ಬೆಂಗಳೂರಿನಲ್ಲಿ ಫೆ.10 ರಿಂದ 14ರ ವರೆಗೆ ‘ಏರೋ ಇಂಡಿಯಾ ವೈಮಾನಿಕ ಪ್ರದರ್ಶನ’
PC : PTI
ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 15ನೇ ಆವೃತ್ತಿಯ ‘ಏರೋ ಇಂಡಿಯಾ-2025’ ಫೆ.10 ರಿಂದ 14ರ ವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯ ಕೇಂದ್ರದಲ್ಲಿ ನಡೆಯಲಿದೆ.
‘ರನ್ವೇ ಟು ಎ ಬಿಲಿಯನ್ ಆಪರ್ಚುನಿಟೀಸ್'(ಶತಕೋಟಿ ಅವಕಾಶಗಳಿಗಾಗಿ ರಹದಾರಿ) ಎಂಬ ವಿಶಾಲ ಧ್ಯೇಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮ ವಿದೇಶಿ ಮತ್ತು ಭಾರತೀಯ ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ರೂಪಿಸಲು ಮತ್ತು ಜಾಗತಿಕ ಮೌಲ್ಯ ಸರಣಿಯಲ್ಲಿ ದೇಶೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು ಹೊಸ ಮಾರ್ಗಗಳ ಅನ್ವೇಷಣೆಗೆ ವೇದಿಕೆಯನ್ನು ಒದಗಿಸುತ್ತದೆ.
ಕಾರ್ಯಕ್ರಮದ ಮೊದಲ ಮೂರು ದಿನಗಳು (ಫೆ.10, 11 ಮತ್ತು 12) ವ್ಯವಹಾರದ ದಿನಗಳಾಗಿರುತ್ತವೆ. ಆದರೆ 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮ ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ಸ್ಥಿರ ಪ್ರದರ್ಶನಗಳನ್ನು ಒಳಗೊಂಡಿದೆ.
ಇದರಲ್ಲಿ ಪೂರ್ವಭಾವಿ ಕಾರ್ಯಕ್ರಮ (ಕರ್ಟನ್ ರೈಸರ್ ಈವೆಂಟ್), ಉದ್ಘಾಟನಾ ಕಾರ್ಯಕ್ರಮ, ರಕ್ಷಣಾ ಸಚಿವರ ಸಮಾವೇಶ, ಸಿಇಒಗಳ ದುಂಡು ಮೇಜಿನ ಸಭೆ, ಮಂಥನ್ ಸ್ಟಾರ್ಟ್-ಅಪ್ ಕಾರ್ಯಕ್ರಮ, ಮೈನವಿರೇಳಿಸುವ ಏರ್ ಶೋಗಳಿವೆ, ಜತೆಗೆ ಇಂಡಿಯಾ ಪೆವಿಲಿಯನ್ ಅನ್ನು ಒಳಗೊಂಡಿರುವ ದೊಡ್ಡ ಪ್ರದರ್ಶನ ಪ್ರದೇಶ ಮತ್ತು ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳವನ್ನು ಒಳಗೊಂಡಿದೆ.
ಮಿತ್ರ ರಾಷ್ಟ್ರಗಳೊಂದಿಗೆ ಕಾರ್ಯತಂತ್ರದ ಸಹಭಾಗಿತ್ವದೆಡೆಗೆ ಮಾತುಕತೆಯನ್ನು ಸುಲಭಗೊಳಿಸಲು, ಭಾರತವು ‘ಬ್ರಿಡ್ಜ್-ಅಂತರ್ರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕ ಪಾಲುದಾರಿಕೆ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು' ಎಂಬ ವಿಷಯದ ಮೇಲೆ ರಕ್ಷಣಾ ಸಚಿವರ ಸಮಾವೇಶವನ್ನು ಆಯೋಜಿಸುತ್ತದೆ.
ಇದು ಭೌಗೋಳಿಕ ರಾಜಕೀಯ ಪರಿಸ್ಥಿತಿಗಳನ್ನು ಸಕ್ರಿಯಗೊಳಿಸಲಿದೆ ಮತ್ತು ಪರಸ್ಪರ ಸಮೃದ್ಧಿಯ ಹಾದಿಗೆ ಅನುವು ಮಾಡಿಕೊಡಲಿದೆ. ಅಲ್ಲದೆ, ಇದು ಭದ್ರತೆ ಮತ್ತು ಅಭಿವೃದ್ಧಿಯ ಹಂಚಿಕೆಯ ದೂರದೃಷ್ಟಿಗಳೊಂದಿಗೆ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.
ಏರ್ ಶೋ ನೇಪಥ್ಯದಲ್ಲಿ ರಕ್ಷಣಾ ಸಚಿವರು, ರಕ್ಷಣಾ ಖಾತೆ ರಾಜ್ಯ ಸಚಿವರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ಕಾರ್ಯದರ್ಶಿಗಳ ಮಟ್ಟದಲ್ಲಿ ಹಲವಾರು ದ್ವಿಪಕ್ಷೀಯ ಸಭೆಗಳನ್ನು ಆಯೋಜಿಸಲಾಗಿದೆ. ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಮೂಲಕ ಸ್ನೇಹಪರ ದೇಶಗಳೊಂದಿಗೆ ರಕ್ಷಣಾ ಮತ್ತು ವೈಮಾನಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವತ್ತ ಗಮನಹರಿಸಲಾಗುವುದು.
ಸಿಇಒ ಗಳ ದುಂಡುಮೇಜಿನ ಸಭೆ, ವಿದೇಶಿ ಮೂಲ ಸಲಕರಣೆ ತಯಾರಕರಿಗೆ (ಒಇಎಂ ಗಳು) ಭಾರತದಲ್ಲಿ ಉತ್ಪಾದನೆಗೆ ಅನುಕೂಲಕರ ವೇದಿಕೆಯನ್ನು ಒದಗಿಸುವ ನಿರೀಕ್ಷೆಯಿದೆ. ಜಾಗತಿಕ ಸಿಇಒಗಳು, ದೇಶೀಯ ಪಿಎಸ್ಯುಗಳ ಸಿಎಂಡಿಗಳು ಮತ್ತು ಭಾರತದ ಪ್ರಧಾನ ಖಾಸಗಿ ರಕ್ಷಣಾ ಮತ್ತು ವೈಮಾನಿಕ ಉತ್ಪಾದನಾ ಕಂಪನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಇಂಡಿಯಾ ಪೆವಿಲಿಯನ್ ತನ್ನ ಮೇಕ್-ಇನ್-ಇಂಡಿಯಾ ಉಪಕ್ರಮಕ್ಕೆ ಸ್ಥಳೀಯ ರಕ್ಷಣಾ ಉತ್ಪಾದನಾ ಸಾಮಥ್ರ್ಯಗಳ ವೃದ್ಧಿ ಮತ್ತು ಭವಿಷ್ಯದ ಸಂಭನೀಯಗಳು ಸೇರಿದಂತೆ ಜಾಗತಿಕ ಹಂತಕ್ಕೆ ಸಿದ್ಧವಾಗಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮೂಲಕ ಭಾರತದ ಬದ್ಧತೆಯನ್ನು ಬಿಂಬಿಸುತ್ತದೆ.
ಭಾರತೀಯ ನವೋದ್ಯಮಗಳ ಪ್ರಚಾರಕ್ಕಾಗಿ ಏರೋ ಇಂಡಿಯಾ 2025ರಲ್ಲಿ ಫೋಕಸ್ ಏರಿಯಾ (ಕೇಂದ್ರೀಕೃತ ಪ್ರದೇಶ)ವನ್ನು ಹೊಂದಿರಲಿದೆ ಮತ್ತು ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನಗಳು/ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ವಿಶೇಷ ಐಡೆಕ್ಸ್ ಪೆವಿಲಿಯನ್ನಲ್ಲಿ ಪ್ರದರ್ಶಿಸಲಾಗುವುದು.
ಇದಲ್ಲದೆ, ಡೈನಾಮಿಕ್ ಏರೋಬ್ಯಾಟಿಕ್ ಪ್ರದರ್ಶನಗಳು ಮತ್ತು ಲೈವ್ ತಂತ್ರಜ್ಞಾನ ಪ್ರದರ್ಶನಗಳು ವಿಶಿಷ್ಟ ಅನುಭವವನ್ನು ಒದಗಿಸುತ್ತವೆ, ಆಧುನಿಕ ಏರೋಸ್ಪೇಸ್ ಪ್ಲಾಟ್ಫಾರ್ಮ್ಗಳು ಮತ್ತು ತಂತ್ರಜ್ಞಾನಗಳ ಸಾಮಥ್ರ್ಯವನ್ನು ಪ್ರದರ್ಶಿಸುತ್ತವೆ. ಕಾರ್ಯಕ್ರಮದ ಭಾಗವಾಗಿ ವಿವಿಧ ಪ್ರಮುಖ ವಿಷಯಗಳ ಕುರಿತು ಹಲವು ವಿಚಾರಸಂಕಿರಣಗಳನ್ನೂ ಆಯೋಜಿಸಲಾಗಿದೆ.
1996ರಿಂದ ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿರುವ ಏರೋ ಇಂಡಿಯಾ 14 ಯಶಸ್ವಿ ಆವೃತ್ತಿಗಳೊಂದಿಗೆ ಈಗಾಗಲೇ ಜಾಗತಿಕವಾಗಿ ಒಂದು ಪ್ರಮುಖ ವೈಮಾನಿಕ ಪ್ರದರ್ಶನವಾಗಿ ತನ್ನದೇ ಆದ ಸ್ಥಾನಗಳಿಸಿದೆ. ಕಳೆದ ಆವೃತ್ತಿಯು ಹಲವು ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿತ್ತು. ಏಕೆಂದರೆ ಇದು ಏಳು ಲಕ್ಷಕ್ಕೂ ಅಧಿಕ ವೀಕ್ಷಕಕರು, 98 ದೇಶಗಳ ಗಣ್ಯರು ಮತ್ತು ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್-ಅಪ್ಗಳು ಮತ್ತು ಎಂಎಸ್ ಎಂಇಗಳು ಸೇರಿ 809ಕ್ಕೂ ಅಧಿಕ ಪ್ರದರ್ಶಕರನ್ನು ಆಕರ್ಷಿಸಿತು.
201 ಒಡಂಬಡಿಕೆಗಳಿಗೆ ಸಹಿ, ಪ್ರಮುಖ ಘೋಷಣೆಗಳು, ಉತ್ಪನ್ನ ಬಿಡುಗಡೆಗಳು ಮತ್ತು 75,000 ಕೋಟಿ ರೂ.ಗೂ ಅಧಿಕ ಮೌಲ್ಯದ ತಂತ್ರಜ್ಞಾನ ವರ್ಗಾವಣೆ ಸೇರಿದಂತೆ 250 ಪಾಲುದಾರಿಕೆಗಳಿಗೆ ಸಾಕ್ಷಿಯಾಯಿತು. 2025ರ ಆವೃತ್ತಿಯು ಈ ಸಾಧನೆಗಳನ್ನು ಮೀರಿ ಹೊಸ ಮೈಲಿಗಲ್ಲು ಸ್ಥಾಪಿಸುವ ಗುರಿ ಹೊಂದಿದೆ ಮತ್ತು ವೈಮಾನಿಕ ಪ್ರದರ್ಶನದ ವ್ಯಾಪ್ತಿ ಮತ್ತು ವೈಭವ ಮತ್ತಷ್ಟು ಹೆಚ್ಚಾಗಲಿದೆ ಎಂಬ ಭರವಸೆಯಿದೆ.