87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಮೂರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ : ದಿನೇಶ್ ಗೂಳಿಗೌಡ
ದಿನೇಶ್ ಗೂಳಿಗೌಡ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಡಿ.20ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ಆಯೋಜಿಸುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಲವು ವಿಶೇಷತೆ, ವಿಭಿನ್ನತೆ, ಹೊಸತನಗಳಿಗೆ ವೇದಿಕೆಯಾಗಲಿದೆ. ಸಮ್ಮೇಳನದ ಮೂರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮ್ಮೇಳನದ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ರಾಜ್ಯಾದ್ಯಂತ 620 ಅರ್ಜಿಗಳು ಬಂದಿವೆ. ಅದರಲ್ಲಿ 201 ತಂಡಗಳು ಆಯ್ಕೆಯಾಗಿವೆ. ಮುಖ್ಯ ವೇದಿಕೆ ಹಾಗೂ ಸಮಾನಂತರ ವೇದಿಕೆ ಸೇರಿದಂತೆ 3 ವೇದಿಕೆಗಳಲ್ಲಿ ಕಾರ್ಯಕ್ರಮಗಳು ಬೆಳಿಗ್ಗೆ ಎಂಟರಿಂದ ಹತ್ತು ಗಂಟೆವರೆಗೆ ಸಂಜೆ 7ರಿಂದ 10.30 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದಿದ್ದಾರೆ.
ಕನ್ನಡ ಪ್ರೇಮಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ನುಡಿಹಬ್ಬದ ಸವಿಯ ಜೊತೆಗೆ ಕರುನಾಡು ಮತ್ತು ಹೊರನಾಡಿನ ಕಲೆ, ಕಲಾಪ್ರಕಾರಗಳನ್ನು ಪ್ರದರ್ಶಿಸಲು ಸಾಂಸ್ಕೃತಿಕ ಸಮಿತಿ ವೇದಿಕೆ ಸಿದ್ಧಪಡಿಸಿದೆ. ನಾನಾ ಬಗೆಯ ಕಲೆ, ಕಲಾಪ್ರಕಾರಗಳನ್ನು ನಾಡಿನ ಜನತೆಗೆ ಪ್ರದರ್ಶಿಸಲು ರಾಜ್ಯ ಹೊರರಾಜ್ಯಗಳಿಂದ ಕಲಾವಿದರು, ಕಲಾ ತಂಡಗಳು ಮಂಡ್ಯಕ್ಕೆ ಆಗಮಿಸಲಿವೆ ಎಂದು ಹೇಳಿದ್ದಾರೆ.
ಗೌರವಧನದಲ್ಲಿ ತಾರತಮ್ಯ ಆಗುವುದಕ್ಕೆ ಆಸ್ಪದ ನೀಡದೇ ಎಲ್ಲ ಕಲಾವಿದರನ್ನು ಸಮಾನ ರೀತಿಯಲ್ಲಿ ಗೌರವಿಸಲಾಗುತ್ತಿದೆ. ಸ್ಥಳೀಯ ಕಲಾ ತಂಡಗಳ ಗೌರವಧನವನ್ನು ಪರಿಷ್ಕರಣೆ ಮಾಡಲಾಗಿದೆ. ಇದೆ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಗೌರವಧನವನ್ನು ಕಲಾವಿದರಿಗೆ ನೀಡಲಾಗುತ್ತಿದೆ. ಕನಿಷ್ಠ 20 ಸಾವಿರ ರೂ. ಗರಿಷ್ಠ 40 ಸಾವಿರ ರೂ. ಗೌರವಧನವನ್ನು ನೀಡಲಾಗುವುದು. ಕಲಾಪ್ರಕಾರಗಳು ನೀಡುವ ಕಲಾ ಪ್ರದರ್ಶನದ ಮತ್ತು ಅವರು ಬರುವ ಸ್ಥಳದ ದೂರದ ಮೇಲೆ ಗೌರವಧನ ನೀಡಲಾಗುವುದು ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಕಲಾಪ್ರಕಾರದಲ್ಲಿ ಜಿಲ್ಲೆಯ ಮಹಿಳೆಯರು, ವಿಕಲಚೇತನರು, ಮಕ್ಕಳು, ಹಿರಿಯರು ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಕಲಾವಿದರಿಗೆ ನೀಡಲಾಗುವ ಗೌರವಧನದಲ್ಲಿ ಜಿ.ಎಸ್ಟಿ ಹಾಗೂ ಸರ್ವಿಸ್ ಟ್ಯಾಕ್ಸ್ ಸೇರಿರುವುದಿಲ್ಲ. ಜಿಎಸ್ಟಿ ಹಾಗೂ ಸರ್ವಿಸ್ ಟ್ಯಾಕ್ಸ್ ಅನ್ನು ಕನ್ನಡ ಸಂಸ್ಕೃತಿ ಇಲಾಖೆಯೇ ಭರಿಸಲಿದೆ. ಮೈಸೂರು ವಿಭಾಗಕ್ಕೆ ಶೇ.50ರಷ್ಟು ಹಾಗೂ ಇತರ ಜಿಲ್ಲೆಗೆ ಶೇ.50ರಷ್ಟು ಕಾರ್ಯಕ್ರಮ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೇರೆ ರಾಜ್ಯದ 5 ಕಲಾ ಪ್ರಕಾರಗಳು, ಹೊರ ಜಿಲ್ಲೆಯಿಂದ 33 ಹಾಗೂ ಮಂಡ್ಯ ಜಿಲ್ಲೆಯಿಂದ 109 ಕಲಾ ತಂಡಗಳು ಭಾಗಿಯಾಗಲಿವೆ. ಮೂಡಲಪಾಯ, ಯಕ್ಷಗಾನ, ಬುಡಕಟ್ಟು ಸಮುದಾಯದ ನೃತ್ಯಗಳು, ನಾಡಿನ ಹೆಸರಾಂತ ಜನಪದ ಕಲಾ ಪ್ರದರ್ಶನಗಳು, ಸುಗಮ ಸಂಗೀತ ಇನ್ನಿತರ ಕಲಾ ಪ್ರದರ್ಶನಗಳು ನಡೆಯಲಿದೆ. ಮಂಡ್ಯ ಜಿಲ್ಲೆ ಹಾಗೂ ಗಡಿ ಜಿಲ್ಲೆಗಳಿಗೆ ಶೇ.50 ಇತರೆ ಜಿಲ್ಲೆಯ ಕಲಾವಿದರಿಗೆ ಶೇ. 50ರಷ್ಟು ಪ್ರಾಧಾನ್ಯತೆ ನೀಡಲಾಗಿದೆ ಎಂದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಡಿ.22 ರಂದು ಸಂಜೆ 6 ಗಂಟೆಗೆ ಪೆÇಲೀಸ್ ಬ್ಯಾಂಡ್ ಮೇಳೈಸಲಿದೆ. ಮೈಸೂರು ದಸರಾದಲ್ಲಿ ಪೊಲೀಸ್ ಬ್ಯಾಂಡ್ ನೋಡಲು ಜನರು ಖಾತರದಿಂದ ಕಾಯುತ್ತಾರೆ ಈ ಅವಕಾಶವನ್ನು ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯ ಮೇರೆಗೆ ಸಮ್ಮೇಳನ ಅಂಗವಾಗಿ ಪೊಲೀಸ್ ಬ್ಯಾಂಡ್ ನಡೆಯಲಿದೆ. ಪೊಲೀಸ್ ಬ್ಯಾಂಡ್ ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷತೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.