ಬೆಂಗಳೂರು | ಆಟೊಗೆ ಬಿಎಂಟಿಸಿ ಬಸ್ ಢಿಕ್ಕಿ : ಚಾಲಕ, ಆಯುರ್ವೇದ ವೈದ್ಯ ಸ್ಥಳದಲ್ಲೇ ಮೃತ್ಯು

ಬೆಂಗಳೂರು : ಬಿಎಂಟಿಸಿ ಬಸ್ ಆಟೊಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಆಯುರ್ವೇದ ವೈದ್ಯ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಈ ಘಟನೆ ಜರುಗಿದ್ದು, ಕೆ.ಪಿ.ಅಗ್ರಹಾರದ ಅನಿಲ್ ಕುಮಾರ್ (50) ಹಾಗೂ ಹನುಮಂತನಗರದ ವಿಷ್ಣು ಭಾಪಟ್ (80) ಎಂಬುವವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ.
ಮೃತ ಆಟೋ ಚಾಲಕ ಅನಿಲ್ ಕುಮಾರ್, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೆ.ಪಿ.ಅಗ್ರಹಾರದಲ್ಲಿ ನೆಲೆಸಿದ್ದರು. ಮತ್ತೋರ್ವ ದುರ್ದೈವಿ ವಿಷ್ಣು ಅವರು ಆಯುರ್ವೇದ ವೈದ್ಯರಾಗಿ ಹನುಮಂತನಗರದಲ್ಲಿ ವಾಸಿಸುತ್ತಿದ್ದರು.
ಕೆಲಸದ ಸಲುವಾಗಿ ಬೆಳಗ್ಗೆ ವಿಷ್ಣು ಅವರು ಆಟೊ ಹತ್ತಿದ್ದರು. ಹೊಸಕೆರೆಹಳ್ಳಿ ಕ್ರಾಸ್‍ನ 80 ಅಡಿ ರಸ್ತೆ ಕಡೆಯಿಂದ ಸೀತಾ ಸರ್ಕಲ್ ಕಡೆಗೆ ಬರುತ್ತಿದ್ದ ಆಟೊಗೆ ಹಿಂಬದಿಯಿಂದ ಬಸ್ ಗುದ್ದಿದೆ.
ಅಪಘಾತದ ರಭಸಕ್ಕೆ ಮುಂದೆ ಹೋಗುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ಹಿಂಭಾಗಕ್ಕೆ ಗುದ್ದಿ ಆಟೊ ನಜ್ಜುಗುಜ್ಜಾಗಿದೆ. ಅಪ್ಪಚ್ಚಿಯಾದ ಆಟೋದಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ, ಬಿಎಂಟಿಸಿ ಬಸ್ ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಬನಶಂಕರಿ ಸಂಚಾರ ಪೊಲೀಸರು ತಿಳಿಸಿದ್ದಾರೆ.