ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50ಕೋಟಿ ರೂ.ಆಮಿಷ : ಸಿಎಂ ಸಿದ್ದರಾಮಯ್ಯ ಆರೋಪ
Photo: X/@siddaramaiah
ಬೆಂಗಳೂರು: ‘ಆಪರೇಷನ್ ಕಮಲದ ಯತ್ನವನ್ನು ಬಿಜೆಪಿಯವರು ಈಗಲೂ ಮುಂದುವರೆಸಿದ್ದು, ನಮ್ಮ ಪಕ್ಷದ ಶಾಸಕರಿಗೆ 50 ಕೋಟಿ ರೂ.ಗಳ ಆಮಿಷ ಒಡ್ಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಬ್ಯಾಂಕ್ ಖಾತೆ ಜಪ್ತಿ ಮಾಡುತ್ತಿದ್ದು, ಬಿಜೆಪಿಯವರ ಖಾತೆಯನ್ನೇಕೆ ಜಪ್ತಿ ಮಾಡಿಲ್ಲ. ಅಕ್ರಮವಾಗಿ ಸಂಪತ್ತು ಗಳಿಸಿರುವವರು ಬಿಜೆಪಿಯಲ್ಲಿಲ್ಲವೇ?, ಆಪರೇಷನ್ ಕಮಲವನ್ನು ಮೊದಲು ಆರಂಭಿಸಿದ್ದು ಬಿಜೆಪಿ. ಆಪರೇಷನ್ ಕಮಲದ ಯತ್ನವನ್ನು ಇಂದೂ ಕರ್ನಾಟಕದಲ್ಲಿ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಯವರು ನಮ್ಮ ಶಾಸಕರಿಗೆ 50 ಕೋಟಿ ರೂ. ಕೊಡುತ್ತೇವೆ ರಾಜೀನಾಮೆ ಕೊಡಿ, ಚುನಾವಣೆ ಖರ್ಚನ್ನೂ ನಾವೇ ನೋಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ. ಜನರೊಂದಿಗೆ ಭಾವನಾತ್ಮಕವಾಗಿ ಮಾತನಾಡಿ ದಾರಿ ತಪ್ಪಿಸುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ ಮತದಾರರು ಅವರನ್ನು ಸುಮ್ಮನೆ ಬಿಡುವುದಿಲ್ಲ. ತಕ್ಕ ಪಾಠ ಕಲಿಸುತ್ತಾರೆ. ಈ ಬಾರಿ ಬಿಜೆಪಿಗೆ ಜನರು ಪಾಠ ಕಲಿಸುತ್ತಾರೆ ಎಂಬ ನಂಬಿಕೆ ಇದೆ. ಕರ್ನಾಟಕದಲ್ಲಿ ನಾವು ಕನಿಷ್ಠ 20ಸ್ಥಾನ ಗೆದ್ದೆ ಗೆಲ್ಲುತ್ತೇವೆ. ಚುನಾವಣಾ ಆಯೋಗ ಕೂಡಲೇ ಮಧ್ಯಪ್ರವೇಶಿಸಿ ಜಪ್ತಿಯಾದ ಖಾತೆಯನ್ನು ರಿಸ್ಟೋರ್ ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಯಾವುದೇ ಚುನಾವಣೆ ಮುಕ್ತ ಹಾಗೂ ಪಾರದರ್ಶಕವಾಗಿರಬೇಕು. ಚುನಾವಣೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ರಾಜಕೀಯ ಪಕ್ಷಗಳು ಜನರಿಂದ ಹಣ ಪಡೆಯುತ್ತವೆ. ಆ ಹಣ ರಾಜಕೀಯ ಪಕ್ಷಗಳ ಹಣ ಅಲ್ಲ. ಅದು ಜನರ ಹಣ. ಚುನಾವಣೆ ಸನಿಹದಲ್ಲಿ ಕಾಂಗ್ರೆಸ್ ಪಕ್ಷದ ಖಾತೆಯನ್ನು ಜಪ್ತಿ ಮಾಡಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.