50 ಸಾವಿರ ಕೋಟಿ ರೂ.ಹೂಡಿಕೆ, 58ಸಾವಿರ ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು: ರಾಜ್ಯದಲ್ಲಿ 2023-24ನೆ ಸಾಲಿನಲ್ಲಿ ಒಟ್ಟು 241 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 50,025ಕೋಟಿ ರೂ.ಬಂಡವಾಳ ಹರಿದು ಬಂದಿದೆ. ಇವುಗಳ ಮೂಲಕ 58,051 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ನಗರದ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಏಕಗವಾಕ್ಷಿ ಅನುಮೋದನಾ ಸಮಿತಿಯು ಹಸಿರು ನಿಶಾನೆ ನೀಡಿರುವ ಈ ಯೋಜನೆಗಳ ಪೈಕಿ 24 ಯೋಜನೆಗಳು ಮಾತ್ರ ಬೆಂಗಳೂರು ಜಿಲ್ಲೆಯಲ್ಲಿದ್ದು, ಉಳಿದ 217 ಯೋಜನೆಗಳು ಹೊರಗಿನ ಜಿಲ್ಲೆಗಳಲ್ಲಿವೆ ಎಂದರು.
ಬೆಂಗಳೂರು ಜಿಲ್ಲೆಯಲ್ಲಿ 21,537 ಕೋಟಿ ರೂ. ಹೂಡಿಕೆ ಆಗುತ್ತಿದ್ದು, 19,243 ಉದ್ಯೋಗ ಸೃಷ್ಟಿ ಆಗಲಿವೆ. ಉಳಿದ ಜಿಲ್ಲೆಗಳಲ್ಲಿ 28,488 ಕೋಟಿ ರೂ. ಬಂಡವಾಳ ಹೂಡಿಕೆ ಆಗುತ್ತಿದ್ದು, 38,808 ಮಂದಿಗೆ ಉದ್ಯೋಗ ಸಿಗಲಿವೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಬೆಂಗಳೂರನ್ನು ಹೊರತು ಪಡಿಸಿ ರಾಜ್ಯದ ಮಿಕ್ಕ ಭಾಗಗಳಲ್ಲಿ ಉದ್ದಿಮೆಗಳು ನೆಲೆಯೂರಿ, ಉದ್ಯೋಗ ಸೃಷ್ಟಿಯಾಗುವಂತೆ ಮಾಡಲು ಸರಕಾರವು ಬಿಯಾಂಡ್ ಬೆಂಗಳೂರು ಉಪಕ್ರಮವನ್ನು ಆರಂಭಿಸಿದ್ದು, ವಿವಿಧೆಡೆಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಕೈಗಾರಿಕಾ ನೀತಿಯಲ್ಲಿ ಹಲವು ಪ್ರೋತ್ಸಾಹಧನ ಮತ್ತು ವಿನಾಯಿತಿಗಳನ್ನು ನೀಡಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.