ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸರಕಾರ ಮುಖ್ಯ ಕಾರಣ: ವಿ.ಮನೋಹರ್ ಆರೋಪ
ಪೆನ್‌ಡ್ರೈವ್ ಪ್ರಕರಣದ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಬೆಂಗಳೂರು, ಎ. 29: ಹಾಸನ ಜಿಲ್ಲೆಯಲ್ಲಿ ಮುಗ್ಧ ಮಹಿಳೆಯರ ಮೇಲೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿ, ಮಹಿಳೆಯರನ್ನು ಬೆತ್ತಲೆಗೊಳಿಸಿ, ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಮನೋಹರ್ ದೂರು ನೀಡಿದ್ದಾರೆ.
ಸೋಮವಾರ ನಗರದ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‌ಡ್ರೈವ್ ಪ್ರಕರಣದ ಕುರಿತು ರಾಜ್ಯ ಸರಕಾರ ಈಗಾಗಲೇ ಎಸ್‌ಐಟಿ ರಚನೆ ಮಾಡಿದೆ. ಮಹಿಳಾ ಆಯೋಗ ತನ್ನ ವ್ಯಾಪ್ತಿಯಲ್ಲಿ ಈಗಾಗಲೇ ದೂರನ್ನು ಕೊಟ್ಟಿದೆ. ಮಾನವ ಹಕ್ಕುಗಳ ಆಯೋಗ ಈಗಾಗಲೇ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಳ್ಳಬೇಕಿತ್ತು. ಮಾನವ ಹಕ್ಕುಗಳು ಉಲ್ಲಂಘನೆ ಆದರೂ ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಅತ್ಯಂತ ವಿಷಾದ ಎಂದು ಬೇಸರ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ಆಯೋಗ ಕೂಡಲೇ ಹಾಸನ ಜಿಲ್ಲೆಗೆ ಭೇಟಿ ನೀಡಿ, ಮಹಿಳೆಯರಿಗೆ ಆಗಿರುವಂತಹ ಅನ್ಯಾಯ, ದೌರ್ಜನ್ಯವನ್ನು ಕಣ್ಣಾರೆ ಕಂಡು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿ ಪ್ರಜ್ವಲ್ ಮತ್ತು ರೇವಣ್ಣರನ್ನು ಬಂಧಿಸಬೇಕು. ಮಾನವ ಹಕ್ಕುಗಳ ಆಯೋಗ ವಿಶೇಷ ತಂಡ ರಚನೆ ಮಾಡಿ ನಾಳೆ ಸಂಜೆಯ ಒಳಗೆ ಮಾಹಿತಿ ಪಡೆದುಕೊಳ್ಳಬೇಕು. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕೂಡಲೇ ಅತ್ಯಂತ ಕಠಿಣ ಕ್ರಮ ಕೈಗೊಂಡು ಸಂತ್ರಸ್ತ ಮಹಿಳೆಯರನ್ನ ರಕ್ಷಿಸ ಬೇಕು ಎಂದು ಮನೋಹರ್ ತಿಳಿಸಿದರು.
ಕೋಮುವಾದವನ್ನು ವಿರೋಧ ಮಾಡುತ್ತಿದ್ದ ದೇವೇಗೌಡರು, ಯಾವ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಪ್ರಜ್ವಲ್ ನನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದಲೇ ಜನತಾದಳ ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು. ತನ್ನ ಕುಟುಂಬ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಈ ತರದ ಕೆಲಸ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಲು ಮುಖ್ಯ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಕೇಂದ್ರ ಸರಕಾರ. ಪ್ರಜ್ವಲ್ ಇಂತಹ ಕೆಟ್ಟ ಕೆಲಸವನ್ನು ಮಾಡಿರುವುದು ಇವರಿಗೆ ಮೊದಲೆ ಗೊತ್ತಿತ್ತು ಎಂದು ಆರೋಪ ವಿ.ಮನೋಹರ್ ಆರೋಪ ಮಾಡಿದರು.