ರಾಜ್ಯದ ಎಲ್ಲ ಜನರು ಆರೋಗ್ಯವಾಗಿರಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ
‘500 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಗೆ ಶಂಕುಸ್ಥಾಪನೆ’
ಬೆಂಗಳೂರು : ರಾಜ್ಯದಲ್ಲಿರುವ ಎಲ್ಲ ಜನರೂ ಆರೋಗ್ಯದಿಂದ ಇರಬೇಕು. ಕಷ್ಟ ಗೊತ್ತಿರುವ ಹಳ್ಳಿಗಾಡಿನ ಮಕ್ಕಳು ಕೂಡ ವೈದ್ಯರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ 500 ಹಾಸಿಗೆಗಳ ಸಾಮಥ್ರ್ಯವುಳ್ಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವೈದ್ಯರು ಕಾಯಿಲೆ ವಾಸಿ ಮಾಡಿದರೆ ಜನರು ಸದಾ ನೆನೆಯುತ್ತಾರೆ. ಯಾವುದೇ ಕಾರಣಕ್ಕೂ ವೈದ್ಯರು ರೋಗಿಗಳನ್ನು ನಿರ್ಲಕ್ಷ್ಯ ಮಾಡದೇ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಬೌರಿಂಗ್ ಆಸ್ಪತ್ರೆ ಸುದೀರ್ಘ ಇತಿಹಾಸವನ್ನು ಹೊಂದಿರುವ ಆಸ್ಪತ್ರೆ. ಸಾವಿರಾರು ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಮತ್ತೊಂದು ವೈದ್ಯಕೀಯ ಕಾಲೇಜಿನ ಅಗತ್ಯವನ್ನು ಮನಗಂಡು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದೆ ಎಂದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ಮತ್ತೊಂದು ವೈದ್ಯಕೀಯ ಕಾಲೇಜು ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೂ ಆಗಿ, ಸಾಮಾನ್ಯ ಜನರಿಗೆ, ಬಡವರಿಗೆ, ದಲಿತರಿಗೆ ಬಹಳಷ್ಟು ಉಪಯೋಗವಾಗುತ್ತದೆ. ಅದಕ್ಕಾಗಿಯೇ ಇಂದು 500 ಹಾಸಿಗೆ ಸಾಮಥ್ರ್ಯ ಆಸ್ಪತ್ರೆ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಾಗುತ್ತಿದೆ. ಎಲ್ಲರಿಗೂ ಬದುಕುವ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಾಗಿ ಬರುವವರು ಶ್ರೀಮಂತ ವರ್ಗದವರಲ್ಲ. ಸಾಮಾನ್ಯವಾಗಿ ಬಡವರು, ಕೆಳವರ್ಗದವರು ಮಾತ್ರ ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಬಡವರು ದುಬಾರಿ ವೆಚ್ಚವನ್ನು ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸರ್ಕಾರಿ ಆಸ್ಪತ್ರೆಗಳ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕ ರಿಝ್ವಾನ್ ಅರ್ಶದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಶೀನ್, ರಾಜೀವ್ ಗಾಂಧಿ ವೈದ್ಯಕೀಯ ವಿವಿ ಕುಲಪತಿ ರಮೇಶ್, ನಿರ್ದೇಶಕ ಮನೋಜ್ ಮತ್ತಿತರರು ಉಪಸ್ಥಿತರಿದ್ದರು.
ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ :
ಹಿಂದೆ ಹಣಕಾಸು ಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ತೀರ್ಮಾನ ಮಾಡಲಾಗಿತ್ತು. ಈಗ ಪ್ರಸ್ತುತ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವುದರಿಂದ ಹಾಗೂ ಎಲ್ಲ ಸಮುದಾಯದವರಿಗೂ ಪ್ರಾತಿನಿಧ್ಯ ದೊರಕಲು ಇಂತಹ ಆಸ್ಪತ್ರೆಗಳಲ್ಲಿ ವೈದ್ಯರು ಕಾರ್ಯನಿರ್ವಹಿಸಲು ಮೀಸಲಾತಿ ವ್ಯವಸ್ಥೆಯಾಗುತ್ತದೆ. ಸೂಕ್ತ ಅವಕಾಶ ದೊರೆತರೆ, ಎಲ್ಲರೂ ಜೀವನದಲ್ಲಿ ಅಭಿವೃದ್ಧಿ ಹೊಂದಬಹುದಾಗಿದೆ. ಸಮಾಜದಲ್ಲಿ ಅಶಕ್ತರಿಗೆ ಬದುಕುವ ಅವಕಾಶವನ್ನು ಸರಕಾರ ಕಲ್ಪಿಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
‘300 ಕೋಟಿ ರೂ.ವೆಚ್ಚದಲ್ಲಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಶಂಕುಸ್ಥಾಪನೆ ಮಾಡಲಾಗಿದ್ದು, ನಮ್ಮ ಅವಧಿಯಲ್ಲಿಯೇ ಉದ್ಘಾಟನೆಯನ್ನೂ ನೆರವೇರಿಸಲಾಗುವುದು. ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಪಾಲಿಸುವುದರಿಂದ ಸದೃಢ ಆರೋಗ್ಯವನ್ನು ಪಡೆಯಬಹುದಾಗಿದೆ. ಕ್ಯಾನ್ಸರ್ ರೋಗಕ್ಕೆ ಆರಂಭಿಕ ಹಂತದಲ್ಲಿದ್ದರೆ ಗುಣಪಡಿಸಬಹುದಾಗಿದೆ. ವೈಜ್ಞಾನಿಕ ಸಂಶೋಧನೆಗಳಿಂದ ಅನೇಕ ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲಾಗುತ್ತಿದೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ವಹಣೆ, ಸ್ವಚ್ಛತೆ ಉತ್ತಮವಾಗಿರಬೇಕು, ಉತ್ತಮ ಆರೋಗ್ಯ ಸೇವೆ ದೊರೆಯುವಂತಾಗಬೇಕು’
-ಸಿದ್ದರಾಮಯ್ಯ, ಮುಖ್ಯಮಂತ್ರಿ