ಬೆಂಗಳೂರು | ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನಕ್ಕೆ ತೆರೆ

ಬೆಂಗಳೂರು : ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನಕ್ಕೆ ಶುಕ್ರವಾರದಂದು ತೆರೆ ಬಿದ್ದಿದ್ದು, ಏರೋ ಇಂಡಿಯಾಗೆ ಬಂದಿದ್ದ ಜನರು ವಿಮಾನ ಹಾರಾಟವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.
ಫೆ.10ರಂದು ಏರೋ ಇಂಡಿಯಾ ಚಾಲನೆ ದೊರೆತಿದ್ದು, ಫೆ.12ರವರೆಗೆ ರಕ್ಷಣಾ ವಲಯದ ಸಿಬ್ಬಂದಿಗಳು ಸೇರಿದಂತೆ ನಿಗಧಿತ ಜನರಿಗೆ ಮಾತ್ರ ವಿಮಾನ ಹಾರಾಟ ನೋಡಲು ಅಕಾಶ ಕಲ್ಪಿಸಲಾಗಿತ್ತು. ಫೆ.13 ಮತ್ತು ಫೆ.14ರಂದು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದ್ದು, ಯಲಹಂಕ ವಾಯುನೆಲೆಗೆ ಜನಸಾಗರವೇ ಹರಿದು ಬಂದಿತ್ತು.
ಕೊನೆಯ ಎರಡು ದಿನಗಳು ಲಕ್ಷಾಂತರ ಜನರು ಏರೋ ಇಂಡಿಯಾಗೆ ಬಂದಿದ್ದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ, ಅನ್ಯರಾಜ್ಯಗಳಿಂದ ಜನರು ಬಂದು ವಿಮಾನ ಹಾರಾಟವನ್ನು ವಿಕ್ಷಣೆ ಮಾಡಿದರು. ಜನಸಂಖ್ಯೆ ಹೆಚ್ಚಾದ ಕಾರಣ ಊಟದ ಹಾಲ್‍ಗಳಲ್ಲಿ ಅವ್ಯವಸ್ಥೆ ಕಂಡು ಬಂದಿತು. ಜನರನ್ನು ನಿಭಾಯಿಸಲು ಹೋಟೆಲ್ ಸಿಬ್ಬಂದಿಗಳು ಹರ ಸಾಹಸ ಪಟ್ಟರು.
ಏರೋ ಶೋ ಆರಂಭದ ದಿನದಿಂಲೂ ಯಲಹಂಕ ಸುತ್ತಾಮತ್ತಾ ವಾಹನ ದಟ್ಟನೆ ಉಂಟಾಗಿತ್ತು. ಏರೋ ಇಂಡಿಯಾ ನಾಲ್ಕನೇ ದಿನದಂದು ಅಕ್ಷರಶಃ ಸ್ತಬ್ಧಗೊಳಿಸಿತ್ತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಳ್ಳಾರಿ ರಸ್ತೆಯಲ್ಲಿ ಭಾರಿ ವಾಹನ ದಟ್ಟನೆ ಕಂಡುಬಂದಿತು. ಸುಮಾರು ನಾಲ್ಕು ಕಿಲೋಮೀಟರ್ ಉದ್ದದವರೆಗೂ ಸಾವಿರಾರು ವಾಹನಗಳು ಸಿಕ್ಕಿಹಾಕಿಕೊಂಡವು. ಮುಖ್ಯರಸ್ತೆ, ಸರ್ವಿಸ್ ರಸ್ತೆಗಳೆರಡರಲ್ಲೂ ಅಪಾರ ಪ್ರಮಾಣದ ದಟ್ಟಣೆ ಉಂಟಾಗಿತ್ತು. ಅನೇಕ ಪ್ರಯಾಣಿಕರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡರು.