ್ಯರಾದ ಧೊಂಡಿಬಾ ನರೋಟೆ, ಸಂತೋಷ ಪೋಕಲವಾರ, ದಯಾನಂದ ಘುಳೆ, ಗುಂಡಪ್ಪ ಮುಧಾಳೆ, ಸಂಜು ವಡೆಯರ್, ಬನ್ಸಿಲಾಲ ಖೇರಾನಾಯಕ್, ಸಂಗೀತಾ ಯಾದುರಾವ, ಪ್ರೇರಣಾ ಬಾಬು, ಅಂಬಿಕಾ ಕೇರಬಾ ಪವಾರ, ಶೀಲಾಬಾಯಿ, ಸುರೇಖಾ ಸೂರ್ಯಕಾಂತ, ನೀಲಮ್ಮ ಚಂದ್ರಶೇಖರ, ಅಬ್ಜಲ್ಖಾನ್ ವಾಹೀದ್ಖಾನ್, ಪ್ರಶಾಂತ ಅಶೋಕ, ಲಕ್ಷಿಬಾಯಿ ಬಾಬುರಾವ ಸೇರಿದಂತೆ ಪಟ್ಟಣ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.