ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟುವುದು ಕಾಯಿಲೆ ಅಲ್ಲ, ಪ್ರಕೃತಿಯ ಸಹಜ ಗುಣ : ನಟ ಪ್ರಕಾಶ್ ರಾಜ್
ಬೆಂಗಳೂರು : ‘ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟುವುದು ಕಾಯಿಲೆಯಲ್ಲ. ಅದಕ್ಕಾಗಿ ಔಷಧಿ ಹುಡುಕುವ ಪ್ರಯತ್ನ ಮಾಡದೆ, ಪ್ರಕೃತಿಯಲ್ಲಿ ಅದೊಂದು ಸಹಜ ಗುಣವೆಂದು ಅರ್ಥ ಮಾಡಿಕೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿರುವ ಸೈಂಟ್ ಜಾನ್ಸ್ ಸಂಜೆ ಕಾಲೇಜಿನಲ್ಲಿ ‘ಸಾಮಾಜಿಕ ನ್ಯಾಯಕ್ಕಾಗಿ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಮೈತ್ರಿಕೂಟ’ ಆಯೋಜಿಸಿದ್ದ ರಾಷ್ಟ್ರಗೀತೆ, ನಾಡಗೀತೆ, ಕೃತಿಗಳ ಬಿಡುಗಡೆ ಹಾಗೂ ತಲ್ಕಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಲೈಂಗಿಕ ಅಲ್ಪಸಂಖ್ಯಾತರು ಬೀದಿಗೆ ಇಳಿದವರು, ಇವರಿಗೆ ಸಮಾಜ ಏನೋ ಮಾಡಬೇಕು, ಇವರಿಗೆ ಕೆಲಸ ಕೊಡಬೇಕೆಂದು ಹೇಳುವುದು ಸರಿಯಲ್ಲ. ಲೈಂಗಿಕ ಅಲ್ಪಸಂಖ್ಯಾತರು ಬೀದಿಗೆ ಇಳಿದಿಲ್ಲ. ಅವರನ್ನು ಸಮಾಜವೇ ಬೀದಿಗೆ ತಳ್ಳಿದೆ’ ಎಂದು ಅಭಿಪ್ರಾಯಪಟ್ಟರು.
ಮನುಷ್ಯನ ವಿಕಾಸದ ಪ್ರಕ್ರಿಯೆಯಲ್ಲಿ ಪ್ರಾಣಿಗಳ ಹಲವು ರೂಪಗಳ ನಂತರ ಮನುಷ್ಯ ಆಗಿದ್ದು ಎನ್ನುವ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು. ಸಸ್ಯ-ಪ್ರಾಣಿಗಳಲ್ಲಿರುವಂತೆ ಮನುಷ್ಯ ಜೀವಿಯಲ್ಲಿಯೂ ಅಲ್ಪಸಂಖ್ಯಾತರಾಗಿ ಹುಟ್ಟುವುದು, ಒಂದು ಗಂಡಿನಲ್ಲಿ ಹೆಣ್ಣಿನ ಭಾವನೆ, ಹೆಣ್ಣಿನಲ್ಲಿ ಗಂಡಿನ ಭಾವನೆ ಬರುವುದು ಪ್ರಕೃತಿಯಲ್ಲಿರುವ ಒಂದು ಸಹಜ ಗುಣ. ಸಹಸ್ರಾರು ವರ್ಷಗಳಿಂದ ವಿಕಾಸ ಆಗುತ್ತಿದ್ದರೂ ವಿಕಾಸದ ಸೂಕ್ಷ್ಮತೆಯನ್ನು ಮನುಷ್ಯ ಬೆಳೆಸಿಕೊಂಡಿಲ್ಲ ಎಂದು ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು.
ಮನುಷ್ಯ ಮಾಡಿರುವ ದೊಡ್ಡ ತಪ್ಪೆಂದರೆ ಸಮಾಜ ಕಟ್ಟಿಕೊಂಡು, ಆ ಸಮಾಜಕ್ಕೆ ಕಟ್ಟಳೆ-ಸಂಪ್ರದಾಯಗಳು ಸೃಷ್ಟಿಸಿರುವುದು. ಲೈಂಗಿಕ ಅಭಿವ್ಯಕ್ತಿಯೇ ಬದುಕು, ಮನುಷ್ಯನಿಗೆ ಮಕ್ಕಳು ಹುಟ್ಟಬೇಕು, ಇಲ್ಲದಿದ್ದರೆ ಮನುಷ್ಯ ಅಲ್ಲ ಎಂದು ತಿಳಿದುಕೊಂಡಿರುವುದು ಸಮಾಜದಲ್ಲಿರುವ ತಪ್ಪು ಕಲ್ಪನೆ. ಲೈಂಗಿಕತೆಯನ್ನು ದಾಟಿ ಮನುಷ್ಯನಲ್ಲಿ ಭಾವನೆ, ಹೃದಯ, ತುಡಿತ, ಹಸಿವು, ಜ್ಞಾನ ಎಲ್ಲವೂ ಇದೆ. ಸಾಮಾನ್ಯವಾಗಿ ಮನುಷ್ಯರು ನಾವು ಎಂದು ಮಾತನಾಡುವುದು ನಿಲ್ಲಿಸಬೇಕು. ಇಲ್ಲಿ ಯಾರು ಯಾರಿಗೂ ಭಿಕ್ಷೆ ಕೊಡುತ್ತಿಲ್ಲ. ಎಲ್ಲರೂ ಒಂದೆ ಎನ್ನುವ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮನುಷ್ಯರು ಕಟ್ಟಿಕೊಂಡಿರುವ ಸಂಪ್ರದಾಯದ ಗೋಡೆಗಳು ಎಷ್ಟಿವೆ ಎಂದರೆ, ಗಂಡು-ಹೆಣ್ಣಿನ ಮಧ್ಯೆ ಗೋಡೆ, ಗಂಡು-ಗಂಡಿನ ಮಧ್ಯೆ ಗೋಡೆ, ಮನುಷ್ಯ-ಮನುಷ್ಯರ ಮಧ್ಯೆ ಗೋಡೆ ಇನ್ನು ಹಲವು. ನಮ್ಮ ಕೈಚಾಚಿನಲ್ಲಿರುವ ಒಂದು ಜೀವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದಂತೆ ಸಂಪ್ರದಾಯಗಳನ್ನು ಕಟ್ಟಿಕೊಂಡಿದ್ದೇವೆ. ಅಂತಹ ಸಂಪ್ರದಾಯದ ಗೋಡೆಗಳು ಸಮಾಜದಲ್ಲಿ ಇಲ್ಲದಿದ್ದರೆ ಎಲ್ಲವೂ ಸಹಜವಾಗಿರುತ್ತದೆ ಎಂದು ಅವರು ಹೇಳಿದರು.
ಮನುಷ್ಯ ಹೋರಾಟ ವಿಜಯದ ಸಂಕೇತವಾಗಿ ಕಾನೂನಾಗಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಕಾನೂನು, ಶಿಕ್ಷಣ, ಕೆಲಸ ಕೊಡುವುದರಿಂದ ಮಾತ್ರ ಸಮಾನತೆ, ಸಮಾನ ಹಕ್ಕು ಸಿಗುವುದಿಲ್ಲ. ಮನುಷ್ಯರಲ್ಲಿರುವ ಆಲೋಚನೆ ಬದಲಾಗಬೇಕಿದೆ. ನಾವೆಲ್ಲರೂ ಒಂದೆ ಎನ್ನುವ ಭಾವನೆ ಬರಬೇಕು. ನಮಲ್ಲಿ ಭೇದ-ಬೇವ ಇಲ್ಲದೆ ಇರಬಹುದು ಆದರೆ, ನಮ್ಮ ಹಿರಿಕರು ಮಾಡಿರುವ ತಪ್ಪಿಗೆ ನಾವು ತಲೆ ತಗ್ಗಿಸಬೇಕು. ಆ ತಪ್ಪನ್ನು ಅರ್ಥ ಮಾಡಿಕೊಂಡು ಸರಿ ಮಾಡುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ಪ್ರಕಾಶ್ ರಾಜ್ ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಮೈತ್ರಿಕೂಟದ ಡಾ.ಅಕ್ಕೈ ಪದ್ಮಶಾಲಿ, ಚಾಂದಿನಿ, ಸವಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು.