ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತ್ತೋರ್ವ ಸಿ.ಎನ್. ಮಂಜುನಾಥ್ ಸ್ಪರ್ಧೆ!
ಸಿ.ಎನ್.ಮಂಜುನಾಥ್
ಬೆಂಗಳೂರು, ಮಾ.29: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಆರಂಭಗೊಳ್ಳುವುದರೊಂದಿಗೆ ಚುನಾವಣಾ ಕಣ ರಂಗೇರಲಾರಂಭಿಸಿದೆ. ಇಲ್ಲಿ ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮಾ.28ರಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಅವರ ವಿರುದ್ಧ ಬಿಜೆಪಿಯಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಅಳಿಯ, ಖ್ಯಾತ ವೈದ್ಯ ಡಾ.ಸಿ.ಎನ್. ಮಂಜುನಾಥ್ ಕಣಕ್ಕಿಳಿದು ಸುದ್ದಿಯಾಗಿದ್ದಾರೆ. ಇದೀಗ ಅದೇ ಹೆಸರಿನ ಮತ್ತೊಬ್ಬರು ಈ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದು, ಕುತೂಹಲ ಮೂಡಿಸಿದೆ.
ಇವರ ಹೆಸರು ಸಹ ಸಿ.ಎನ್.ಮಂಜುನಾಥ್. ಇವರು ಬಹುಜನ ಭಾರತ ಪಾರ್ಟಿಯಿಂದ ಸ್ಪರ್ಧಿಸಲಿದ್ದಾರೆ. ಎಪ್ರಿಲ್ 2ರಂದು ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಡಾ. ಮಂಜುನಾಥ್ ಅವರ ತವರು ಚನ್ನರಾಯಪಟ್ಟಣದವರೇ ಆಗಿರುವ ಸಿ.ಎನ್. ಮಂಜುನಾಥ್ ಚನ್ನರಾಯಪಟ್ಟಣದ ತಾಲೂಕು ಪಂಚಾಯತ್ ಮತ್ತು ಪುರಸಭೆಯ ಮಾಜಿ ಸದಸ್ಯ. ಪಟ್ಟಣದ ಶಾರದಾ ನಗರದವರು. ದಲಿತ ಸೇನಾ ಪಡೆ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಅವರು, ಮಾದಿಗ ದಂಡೋರ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಇವರು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್ಪಿ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದಾರೆ.