ಕಲಿಸುತ್ತಲೇ ಕಲಿಯುವನು ನಿಜವಾದ ಅಧ್ಯಾಪಕ : ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು: ‘ಅಧ್ಯಾಪಕರಿಗೆ ಅಧ್ಯಯನ ಮತ್ತು ಅಧ್ಯಾಪನ ಎರಡು ಮುಖ್ಯ. ಕಲಿಸುತ್ತಲೇ ಕಲಿಯುವನು ನಿಜವಾದ ಅಧ್ಯಾಪಕ’ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ನುಡಿದಿದ್ದಾರೆ.
ಬುಧವಾರ ನಗರದ ಬೆಂಗಳೂರು ವಿವಿಯ ವೆಂಕಟಗಿರಿಗೌಡ ಸಭಾಂಗಣದಲ್ಲಿ ಪ್ರೊ.ಮುನಿಯಪ್ಪ ಶಿಷ್ಯ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಮುನಿಯಪ್ಪರವರು ಬರೆದಿರುವ ‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ರಾಜಕೀಯ ಪ್ರಜ್ಞೆ’ ಮತ್ತು ‘ಮಾಸ್ತಿ ಕನ್ನಡದ ಆಸ್ತಿ’(ಸಾಹಿತ್ಯ ಅವಲೋಕನ) ಕೃತಿಗಳ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಇದಾಗಿದೆ. ಸುಳ್ಳಿಗೆ ಸಾಕ್ಷಿ ಬೇಕಾಗಿಲ್ಲ’ ಎಂದು ಹೇಳಿದರು.
‘ಅಧ್ಯಾಪಕರಿಗೆ ಅಧ್ಯಯನ ಮತ್ತು ಅಧ್ಯಾಪನ ಎರಡು ಇರಬೇಕಿದೆ. ಅಧ್ಯಯನ ಇಲ್ಲದ ಮೇಷ್ಟ್ರು ಕೇವಲ ಕಂಠಪಾಠದಲ್ಲಿ ಪ್ರವೀಣನಾಗುತ್ತಾನೆ. ಒಂದು ವರ್ಷ ಮಾಡಿದ ಪಾಠವನ್ನು ನಿವೃತ್ತಿ ಆಗುವವರೆಗೂ ಹೇಳಿದ್ದನ್ನೇ ಹೇಳುತ್ತಾ, ತಾವು ಮೇಷ್ಟ್ರು ಅನ್ನುವುದನ್ನೆ ಮರೆತಿರುತ್ತಾರೆ. ಅಧ್ಯಾಪಕರಿಗೆ ಅಧ್ಯಯನ ಮತ್ತು ಅಧ್ಯಾಪನ ಎರಡು ಒಟ್ಟೊಟ್ಟಿಗೆ ಇರಬೇಕಾದ ಅವಶ್ಯಕತೆ ಇದೆ. ಮುನಿಯಪ್ಪನವರ ಈ ಕೃತಿಗಳಲ್ಲಿ ನಾವು ಅಧ್ಯಯನ ಮತ್ತು ಅಧ್ಯಾಪನ ಎರಡನ್ನು ಒಟ್ಟಾಗಿ ನೋಡಬಹುದು ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.
‘ಬಹಳಷ್ಟು ಅಧ್ಯಾಪಕರು ಪಿಎಚ್‍ಡಿ ಮಾಡುವ ಮೊದಲು ಏನು ಮಾಡಿದ್ದಾರೆಂದು ಗೊತ್ತಿರುವುದಿಲ್ಲ. ಪಿಎಚ್‍ಡಿ ಮುಗಿದ ನಂತರ ಏನು ಮಾಡ್ತಾರೆನ್ನುವುದು ಅರಿವಿರುವುದಿಲ್ಲ. ಪಿಎಚ್‍ಡಿ ಕೇವಲ ಅನಿವಾರ್ಯವಾದ ಅಧ್ಯಯನ. ಯಾವುದೇ ಅಧ್ಯಾಪಕನ ಕೇಂದ್ರ ಪ್ರಜ್ಞೆಯ ಅಧ್ಯಯನ ಆಗಿರಬೇಕು. ಆರ್.ವಿ.ಭಂಡಾರಿ ಪ್ರಾಥಮಿಕ ಶಾಲೆಯ ಮೇಷ್ಟ್ರು ಇಳಿವಯಸ್ಸಿನಲ್ಲಿಯೇ ಪಿಎಚ್‍ಡಿ ಮಾಡಿದವರು. ಇವರು ಪಿಎಚ್‍ಡಿ ಮಾಡಿದ್ದು ಒಂದು ಅಧ್ಯಯನಕ್ಕಾಗಿ ಮಾತ್ರ. ಉದ್ಯೋಗಕ್ಕಾಗಿಯೋ, ಭಡ್ತಿಗಾಗಿಯೋ ಅಪೇಕ್ಷಿಸಿ ಅವರು ಮಾಡಿರಲಿಲ್ಲ. ಹಾಗಾಗಿ ಅಧ್ಯಾಪಕರಿಗೆ ಅಧ್ಯಯನ ಶೀಲ ಮತ್ತು ಅಧ್ಯಾಪನ ಮುಖ್ಯವಾಗಿರುತ್ತದೆ ಎಂದು ಅವರು ವಿವರಿಸಿದರು.
ಕಲಿಸುತ್ತಲೇ ಕಲಿಯುವನು ನಿಜವಾದ ಅಧ್ಯಾಪಕ: ವಿದ್ಯಾರ್ಥಿಗಳಿಗೆ ಕಲಿಸುತ್ತಲೇ, ಅಧ್ಯಾಪಕರು ವಿದ್ಯಾರ್ಥಿಗಳಿಂದ ಕಲಿಯುತ್ತಾ ಸಾಗಬೇಕು. ವಿದ್ಯಾರ್ಥಿಗಳಿಗೆ ಕಲಿಸುತ್ತಲೇ ಕಲಿತಿರುವುದನ್ನು ಮರು ಭೇಟಿ ಆಗುವ ಸಂದರ್ಭಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು. ಹಾಗಾಗಿಯೇ ಮರು ವ್ಯಾಖ್ಯಾನಗಳು ನಡೀತಾ ಇರುತ್ತವೆ.
ಕಾರಂತರು ಮತ್ತು ಮಾಸ್ತಿ ಅವರ ಬಗ್ಗೆ ಅನೇಕ ಕೃತಿಗಳು ಈಗಾಗಲೇ ಬಂದಿವೆ. ಆದರೂ ಇನ್ನು ಏಕೆ ಹೆಚ್ಚು ಬರಬೇಕೆಂದರೆ, ನಾವು ಮತ್ತೆ ಮತ್ತೆ ಅವರ ಬಗೆಗೆ ಬಂದಂತಹ ವಿಮರ್ಶೆಗಳನ್ನು ಅವರ ಸೃಜನಶೀಲ ಕೃತಿಗಳ ಮರು ಭೇಟಿ, ಮರುವ್ಯಾಖ್ಯಾನ ಮಾಡುವುದು ಇದ್ದೇ ಇರುತ್ತೆ. ವ್ಯಾಖ್ಯಾನ ಮತ್ತು ವ್ಯಾಖ್ಯಾನದ ಪ್ರಕ್ರಿಯೆಯು ಯಾವತ್ತೂ ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವ ಕ್ರಿಯಾಶೀಲತೆಯಾಗಿರುತ್ತದೆ ಎಂದು ಅವರು ತಿಳಿಸಿದರು.
ರಾಜಕೀಯ ಪ್ರಜ್ಞೆಯ ಕುರಿತು ಮಾತನಾಡಿದ ಅವರು, ‘ಎಲ್ಲಿ ಪ್ರಜಾಪ್ರಭುತ್ವ ಪ್ರಜ್ಞೆ ಇರುತ್ತದೊ, ಅಲ್ಲಿ ರಾಜಕೀಯ ಪ್ರಜ್ಞೆಯ ಮೂಲ ಇರುತ್ತದೆ. ರಾಜಕೀಯ ಮೂಲ ಸೆಲೆ ಮತ್ತು ಅದರ ಮೂಲ ನೆಲೆ ಇರುವುದು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ. ರಾಜಕೀಯ ಪ್ರಜ್ಞೆ ರಾಜಕೀಯ ಪಕ್ಷದ ಪ್ರಜ್ಞೆ ಆಗಬೇಕಿಲ್ಲ. ಪ್ರಜಾಪ್ರಭುತ್ವ ಪ್ರಜ್ಞೆಯಿಂದ ಪ್ರೇರಿತವಾಗಿರುವ ನಮ್ಮ ನಾಡಿನಲ್ಲಿ ನಡೆಯುತ್ತಿರುವಂತಹ ವಿದ್ಯಮಾನಗಳನ್ನು ವಿಶ್ಲೇಷಿಸುವಂತಹ ತಾತ್ವಿಕ ನೆಲೆಯೇ ನಿಜವಾದ ರಾಜಕೀಯ ಪ್ರಜ್ಞೆ ಆಗಿರುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ನೆಲೆ ಯಾವುದು?: ಪ್ರಜಾಪ್ರಭುತ್ವದಲ್ಲಿ ಕಣ್ಣು, ಕಿವಿ, ನಾಲಿಗೆ, ಮೂರು ಜಾಗೃತವಾಗಿರುಬೇಕು. ಅವು ಸಮನ್ವಯವಾಗಿರಬೇಕು. ಕಣ್ಣು ನಾವು ಬದುಕುತ್ತಿರುವಂತಹ ಸಂದರ್ಭವನ್ನು ನೋಡುತ್ತಾ ಇರುತ್ತದೆ. ಕಿವಿಗಳಿಂದ ಕೇಳಿಸಿಕೊಳ್ಳದೇ ಇರುವಂತವರು ಯಾರು ಪ್ರಜಾಪ್ರಭುತ್ವವಾದಿಗಳಲ್ಲ. ನಮಗೆ ಇಷ್ಟವಾಗಿರುವುದನ್ನು ಹೇಳುವುದಕ್ಕೆ, ನಮಗೆ ಇಷ್ಟ ಇಲ್ಲದೇ ಇರುವುದನ್ನು ಪ್ರಶ್ನೆ ಮಾಡುವುದಕ್ಕೆ ನಾಲಿಗೆ ಅವಶ್ಯ. ಹಾಗಾಗಿ ಎಲ್ಲಿ ಕಣ್ಣು, ಕಿವಿ, ನಾಲಿಗೆಯ ಸಮನ್ವಯ ಇರುತ್ತದೋ ಅಂತಹ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಅನ್ನುವುದು ಜಾಗೃತವಾಗಿರುತ್ತದೆ. ಕಣ್ಣು, ಕಿವಿ, ನಾಲಿಗೆ ಈ ಮೂರರ ಸಮನ್ವತೆಯೇ ನಿಜವಾದ ರಾಜಕೀಯ ಪ್ರಜ್ಞೆಗೆ ಬೇಕಾಗಿರುವಂತಹ ತಾತ್ವಕಿತೆಯನ್ನು ನಿರ್ಮಾಣ ಮಾಡುತ್ತದೆ ಎಂದು ಅವರು ಹೇಳಿದರು.
ವಿಮರ್ಶಕರಾದ ಎಚ್.ದಂಡಪ್ಪ, ಪ್ರೊ.ಎನ್.ಮುಕುಂದರಾಜು, ಪ್ರೊ.ಮುನಿಯಪ್ಪ, ಡಾ.ಎಚ್. ಲಕ್ಷ್ಮಿ ನಾರಾಯಣ ಸ್ವಾಮಿ, ಬಿ.ಕೆ.ಸುರೇಶ್ ಹಾಗೂ ಸಂಶೋದನಾ ವಿದ್ಯಾರ್ಥಿ ಎಸ್.ಎಂ.ಲಿಂಗರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.