ಕರಸೇವಕನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಹೋರಾಟ
ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಯನ್ನು ರಾಜ್ಯ ಸರಕಾರ ಈ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿ, ಬಿಜೆಪಿ ನಾಯಕರು ರಾಜ್ಯಾದ್ಯಂತ ಹೋರಾಟ, ಧರಣಿ, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಧರಣಿ, ಹೋರಾಟ ನಡೆಸಲಾಯಿತು. ಇದರ ಭಾಗವಾಗಿ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಮಾಯಿಸಿದ ಬಿಜೆಪಿ ನಾಯಕರು, ರಾಜ್ಯದ ಸರಕಾರಕ್ಕೆ 48 ಗಂಟೆಗಳ ಗಡುವು ನೀಡುತ್ತಿದ್ದು, ಅಷ್ಟರಲ್ಲಿ ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆಗೊಳಿಸದೇ ಇದ್ದಲ್ಲಿ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬಿಜೆಪಿ ಯುವ ಮೋರ್ಚಾ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಕೆಲ ದಿನಗಳಿಂದ ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಉತ್ಸವದ ವಾತಾವರಣ ಇದೆ. ಒಂದು ಕಡೆ ರಾಮಭಕ್ತರು ಪವಿತ್ರ ಮಂತ್ರಾಕ್ಷತೆ ಹಂಚುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿರುವ ಹಿಂದೂ ವಿರೋಧಿ, ರಾಮ ವಿರೋಧಿ ಕಾಂಗ್ರೆಸ್ ಸರಕಾರ ಮಂತ್ರಾಕ್ಷತೆ ಹಂಚುವುದಕ್ಕೆ ತಡೆ ಒಡ್ಡುತ್ತಿದೆ’ ಎಂದು ದೂರಿದರು.
ಮಾಜಿ ಸಚಿವ ಆಂಜನೇಯ ಹೇಳಿಕೆ ನೋಡಿದರೆ ಅವರನ್ನು ದೇವರೇ ಕಾಪಾಡಬೇಕು. ಇದರ ನಡುವೆ ಈ ಸರಕಾರ ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸುವ ದುಸ್ಸಾಹಸಕ್ಕೆ ಕೈಹಾಕಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ, ಹಿಂದೂಗಳ ಹಕ್ಕು ತುಳಿಯುವ ಕೆಲಸ ಮಾಡುತ್ತಿದೆ ಇವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದೂ ಅವರು ಟೀಕಿಸಿದರು.
ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ಅಧಿಕಾರ ಶಾಸ್ವತ ಅಲ್ಲ, ವಿಚಾರಗಳು ಶಾಶ್ವತವಾಗಿ ಉಳಿಯಲಿವೆ. ರಾಮ ಮಂದಿರ ವಿಚಾರದಲ್ಲಿ ಸಿದ್ದರಾಮಯ್ಯ ಮಾತು ಕಾಂಗ್ರೆಸ್ ಮಾತು ಹೊಸತೇನಲ್ಲ. ಮತ್ತೊಂದೆಡೆ ಕಾಂಗ್ರೆಸ್‍ನ ಶೇ.75 ರಷ್ಟು ಜನ 22 ರಂದು ನಂದಾದೀಪ ಹಚ್ಚಲಿದ್ದಾರೆ. ಇದನ್ನು ತಡೆಯವ ಕೀಳುಮಟ್ಟದ ಅಭಿರುಚಿಯನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ ಮಾತನಾಡಿ, ಪ್ರಕರಣ ವಾಪಸ್ಸು ಪಡೆದು ಶ್ರೀಕಾಂತ್ ಪೂಜಾರಿ ಬಿಡುಗಡೆ ಮಾಡಿ, ಬಂಡತನ ಬಿಡಿ. ಇಲ್ಲದೇ ಇದ್ದರೆ ಜನ ಕ್ಷಮಿಸಲ್ಲ ಎಂದು ಎಚ್ಚರಿಸಿದರು.