ಬೆಂಗಳೂರು| ಪಿಯು ಫಲಿತಾಂಶದ ಕುರಿತು ಗಲಾಟೆ: ಪರಸ್ಪರ ಚಾಕು ಇರಿತಕ್ಕೆ ಮಗಳು ಮೃತ್ಯು, ತಾಯಿ ಸ್ಥಿತಿ ಗಂಭೀರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪಿಯುಸಿ ಫಲಿತಾಂಶದ ಕುರಿತು ಆರಂಭವಾದ ಜಗಳದಲ್ಲಿ ತಾಯಿಯೇ ತನ್ನ ಮಗಳನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಸ್ತ್ರೀನಗರದಲ್ಲಿ ವರದಿಯಾಗಿದೆ.
ಸಾಹಿತಿ(19) ತನ್ನ ತಾಯಿಯಿಂದಲೇ ಹತ್ಯೆಯಾಗಿರುವ ಯುವತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತಾಯಿ ಪದ್ಮಜಾ(60) ಸಹ ಚಾಕು ಇರಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಹತ್ಯೆಯಾದ ಸಾಹಿತಿ ಹಾಗೂ ಆಕೆಯ ತಾಯಿ ಪದ್ಮಜಾ ಮಾತ್ರ ವಾಸವಿದ್ದರು. ಇತ್ತೀಚೆಗೆ ಪ್ರಕಟವಾದ ಮಗಳ ಪಿಯುಸಿ ಫಲಿತಾಂಶ ತಾಯಿ ಪದ್ಮಜಾಗೆ ತೃಪ್ತಿ ತಂದಿರಲಿಲ್ಲ. ಇನ್ನು ಮಗಳು, ಎರಡು ವಿಷಯಗಳ ಪರೀಕ್ಷೆಗೆ ಹಾಜರಾಗಿರಲಿಲ್ಲ. ಇದರಿಂದ ಫೇಲ್ ಆಗಿದ್ದರು. ಇದೇ ವಿಚಾರವಾಗಿ ತಾಯಿ-ಮಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಎ.29ರ ಸೋಮವಾರ ಸಂಜೆ 7ಗಂಟೆ ಸುಮಾರಿಗೆ ಇದೇ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದಾಗ ಇಬ್ಬರೂ ಸಹ ಪರಸ್ಪರ ಚಾಕು ಇರಿದುಕೊಂಡಿದ್ದಾರೆ.
ಇರಿತದಿಂದ ತೀವ್ರ ರಕ್ತಸ್ರಾವ ಉಂಟಾಗಿ ಮನೆಯಲ್ಲಿಯೇ ಮಗಳು ಸಾಹಿತಿ ಮೃತಪಟ್ಟಿದ್ದಾಳೆ. ಮಗಳಿಂದ ದೇಹದ ನಾಲ್ಕೈದು ಕಡೆ ಇರಿತಕ್ಕೊಳಗಾಗಿರುವ ಪದ್ಮಜಾ ಸಹ ಗಂಭೀರ ಗಾಯಗೊಂಡಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿರುವುದಾಗಿ ದಕ್ಷಿಣ ವಿಭಾಗದ ಡಿಸಿಪಿ ಲೊಕೇಶ್ ಭರಮಪ್ಪ ಜಗಲ್ಸಾರ್ ಮಾಹಿತಿ ನೀಡಿದ್ದಾರೆ.