ನಟ ದರ್ಶನ್ ರಿಗೆ ರಾಜಾತಿಥ್ಯ ಆರೋಪ: ಪರಪ್ಪನ ಅಗ್ರಹಾರ ಜೈಲಿನ 7 ಅಧಿಕಾರಿಗಳ ಅಮಾನತು
ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿ ಆರೋಪಿ ನಟ ದರ್ಶನ್ ರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿ ಕರ್ತವ್ಯ ಲೋಪ ಎಸಗಿದ ಆರೋಪದ ಅಡಿ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲರ್ ಗಳಾದ ಶರಣಪ್ಪ, ಪ್ರಭು ಎಸ್. ಖಂಡೇಲ್ ವಾಲ್, ಅಸಿಸ್ಟೆಂಟ್ ಜೈಲರ್ ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಲ್ವಾರು, ಹೆಡ್ ವಾರ್ಡರ್ ವೆಂಕಪ್ಪ, ಸಂಪತ್ ಕುಮಾರ್, ವಾರ್ಡರ್ ಬಸಪ್ಪ ತೇಲಿ ಎಂವವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ಹಿರಿಯ ಅಧಿಕಾರಿಗಳ ಪಾತ್ರ ಇದ್ದರೆ ಅವರನ್ನೂ ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ತನಿಖೆ ನಡೆಯುತ್ತಿದೆ. ಕೆಲವು ಸಿಬ್ಬಂದಿ ವರ್ಗಾವಣೆಗೂ ಆದೇಶಿಸಲಾಗಿದೆ ಎಂದು ಹೇಳಿದರು.
‘ದರ್ಶನ್ಗೆ ಚಿಕನ್ ಬಿರಿಯಾನಿ ಕೊಟ್ಟಿಲ್ಲ. ಜೈಲಿನ ನಿಯಮದಂತೆ ನಡೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ ಪರಮೇಶ್ವರ್, ಜೈಲಿನಲ್ಲಿ ಜಾಮರ್ ಹಾಕಿ ಹೈ ಪ್ರೀಕ್ವೆನ್ಸಿ ಇಡಲಾಗಿತ್ತು. ಇದರಿಂದ ಪಕ್ಕದ ಏರಿಯಾಗಳಿಗೆ ತೊಂದರೆಗಳಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಸದ್ಯ ಪ್ರೀಕ್ವೆನ್ಸಿ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.
ಜೈಲಿನಲ್ಲಿ ಫೋಟೋ ಯಾರು ತೆಗೆದರು? ಯಾರ ಮೊಬೈಲ್ ನಲ್ಲಿ ತೆಗದಿದ್ದಾರೆ ಅನ್ನೋದು ಮುಖ್ಯ ಆಗುತ್ತದೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.