150 ಕೋಟಿ ರೂ. ಅಕ್ರಮ ಆರೋಪವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು : ಅನ್ವರ್ ಮಾಣಿಪ್ಪಾಡಿ ಮಾಡಿರುವ 150 ಕೋಟಿ ರೂ. ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಕೂಡಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಿಬಿಐ ತನಿಖೆಗೆ ವಹಿಸಬೇಕು ಎಂದು ರವಿವಾರ ಇಲ್ಲಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನೆಡೆಸಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮಾತನಾಡಿ, ಪ್ರಸ್ತುತ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದ ಮುಖ್ಯಮಂತ್ರಿ ಆಗಿದ್ದ ಬಿ.ಎಸ್ ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ವಕ್ಫ್ ಅಕ್ರಮದ ಬಗ್ಗೆ ತನಿಖೆಯ ಮಾಹಿತಿಯನ್ನು ಬಹಿರಂಗಪಡಿಸದಂತೆ 150 ಕೋಟಿ ರೂ. ಆಮಿಷ ಒಡ್ಡಲಾಗಿದೆ. ಈ ರೀತಿ ನೇರ ಆರೋಪ ಬಂದಿರುವ ಹಿನ್ನೆಲೆಯಲ್ಲಿ ವಿಜಯೇಂದ್ರರನ್ನು ಕೂಡಲೇ ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೇಳಿದರು.
ಅನ್ವರ್ ಮಾಣಿಪ್ಪಾಡಿ ಅವರು ಬರೆದಿರುವ ಪತ್ರ ಇನ್ನೂ ಪ್ರಧಾನಿ ಮೋದಿಗೆ ತಲುಪಿಲ್ಲದಂತಿದೆ. ಒಂದು ವೇಳೆ ತಲುಪಿದ್ದರೆ ಈ ಭ್ರಷ್ಟಾಚಾರ ಪ್ರಕರಣವನ್ನು ಯಾಕೆ ಸಿಬಿಐ ತನಿಖೆಗೆ ವಹಿಸಿಲ್ಲ ಎಂಬುದನ್ನು ದೇಶದ ಜನತೆಗೆ ತಿಳಿಸಬೇಕಿದೆ. ಬಿಜೆಪಿ ಪಕ್ಷದ ವಕ್ತಾರರಾಗಿ ಹಾಗೂ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ವ್ಯಕ್ತಿ ಪತ್ರ ಬರೆದಿರುವುದು ಬಹಿರಂಗವಾಗಿದ್ದರೂ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನೆಡೆಸಲಾಗುತ್ತಿದೆ ಎಂದರು.
150 ಕೋಟಿ ರೂ. ಆರೋಪ ಮಾಡಿದರೂ ಸಿಬಿಐ, ಈಡಿ, ಆದಾಯ ತೆರಿಗೆ ಇಲಾಖೆಗಳು, ನಿದ್ರಿಸುತತ್ತಿದ್ದಂತಿದೆ. ಕೇಂದ್ರ ಸರಕಾರದ ಇಲಾಖೆಗಳು ವಿರೋಧ ಪಕ್ಷದ ನಾಯಕರುಗಳ ವಿರುದ್ಧ ಮಾತ್ರ ತನಿಖೆಗೆ ಮುಂದಾಗುತ್ತದೆ. ಭ್ರಷ್ಟ ಬಿಜೆಪಿ ಸರಕಾರದ ಮಂತ್ರಿಗಳ ವಿರುದ್ಧ ಹಾಗೂ ನಾಯಕರುಗಳ ವಿರುದ್ಧ ತನಿಖೆಗೆ ಮುಂದಾಗುವುದಿಲ್ಲ, ಇದಕ್ಕೆ ಬಿಜೆಪಿ ಮೂಲಕಾರಣಕರ್ತರು ಎಂಬುದು ಈಗ ತಿಳಿದಿದೆ ಎಂದು ಅವರು ಆರೋಪಿಸಿದರು.
ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಪ್ರಸ್ತುತ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಆನೆಗಳನ್ನು ಕೊಲ್ಲಲು ಅನುಮತಿಬೇಕು ಎಂದು ಕೇಳಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. ವನ್ಯಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೇಳುವ ಮಟ್ಟಕ್ಕೆ ಕ್ರೂರ ಮನಸ್ಥಿತಿಯ ವ್ಯಕ್ತಿಗಳು ಬಂದಿರುವುದು ವನ್ಯಜೀವಿಗಳ ಸಂರಕ್ಷಣೆಗೆ ವಿರುದ್ಧವಾಗಿದೆ ಬಿಜೆಪಿ ಶಾಸಕರ ಕ್ರೂರ ಮನಸ್ಥಿತಿಯನ್ನು ಬಹಿರಂಗಗೊಳಿಸಿದೆ ಎಂದು ಹೇಳಿದರು.
ವನ್ಯಜೀವಿಗಳನ್ನು ಕೊಲ್ಲಬೇಕೆಂದು ಬಹಿರಂಗವಾಗಿ ಮನವಿ ಮಾಡಿರುವ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕೂಡಲೇ ಅರಣ್ಯ ಇಲಾಖೆಯು ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಲೇಬೇಕು ಎಂದು ಎಸ್ ಮನೋಹರ್ ಒತ್ತಾಯಿಸಿದರು.
ಇದೇ ವೇಳೆ ಬಿಜೆಪಿ ಶಾಸಕ ಹರೀಶ್ ಪೂಂಜಾರ ಪ್ರತಿಕೃತಿಯನ್ನು ಸುಡಲಾಯಿತು. ಪ್ರಚಾರ ಸಮಿತಿಯ ಮುಖಂಡರಾದ ಎ.ಆನಂದ್, ಓಬಳೇಶ್, ಪುಟ್ಟರಾಜು, ಚಂದ್ರಶೇಖರ್, ನವೀನ್ ಸುಂಕದಕಟ್ಟೆ, ಕುಶಾಲ್ ಹಾರುವೇಗೌಡ, ಉಮೇಶ್, ರವಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಇದ್ದರು.