ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ನಾಳೆ(ಎ.20) ಬೆಂಗಳೂರಿಗೆ ಆಗಮನ
ʼಚುನಾವಣಾ ಬಾಂಡ್ ಅಕ್ರಮʼ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ
ಬೆಂಗಳೂರು: ಸುಪ್ರೀಂ ಕೋರ್ಟ್‍ನ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರು ನಾಳೆ(ಎ.20) ಬೆಂಗಳೂರಿಗೆ ಆಗಮಿಸಲಿದ್ದು, ‘ಚುನಾವಣಾ ಬಾಂಡ್ ಅಕ್ರಮ’ಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ರಾಜ್ಯ ಎಸ್‍ಸಿ-ಎಸ್‍ಟಿ ಗುತ್ತಿಗೆದಾರರ ಸಂಘವು ಮಧ್ಯಾಹ್ನ 2:30ಕ್ಕೆ ಇಲ್ಲಿನ ಕೆ.ಆರ್.ವೃತ್ತದಲ್ಲಿನ ಅಲುಮ್ನಿ ಅಸೋಶಿಯೇಷನ್ ಸಭಾಂಗಣದಲ್ಲಿ ಏರ್ಪಡಿಸಿರುವ ಚುನಾವಣಾ ಬಾಂಡ್ ಅಕ್ರಮಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಶಾಂತ್ ಭೂಷಣ್ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ ಅಧ್ಯಕ್ಷರಾದ ಪ್ರೊ.ತ್ರಿಲೋಚನ್ ಶಾಸ್ತ್ರಿ, ಜನರ ಮಾಹಿತಿ ಹಕ್ಕುಗಳ ರಾಷ್ಟ್ರೀಯ ಅಭಿಯಾನದ ಸಹ ಸಂಚಾಲಕಿ ಅಂಜಲಿ ಭಾರದ್ವಾಜ್, ಹೈಕೋರ್ಟ್‍ನ ಹಿರಿಯ ವಕೀಲ ಹರೀಶ್ ನರಸಪ್ಪ, ಎಸ್‍ಸಿ-ಎಸ್‍ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎನ್.ಮಹದೇವಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಸಂಜೆ 4ಗಂಟೆಗೆ ಬಹುತ್ವ ಕರ್ನಾಟಕ, ಜನಾಧಿಕಾರ ಸಂಘರ್ಷ ಪರಿಷತ್, ಜಾಗೃತ ಕರ್ನಾಟಕ ವತಿಯಿಂದ ಆಯೋಜಿಸಿರುವ ಬಿಜೆಪಿಯ ಎಲೆಕ್ಟೋರಲ್ ಬಾಂಡ್ ಸ್ಕ್ಯಾಮ್ ಕುರಿತು ಪ್ರಶಾಂತಿ ಭೂಷಣ್ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.