ಬೆಂಗಳೂರು: AICCTU ಪ್ರಥಮ ಜಿಲ್ಲಾ ಸಮ್ಮೇಳನ; 'ಕಾರ್ಮಿಕರ ಕಿಡಿ' ಪತ್ರಿಕೆ ಬಿಡುಗಡೆ
ಬೆಂಗಳೂರು: ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (AICCTU) ಪ್ರಥಮ ಬೆಂಗಳೂರು ಜಿಲ್ಲಾ ಸಮ್ಮೇಳನ ರವಿವಾರ ನಡೆಯಿತು.
ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ AICCTU ರಾಷ್ಟ್ರಾಧ್ಯಕ್ಷ ಕಾಮ್ರೇಡ್ ವಿ. ಶಂಕರ್, "ಕರ್ನಾಟಕದಲ್ಲಿರುವ ಕೇಂದ್ರ ಟ್ರೇಡ್ ಯೂನಿಯನ್ ಗಳಲ್ಲಿ ಎಐಸಿಸಿಟಿಯು ಮಹತ್ವವಾದ ಯೂನಿಯನ್ ಆಗಿ ಹೊರಹೊಮ್ಮಿದೆ. ನಾವು ಜೂಲೈ 25ರಿಂದ ಆಗಸ್ಟ್ 9ರ ವರೆಗೆ ರಾಷ್ಟ್ರ ಮಟ್ಟದ ಅಭಿಯಾನವನ್ನು ನಡೆಸುತ್ತೇವೆ. ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗಿರಬಹುದು, ಆದರೆ ಭಾರತೀಯರು 1942ರಲ್ಲಿ ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಳು ಹೇಳಿದಂತೆ, ನಾವು ಕಾರ್ಮಿಕರು ಈಗ ಮೋದಿ ಸರ್ಕಾರ ಭಾರತ ಬಿಟ್ಟು ತೊಲಗಬೇಕೆಂದು ಸಂದೇಶ ನೀಡಿದ್ದೇವೆ," ಎಂದು ಹೇಳಿದರು.
ಹಲವಾರು ಕಾರ್ಮಿಕ ಸಂಘಟನೆಗಳು ಆರ್ಥಿಕ ಸೌಲಭ್ಯಗಳ ಕುರಿತು ನಡೆಸುವ ಹೋರಾಟಗಳಲ್ಲಿ ಮಾತ್ರ ತೊಡಗಿಸಿಕೊಂಡಿರುತ್ತೆ. ಇದರಿಂದ ಹೊರಬರಲು ನಾವು ವರ್ಗ ಪ್ರಶ್ನೆಯನ್ನು ಸಾಮಾಜಿಕ ಅರ್ಥದಲ್ಲಿ ತೆಗೆದುಕೊಳ್ಳಬೇಕು ಮತ್ತು ವರ್ಗ ಸಂಘರ್ಷವು ಕೇವಲ ಆರ್ಥಿಕ ಸಂಘರ್ಷವಾಗಿರದೆ, ಜಾತಿ ಮತ್ತು ಲಿಂಗ ದಮನವನ್ನು ಒಳಗೊಂಡಂತೆ ಎಲ್ಲಾ ಸಾಮಾಜಿಕ ದೌರ್ಜನ್ಯದ ವಿರುದ್ಧ ನಡೆಸಬೇಕು ಎಂದು AICCTU ರಾಜ್ಯಾಧ್ಯಕ್ಷರು ಕಾಮ್ರೇಡ್ ಕ್ಲಿಫ್ಟನ್ ಡಿ' ರೊಜಾರಿಯೋ ಹೇಳಿದರು.
"ದುಡಿಯುವ ವರ್ಗದ ಸಂಘಟನೆ ಮತ್ತು ಸಂಘರ್ಷಗಳಲ್ಲಿ ಲಿಂಗ ಸಮಾನತೆ ಮತ್ತು ಜಾತಿ ವಿನಾಶವು ಪ್ರಮುಖ ಪಾತ್ರವನ್ನು ವಹಿಸಬೇಕು. ಕೋಮುವಾದಿ ವಿಭಜನೆಯ ವಿರುದ್ಧ ದುಡಿಯುವ ವರ್ಗವು ಪ್ರಮುಖ ಕಾರ್ಯವನ್ನು ನಿರ್ವಹಿಸಬೇಕು. ಏಕೆಂದರೆ ಇದು ಕೇವಲ ದುಡಿಯುವ ವರ್ಗದವರನ್ನು ವಿಭಜಿಸುತ್ತಿಲ್ಲ, ಭಾರತದಲ್ಲಿ ಜನಿಸಿರುವ ಫ್ಯಾಶಿಸಂನ ಈ ಸ್ವರೂಪ ಇಡೀ ದೇಶಕ್ಕೆ ಅನಾಹುತಕಾರಿಯಾಗಿದೆ. ದುಡಿಯುವ ವರ್ಗಕ್ಕೆ ನ್ಯಾಯ ದೊರಕಬೇಕೆಂದರೆ ಎಲ್ಲಾ ರೀತಿಯ ಪ್ರಜಾಪ್ರಭುತ್ವೀಕರಣ ಮುಖ್ಯವಾಗಿರುತ್ತದ," ಎಂದು AICCTU ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಪಿ.ಪಿ. ಅಪ್ಪಣ್ಣ ಹೇಳಿದರು.
ಪ್ರಥಮ ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, 45-ಸದಸ್ಯರುಳ್ಳ ಸಮಿತಿಯನ್ನು ರಚಿಸಿ, ಕಾಮ್ರೇಡ್ ನಿರ್ಮಲ ಅವರನ್ನು ಬೆಂಗಳೂರು ಜಿಲ್ಲಾ ಅಧ್ಯಕ್ಷರು ಮತ್ತು ಕಾಮ್ರೇಡ್ ಅಶೋಕ್ ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ, ಅವರ ಜೊತೆಗೆ ಮತ್ತಿತರೆ 7 ಪದಾಧಿಕಾರಿಗಳನ್ನು ಚುನಾಯಿಸಲಾಯಿತು.
"ಬೆಂಗಳೂರಿನಲ್ಲಿ ಕ್ರಿಯಾಶೀಲ ಮತ್ತು ತೀವ್ರವಾದ ದುಡಿಯುವ ವರ್ಗದ ಚಳುವಳಿಯನ್ನು ಕಟ್ಟುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ, ಘನತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಕಾರ್ಪೊರೇಟ್-ಕಮ್ಯುನಲ್ ಫ್ಯಾಶಿಸಂ ವಿರುದ್ಧದ ಹೋರಾಟಗಳನ್ನು ರೂಪಿಸಲು ನೂತನ ನಕ್ಷೆಯನ್ನು ನಾವು ತಯಾರಿಸಬೇಕು," ಎಂದು ಬೆಂಗಳೂರು ಅಧ್ಯಕ್ಷರು ಕಾಮ್ರೇಡ್ ನಿರ್ಮಲ ಹೇಳಿದರು.
ಈ ಸಂದರ್ಭದಲ್ಲಿ 'ಕಾರ್ಮಿಕರ ಕಿಡಿ' ಎಂಬ AICCTU ಪತ್ರಿಕೆಯು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟವಾಗಲಿದ್ದು, ಜೂಲೈ 2024ರ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.