ಬಾಗಲಕೋಟೆ: ಹೇರ್ ಡ್ರೈಯರ್ ಬ್ಲಾಸ್ಟ್ ಪ್ರಕರಣಕ್ಕೆ ಸ್ಫೋಟಕ ತಿರುವು
ಕೊಲೆಗಾಗಿ ರೂಪಿಸಿದ್ದ ಸಂಚು ಬಯಲು: ಆರೋಪಿಯ ಬಂಧನ
ಬಂಧಿತ ಆರೋಪಿ ಸಿದ್ದಪ್ಪ ಶೀಲವಂತ
ಬಾಗಲಕೋಟೆ: ಹೇರ್ಡ್ರೈಯರ್ ಬ್ಲಾಸ್ಟ್ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಕೊಲೆ ಮಾಡುವ ಉದ್ದೇಶದಿಂದ ಹೇರ್ ಡ್ರೈಯರ್ ಸ್ಫೋಟಿಸಿರುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದ್ದು, ಈ ಸಂಬಂಧ ಆರೋಪಿಯನ್ನು ಬಂಧಿಸಿರುವುದು ವರದಿಯಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಇತ್ತೀಚೆಗೆ ಹೇರ್ ಡ್ರೈಯರ್ ಬ್ಲಾಸ್ಟ್ ನಿಂದ ಬಸಮ್ಮ ಎಂಬವರಿಗೆ ಕೈಗಳಿಗೆ ಗಾಯವಾಗಿತ್ತು. ಬಂಧಿತ ಆರೋಪಿಯನ್ನು ಸಿದ್ದಪ್ಪ ಶೀಲವಂತ ಎಂದು ಗುರುತಿಸಲಾಗಿದೆ. ಎಂಎ, ಬಿಇಡಿ ಮುಗಿಸಿದ್ದ ಆರೋಪಿ ಕೊಪ್ಪಳದಲ್ಲಿ ಗ್ರಾನೈಟ್ ಕಂಪೆನಿಯಲ್ಲಿ ಸೂಪರ್ ವೈಸರ್ ಆಗಿ ಕಳೆದ 16 ವರ್ಷದಿಂದ ಕೆಲಸ ಮಾಡುತ್ತಿದ್ದ ತಿಳಿದು ಬಂದಿದೆ.
ಆರೋಪಿ ಸಿದ್ದಪ್ಪ ಹಾಗೂ ಬಸಮ್ಮ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ಅಕ್ರಮ ಸಂಬಂಧ ವಿಚಾರಕ್ಕೆ ಬಸಮ್ಮನ ಸ್ನೇಹಿತೆ ಶಶಿಕಲಾ ಎಂಬವರು ತಕರಾರು ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಯು ಶಶಿಕಲಾ ಅವರ ಕೊಲೆಗೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ತಾನೇ ಹೇರ್ ಡ್ರೈಯರ್ ಖರೀದಿಸಿ, ಹೇರ್ ಡ್ರೈಯರ್ ಸ್ಫೋಟಿಸಲು ಅದರೊಳಗೆ ಡೆಟೊನೇಟರ್ ಬಳಸಿ ಶಶಿಕಲಾ ಅವರ ವಿಳಾಸಕ್ಕೆ ಕಳುಹಿಸಿದ್ದಾನೆ. ಆದರೆ ಊರಲ್ಲಿ ಇರದ ಶಶಿಕಲಾ ಅವರು ತನ್ನ ಸ್ನೇಹಿತೆ ಬಸಮ್ಮ ಅವರ ಬಳಿ ಹೇರ್ ಡ್ರೈಯರ್ ಪಡೆಯುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಸ್ನೇಹಿತೆ ಶಶಿಕಲಾ ಮಾಹಿತಿಯಂತೆ ಡಿಟಿಡಿಸಿ ಕೋರಿಯರ್ ಸೆಂಟರ್ ಗೆ ತೆರಳಿ ಬಸಮ್ಮ ಹೇರ್ ಡ್ರೈಯರ್ ಪಡೆದು ಮನೆಗೆ ಮರಳಿದ ಬಸಮ್ಮ ಹೇರ್ ಡ್ರೈಯರ್ ಆನ್ ಮಾಡಿದ್ದಾರೆ. ಹೇರ್ ಡ್ರೈಯರ್ ಆನ್ ಮಾಡುತ್ತಿದ್ದಂತೆ ಅದು ಸ್ಫೋಟಗೊಂಡು ಅವರ ಕೈಗಳಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ.