20 ಸಾವಿರ ರೂ.ಗಳಲ್ಲಿ 18 ದಿನಗಳ ಉತ್ತರ ಭಾರತ ಪ್ರವಾಸ : ಎಂ.ಬಿ.ಪಾಟೀಲ್

ಬೆಂಗಳೂರು : ಮಧ್ಯಮ ವರ್ಗದ ಜನರು, ವಿದ್ಯಾರ್ಥಿಗಳಿಗೆ ಮತ್ತು ಸರಕಾರಿ ನೌಕರರು ಸೇರಿದಂತೆ ಎಲ್ಲ ವರ್ಗಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಂಎಸ್‍ಐಎಲ್ ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆಯು ಸುಮಾರು 20 ಸಾವಿರ ರೂ. ವೆಚ್ಚದಲ್ಲಿ 15ರಿಂದ 18ದಿನಗಳ ಉತ್ತರ ಭಾರತ ಪ್ರವಾಸ ಪ್ಯಾಕೇಜ್‍ನ್ನು ಪರಿಚಯಿಸಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದ ಖನಿಜ ಭವನದಲ್ಲಿ ಎಂಎಸ್‍ಐಎಲ್ ಟೂರ್ ಪ್ಯಾಕೇಜ್ ಅನಾವರಣಗೊಳಿಸಿ ಮಾತನಾಡಿದ ಅವರು, ಸರಕಾರಿ ಸ್ವಾಮ್ಯದ ಸಂಸ್ಥೆಯು ಸಾರ್ವಜನಿಕರಿಗೆ ವಿಶಿಷ್ಟ ಪ್ಯಾಕೇಜ್ ಪರಿಚಯಿಸಿದ್ದು, ಕಾಶಿ, ಅಯೋಧ್ಯೆ, ಪುರಿ, ಆದಿ ಕೈಲಾಸ್ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳ ಪ್ರವಾಸ ಪ್ಯಾಕೇಜ್ ಇದಾಗಿದೆ. ಜೊತೆಗೆ ದುಬೈ, ಸಿಂಗಾಪುರ್, ವಿಯಟ್ನಾಂ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್ ಮತ್ತು ಯೂರೋಪಿನ ಹಲವು ದೇಶಗಳಿಗೂ ಎಂಎಸ್ ಐಎಲ್ ಟೂರ್ ಪ್ಯಾಕೇಜುಗಳನ್ನು ರೂಪಿಸಿದ್ದು, ಪ್ರವಾಸಗಳಿಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು.
ಈ ಪ್ಯಾಕೇಜ್‍ಗಳಲ್ಲಿ ಸುರಕ್ಷತೆ, ಶುಚಿರುಚಿಯಾದ ಆಹಾರ, ಮನೆ ಬಾಗಿಲಿನಿಂದಲೇ ಕರೆದುಕೊಂಡು ಹೋಗಿ ಮರಳಿ ಅಲ್ಲಿಗೇ ಬಿಡುವುದು, ಸಹಾಯಕರ ನೆರವು, ಮಾಸಿಕ ಕಂತುಗಳಲ್ಲಿ ಹಣ ಪಾವತಿ, ಲಕ್ಕಿ ಡ್ರಾ, ಕೈಗೆಟುಕುವ ವೆಚ್ಚದಲ್ಲಿ ಉತ್ತರ ಭಾರತ ಪ್ರವಾಸ ಮುಂತಾದ ಸೌಲಭ್ಯಗಳಿವೆ. ಗುಂಪು ಪ್ರವಾಸ ಮಾಡಲು ಬಯಸುವವರಿಗೆ ಪ್ರತಿ ಬ್ಯಾಚ್‍ನಲ್ಲಿ ಗರಿಷ್ಠ 100 ಮಂದಿಗೆ ಅವಕಾಶ ಇರಲಿದೆ ಎಂದರು.
ಸರಕಾರಿ ಉದ್ಯೋಗಿಗಳು ಮೊದಲು ಶೇ.50ರಷ್ಟು ಹಣ ಪಾವತಿಸಿ, ಪ್ರವಾಸ ಕೈಗೊಳ್ಳಬಹುದು. ಪ್ರವಾಸದ ನಂತರ ಉಳಿದ ಶೇ.50ರಷ್ಟು ಹಣವನ್ನು ಮಾಸಿಕ ಕಂತುಗಳಲ್ಲಿ ಪಾವತಿಸಬಹುದು. ಅಲ್ಲದೇ ಲಕ್ಕಿ ಡ್ರಾ ವಿಜೇತರಾಗುವ ಅದೃಷ್ಟಶಾಲಿಗಳು ಡ್ರಾ ನಂತರದ ಹಣವನ್ನು ಪಾವತಿಸಬೇಕಾಗಿಲ್ಲ. ಪ್ರವಾಸದ ಉದ್ದಕ್ಕೂ ಎಂಎಸ್‍ಐಎಲ್ ಟೂರ್ ಮ್ಯಾನೇಜರ್ ಅಥವಾ ಸಹಾಯಕ ಸಿಬ್ಬಂದಿ ಜೊತೆಗಿರಲಿದ್ದಾರೆ ಎಂದು ಹೇಳಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ (ಸ್ಟಡಿ-ಕಂ-ಪ್ಲೆಷರ್ ಟೂರ್), ಇಕೋ ಟೂರಿಸಂ ಮತ್ತು ಕರಾವಳಿ ಪ್ರದೇಶಗಳ ವೀಕ್ಷಣೆ ಇರುವ ಕೋಸ್ಟಲ್ ಟೂರಿಸಂ ಮುಂತಾದ ಪ್ಯಾಕೇಜ್‍ಗಳನ್ನು ರೂಪಿಸಲು ಎಂಎಸ್ ಐಎಲ್ ಚಿಂತನೆ ನಡೆಸಿದೆ. ಪ್ರವಾಸಿಗರ ಅನುಕೂಲಕ್ಕೆ ಎಂಎಸ್‍ಐಎಲ್ 24*7 ಸಹಾಯವಾಣಿ ಮತ್ತು ವಾಟ್ಸ್‍ಆಪ್ ಸೌಲಭ್ಯವನ್ನೂ (080-45888882, 9353645921) ಹೊಂದಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಎಂಎಸ್‍ಐಎಲ್ ಸಂಸ್ಥೆಯ ಡೈರಿ, ಕ್ಯಾಲೆಂಡರ್ ಮತ್ತು ಬಾಂಡ್ ಜೆರಾಕ್ಸ್ ಕಾಗದವನ್ನು À ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಂಎಸ್‍ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವಾಣಿಜ್ಯ ಇಲಾಖೆ ಆಯುಕ್ತ ಗುಂಜನ್ ಕೃಷ್ಣ, ನಿರ್ದೇಶಕ ಚಂದ್ರಪ್ಪ, ಪ್ರವಾಸ ವಿಭಾಗದ ಮುಖ್ಯಸ್ಥ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಎಂಎಸ್‍ಐಎಲ್ ಚಿಟ್ ಫಂಡ್ ಬಲವರ್ಧನೆ: ಸರಕಾರವು ಎಂಎಸ್‍ಐಎಲ್, ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್, ಎನ್‍ಜಿಇಎಫ್ ಮುಂತಾದವುಗಳನ್ನು ಲಾಭದಾಯಕವನ್ನಾಗಿ ಮಾಡುತ್ತಿದೆ. ಎಂಎಸ್‍ಐಎಲ್ ಈಗ ವಾರ್ಷಿಕ 250 ಕೋಟಿ ರೂ.ಗಳ ಚಿಟ್ ಫಂಡ್ ನಡೆಸುತ್ತಿದೆ. ಇದನ್ನು ಮುಂದಿನ 5 ವರ್ಷಗಳಲ್ಲಿ ವರ್ಷಕ್ಕೆ 5ಸಾವಿರ ಕೋಟಿ ರೂ.ಗೆ ಕೊಂಡೊಯ್ಯುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಎಂಎಸ್‍ಐಎಲ್ ಸಂಸ್ಥೆಯ 200 ಮದ್ಯದ ಅಂಗಡಿಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಯಡಿ 63 ಮಳಿಗೆಗಳ ಕೆಲಸ ಮುಗಿದಿದ್ದು, ಎಲ್ಲ ಕಡೆಯೂ ವಹಿವಾಟು ಮೂರು ಪಟ್ಟು ಹೆಚ್ಚಾಗಿದೆ. ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಮೂಲಕ ಗೃಹ ಬಳಕೆಯ ಪೇಂಟ್ ತಯಾರಿಕೆಗೂ ಗಮನ ಹರಿಸಲಾಗಿದೆ. ಹುಬ್ಬಳ್ಳಿ ಎನ್‍ಜಿಇಎಫ್ ದಿಲ್ಲಿಯ ನೂತನ ಸಂಸತ್ ಭವನ ಮತ್ತು ರೈಲ್ವೆ ಇಲಾಖೆಗೆ ತನ್ನ ಟ್ರಾನ್ಸ್-ಫಾರ್ಮರ್‍ಗಳನ್ನು ಪೂರೈಸುತ್ತಿದೆ. ಬಿಎಚ್‍ಇಎಲ್ ಜತೆ ಒಪ್ಪಂದ ಮಾಡಿಕೊಂಡು ಅದನ್ನು ಪುನರ್‍ಜೀವನಗೊಳಿಸುವ ಉದ್ದೇಶವಿದೆ.
-ಎಂ.ಬಿ.ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ