ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಪ್ರವೇಶ ದರ 200 ರೂ. ನಿಗದಿಗೊಳಿಸಲು ಆದೇಶಿಸುವಂತೆ ಸಿಎಂಗೆ ಮನವಿ
ಬೆಂಗಳೂರು : ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಪ್ರವೇಶ ದರ 200 ರೂ. ನಿಗದಿಗೊಳಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಗೋವಿಂದು, ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದ್ದು, ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೂ ಟಿಕೆಟ್ ದರವನ್ನು ನಿಗದಿಪಡಿಸಲಾಗುತ್ತಿದೆ. ಇದರಿಂದ ಕನ್ನಡ ಪ್ರೇಕ್ಷಕರಿಗೆ ಹೊರೆಯಾಗಿದೆ. 200 ರೂ. ಮೀರದಂತೆ ಪ್ರವೇಶದರ ವಿಧಿಸುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಾಣಿಜ್ಯ ಮಂಡಳಿಯು ಚಿತ್ರೋದ್ಯಮದ ಪರವಾಗಿ ಮನವಿ ಮಾಡಿಕೊಂಡ ಮೇರೆಗೆ ಸರಕಾರ ಗೃಹ ಇಲಾಖೆಯ ಮೂಲಕ ಆದೇಶ ಹೊರಡಿಸಬೇಕಾಗಿದ್ದು, ಅದರ ಬದಲು ವಾರ್ತಾ ಇಲಾಖೆಯ ಮೂಲಕ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಈ ಆದೇಶವನ್ನು ತೆರವು ಮಾಡುವಂತೆ ಮನವಿ ಪತ್ರ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, ಈಗಾಗಲೇ ತೆಲಂಗಾಣ, ಆಂಧ್ರಪ್ರದೇಶ ಮತ್ತು ಚೆನ್ನೈ ಮಲ್ಟಿಪ್ಲೆಕ್ಸ್ ಗಳಲ್ಲಿ 150 ರಿಂದ 200 ರೂ. ಪ್ರವೇಶದರ ನಿಗದಿಪಡಿಸಿರುವಂತೆ ನಮ್ಮಲ್ಲೂ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ರೂ. 150-200ಗೆ ಮೀರದಂತೆ ಪ್ರವೇಶದರ ನಿಗದಿಪಡಿಸುವಂತೆ ಸರಕಾರಿ ಆದೇಶ ಹೊರಡಿಸುವಂತೆ ಕೋರಲಾಗಿದೆ. ಮುಂದಿನ 10 ದಿನಗಳಲ್ಲಿ ಗೃಹ ಇಲಾಖೆಯಿಂದ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರು.