ಬೆಟ್ಟದಪುರ ಮಲ್ಲಿಗೆ ಕೊಲೆ ಆರೋಪ ಪ್ರಕರಣ : ಎ.23ಕ್ಕೆ ತೀರ್ಪು, ತನಿಖಾಧಿಕಾರಿಗಳಿಗೆ ಕೋರ್ಟ್ ತರಾಟೆ
ಸಾಂದರ್ಭಿಕ ಚಿತ್ರ
ಮೈಸೂರು: ಪತ್ನಿ ಜೀವಂತವಾಗಿದ್ದರೂ ಆಕೆಯನ್ನು ಕೊಲೆ ಮಾಡಿದ್ದಾನೆಂಬ ಆರೋಪದಲ್ಲಿ ನಿರಾಪರಾಧಿ ಪತಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಬೆಟ್ಟದಪುರ ಮಲ್ಲಿಗೆ ಕೊಲೆ ಆರೋಪ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಗುರುವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ 5ನೇ ಜಿಲ್ಲಾ ಸೆಷನ್ ನ್ಯಾಯಾಲಯವು ತನಿಖಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಎ.23ಕ್ಕೆ ತೀರ್ಪು ಕಾಯ್ದಿರಿಸಿ ಆದೇಶಿಸಿತು.
ಪ್ರಕರಣದ ಸಂದರ್ಭದಲ್ಲಿ ತನಿಖಾಧಿಕಾರಿಗಳಾಗಿದ್ದ ಬಿ.ಜಿ.ಪ್ರಕಾಶ್, ಮಹೇಶ್ ಕುಮಾರ್, ಪ್ರಕಾಶ್ ಎತ್ತಿಮನಿ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ದೋಷಾರೋಪ ಪಟ್ಟಿಗೆ ಏನು ಆಧಾರವಿದೆ ಎಂದು ಪ್ರಶ್ನಿಸಿದರು.
ಏನಿದು ಪ್ರಕರಣ?: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಮಹಿಳೆಯ ಮೃತದೇಹವನ್ನು ನಾಪತ್ತೆಯಾದ ಮಹಿಳೆ ಮಲ್ಲಿಗೆ ಅವರದ್ದು ಎಂಬ ಅನುಮಾನದ ಮೇರೆಗೆ ಆಕೆಯ ಪತಿ ಸುರೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಸುರೇಶ್, ಎರಡು ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಿ ಜೈಲಿನಿಂದ ಹೊರಬಂದ ಬಳಿಕ ಪತ್ನಿ ಬದುಕಿರುವುದು ಸುರೇಶ್ಗೆ ಗೊತ್ತಾಗಿ, ಈ ಪತ್ನಿಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಈ ಸಂಬಂಧ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚನೆ ನೀಡಿತ್ತು.
ಈ ಸಂದರ್ಭದಲ್ಲಿ ಆರೋಪಿ ಸುರೇಶ್ ಪರ ವಕೀಲ ಪಾಂಡು ಪೂಜಾರಿ ಮಾತನಾಡಿ, ಚಾರ್ಜ್ ಶೀಟ್ನಲ್ಲಿ ಪೊಲೀಸರು ಸುಳ್ಳು ಕಥೆ ಕಟ್ಟಿದ್ದಾರೆ, ಈ ಪ್ರಕರಣದಲ್ಲಿ ಮೂವರು ತನಿಖಾಧಿಕಾರಿಗಳು, ಸೇರಿದಂತೆ 10 ಪೊಲೀಸ್ ಅಧಿಕಾರಿಗಳ ವಿರುದ್ಧ ಕೋರ್ಟ್ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ. ಐಪಿಸಿ ಸೆಕ್ಷನ್ 211 ಅಡಿಯಲ್ಲಿ ಪ್ರಕರಣ ದಾಖಲಿಸಿ ಅಂತ ಮನವಿಯನ್ನೂ ಸಹ ಮಾಡಿದ್ದೇನೆ. ಅಲ್ಲದೇ ನ್ಯಾಯಾಂಗ ತನಿಖೆಗೂ ಕೂಡ ನಾನು ಮನವಿ ಮಾಡುತ್ತೇನೆ ಎಂದರು.
ಪೊಲೀಸರು ಉದ್ದೇಶ ಪೂರ್ವಕವಾಗಿ ಬುಡಕಟ್ಟು ಸಮುದಾಯವನ್ನು ಗುರಿಯಾಗಿಸಿ ಸುಳ್ಳು ಕಥೆ ಸೃಷ್ಟಿಸಿದ್ದಾರೆ. ತನಿಖಾಧಿಕಾರಿಗಳ ವಿರುದ್ಧ ಸುವೋಮೋಟೋ ಪ್ರಕರಣ ದಾಖಲಿಸಲು ನ್ಯಾಯಾಲಯ ನಿರ್ದೇಶನ ನೀಡಬೇಕು' ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸುರೇಶ್ ನಿರಪರಾಧಿ. ಈ ಪ್ರಕರಣದಲ್ಲಿ ಬಲಿಪಶುವಾಗಿದ್ದಾನೆ. ಆತನನ್ನು ಗೌರವಯುತವಾಗಿ ಬಿಡುಗಡೆ ಮಾಡಬೇಕು, ಜೊತೆಗೆ ಪರಿಹಾರ ನೀಡಬೇಕೆಂದು ಸರಕಾರಿ ಅಭಿಯೋಜಕರೇ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದು ವಕೀಲ ಪಾಂಡು ಪೂಜಾರಿ ಹೇಳಿದರು.
ಸುರೇಶ್ ಮಾತನಾಡಿ, ಪತ್ನಿ ಕೊಲೆ ಆರೋಪ ಪ್ರಕರಣದಲ್ಲಿ ನನಗೆ ನ್ಯಾಯ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಈ ಆರೋಪದಿಂದಾಗಿ ನನ್ನನ್ನು ಕೊಲೆಗಾರ ಮತ್ತು ನನ್ನ ಮಕ್ಕಳಿಗೆ ನಿಮ್ಮ ತಂದೆ ಕೊಲೆಗಾರ ಅಂತ ಜನ ಹೇಳುತ್ತಿದ್ದರು. ಯಾವ ಕುಟುಂಬಕ್ಕೂ ಈ ರೀತಿ ಆಗಬಾರದು. ಪತ್ನಿಯೇ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಈ ರೀತಿ ಮಾಡುವವರನ್ನು ನಾವೇಕೆ ಹತ್ತಿರ ಸೇರಿಸಿಕೊಳ್ಳಬೇಕು, ಆಕೆ ನನಗೆ ಬೇಡ ಎಂದು ಅವರು ತಿಳಿಸಿದರು.