ಬೆಂಗಳೂರಿನ ಮಹಿಳೆಗೆ ಕಾಲರಾ ದೃಢಪಟ್ಟಿದೆ ಎಂಬುದು ಶಂಕೆಯಷ್ಟೆ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರದ ಮಹಿಳೆಯೊರ್ವರಿಗೆ ಕಾಲರಾ ಪ್ರಕರಣ ದೃಢಪಟ್ಟಿದೆಯೆಂಬುದು ಶಂಕೆಯಷ್ಟೇ. ವದಂತಿಗಳಿಗೆ ಮಾಧ್ಯಮಗಳು ಕಿವಿಗೊಡಬಾರದು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಮಾ.30ರಂದು ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸದ್ಯ ಮೂರು ಜಿಲ್ಲೆಗಳಲ್ಲಿ 6 ಕಾಲರಾ ಪ್ರಕರಣಗಳು ದೃಢಪಟ್ಟಿದ್ದು, 5 ಪ್ರಕರಣಗಳು ಮಾರ್ಚ್ ತಿಂಗಳಲ್ಲಿಯೇ ವರದಿಯಾಗಿವೆ ಎಂದು ಹೇಳಿದ್ದಾರೆ.
ಎಲ್ಲರೂ ಶೀಘ್ರ ಗುಣಮುಖರಾಗಿದ್ದು ‘ಔಟ್‍ಬ್ರೇಕ್’ ರೀತಿಯಲ್ಲಿ ಕಾಲರಾ ಹರಡುವ ಬಗ್ಗೆ ಯಾವುದೇ ವರದಿಯಾಗಿಲ್ಲ. ವಾಂತಿ-ಬೇಧಿ ಹಾಗೂ ಕಾಲರಾ ಪ್ರಕರಣಗಳಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ರಾಜ್ಯದೆಲ್ಲೆಡೆ ಬೇಸಿಗೆ ತಾಪಮಾನ ಹೆಚ್ಚಾಗಿರುವುದರಿಂದ ನೀರಿನ ಅಭಾವದಿಂದ ಅತಿಸಾರ-ಕಾಲರಾ, ವಾಂತಿ-ಭೇದಿ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಈಗಾಗಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಸೂಕ್ತ ಚಿಕಿತ್ಸೆಗಾಗಿ ಅಗತ್ಯವಿರುವಷ್ಟು ಔಷಧಗಳ ದಾಸ್ತಾನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.