ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ | ಎಐಎಂಎಸ್‍ಎಸ್‍ನಿಂದ ನಾಳೆ(ಮೇ 14) ಮಹಿಳಾ ಸಮಾವೇಶ
ಬೆಂಗಳೂರು : ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಅನ್ಯಾಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ನ್ಯಾಯ, ರಕ್ಷಣೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗ್ರಹಿಸಿ ‘ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ’(ಎಐಎಂಎಸ್‍ಎಸ್) ರಾಜ್ಯ ಮಟ್ಟದ ಸಮಾವೇಶವನ್ನು ನಾಳೆ(ಮೇ 14) ನಗರದ ಕೆ.ಆರ್. ವೃತ್ತದಲ್ಲಿನ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಸೋಮವಾರ ಈ ಸಂಬಂಧ ಪ್ರಕಟನೆ ನೀಡಿರುವ ಕಾರ್ಯದರ್ಶಿ ಶಾಂತಾ, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಕೂಡಲೆ ಬಂಧಿಸಬೇಕು. ತನಿಖೆಯನ್ನು ಪೂರ್ಣಗೊಳಿಸಿ ಅಪರಾಧಿಗಳಿಗೆ ಶಿಕ್ಷೆಯನ್ನು ಖಾತ್ರಿ ಪಡಿಸಬೇಕು. ಸಂತ್ರಸ್ತೆಯರಿಗೆ ಆಪ್ತ ಸಮಾಲೋಚನೆ ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಪೆನ್‍ಡ್ರೈವ್‍ಗಳನ್ನು ಹಾದಿ-ಬೀದಿಯಲ್ಲಿ ಬಿಸಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಸಿ.ಎಚ್.ಹನುಮಂತರಾಯ, ಉಪಾಧ್ಯಕ್ಷೆ ಡಾ.ಸುಧಾಕಾಮತ್, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ರಾಜ್ಯಾಧ್ಯಕ್ಷೆ ಎಂ.ಎನ್.ಮಂಜುಳಾ ಹಾಗೂ ರಾಜ್ಯ ಕಾರ್ಯದರ್ಶಿ ಶೋಭಾ.ಎಸ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.