ವಿಧಾನ ಪರಿಷತ್ ಚುನಾವಣೆ | 5 ಕ್ಷೇತ್ರಗಳ 76 ಅಭ್ಯರ್ಥಿಗಳ ನಾಮಪತ್ರ ಪುರಸ್ಕೃತ
‘ಸಕಾರಣವಿಲ್ಲದೆ ನಾಮಪತ್ರ ತಿರಸ್ಕಾರʼ ; ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ವಿರುದ್ಧ ಆರೋಪ
ಬೆಂಗಳೂರು : ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ವೇಳೆ ಸಕಾರಣವಿಲ್ಲದೆ ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ನಾಮಪತ್ರಗಳನ್ನು ತಿರಸ್ಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಾಮಪತ್ರದಲ್ಲಿನ ಕೆಲ ಅಂಶಗಳನ್ನು ಅನಗತ್ಯವಾಗಿ ಉಲ್ಲೇಖಿಸಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರ ನಾಮಪತ್ರಗಳನ್ನು ತಿರಸ್ಕರಿಸಿದ್ದಾರೆ. ನಮಗೆ ದಾಖಲಾತಿಗಳನ್ನೂ ತೋರಿಸುತ್ತಿಲ್ಲ ಎಂದು ನಾಮಪತ್ರ ತಿರಸ್ಕಾರಗೊಂಡ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬೆಂಗಳೂರಿನ ಶಾಂತಿನಗರದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು.
ವಿಧಾನ ಪರಿಷತ್ತಿನ ಈಶಾನ್ಯ ಪದವೀಧರರು, ಬೆಂಗಳೂರು ಪದವೀಧರರು, ಆಗ್ನೇಯ ಶಿಕ್ಷಕರು, ನೈಋತ್ಯ ಶಿಕ್ಷಕರು, ನೈಋತ್ಯ ಪದವೀಧರರು ಹಾಗೂ ದಕ್ಷಿಣ ಶಿಕ್ಷಕರು ಕ್ಷೇತ್ರಗಳಿಗೆ ಜೂ.3ರಂದು ಚುನಾವಣೆ ನಡೆಯಲಿದೆ. ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ನಾಲ್ಕು ಹಾಗೂ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ.
5 ಕ್ಷೇತ್ರಗಳ 76 ಅಭ್ಯರ್ಥಿಗಳ ನಾಮಪತ್ರ ಪುರಸ್ಕೃತವಾಗಿದೆ. ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ 25 ಪುರುಷ ಹಾಗೂ ಓರ್ವ ಮಹಿಳೆ ಸೇರಿ 26 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿದೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 16, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 9, ನೈಋತ್ಯ ಪದವೀಧರರ ಕ್ಷೇತ್ರದಲ್ಲಿ 12 ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿವೆ. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆಯನ್ನು ನಾಳೆಗೆ ಮುಂದೂಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.