ವೈಚಾರಿಕತೆ ಅಡಿಯಲ್ಲಿ ಎಲ್ಲ ಧರ್ಮಗಳ ಆಚರಣೆಗೆ ಅವಕಾಶ : ಸಚಿವ ಡಾ.ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ನಮ್ಮಲ್ಲಿ ಯಾವ ಧರ್ಮವೂ ಶ್ರೇಷ್ಠವಲ್ಲ, ಕನಿಷ್ಠವಲ್ಲ. ಇಲ್ಲಿ ಎಲ್ಲರಿಗೂ ತಮ್ಮ ಆಚರಣೆಯನ್ನು ವೈಜ್ಞಾನಿಕತೆ ಮತ್ತು ವೈಚಾರಿಕತೆಯ ಆಧಾರದಲ್ಲಿ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ವಸಂತನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾವು ಮಾಡಿದ ಸಂವಿಧಾನ ಜಾಗೃತಿಯ ಅಭಿಯಾನದಿಂದ ದೇಶದಲ್ಲಿ ಆಂತರಿಕ ಕ್ರಾಂತಿಯಾಗಿದೆ ಎಂದರು.
ನಮ್ಮ ಸಂವಿಧಾನ ದಿನಕ್ಕೆ 75 ವರ್ಷ ತುಂಬಿದೆ. 75 ವರ್ಷಗಳ ಈ ಅವಧಿಯಲ್ಲಿ ನಾವು ಸಾಗಿ ಬಂದ ಹಾದಿಯನ್ನು ಈ ದಿನ ನಾವು ಅವಲೋಕನ ಮಾಡಬೇಕಾದ ಕ್ಷಣ ಇದಾಗಿದೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಸಮಾನತೆಯ ಸೂಚಕವಾದ ಸಂವಿಧಾನ ಬದಲಾವಣೆಯ ಕುರಿತಂತೆ ಹಲವು ಜನರು ಹಲವು ರೀತಿಯಲ್ಲಿ ಮಾತನಾಡಿದ್ದರು. ಆದರೆ ನಮ್ಮ ಸರಕಾರವು ಬಂದ ನಂತರ ಸಂವಿಧಾನ ಪೀಠಿಕೆ ಓದು, ಜಾಗೃತಿ ಜಾಥಾ ಮತ್ತು ಮಾನವ ಸರಪಳಿಯಂತಹ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ ಸಂವಿಧಾನದ ಕುರಿತು ಜಾಗೃತಿ ಮೂಡಿತು ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಾವು ಸಂವಿಧಾನದ ಪೀಠಿಕೆಯ ಓದನ್ನು ಕಡ್ಡಾಯಗೊಳಿಸಿದ ನಂತರದಲ್ಲಿ ಜನರು ನಿಧಾನಕ್ಕೆ ಅರ್ಥ ಮಾಡಿಕೊಳ್ಳಲು ಆರಂಭಿಸಿದರು. ಇದು ರಾಜಕೀಯವಾಗಿಯೂ ಕೋಮುವಾದಿ ಪಕ್ಷಗಳಿಗೆ ಪ್ರಬಲ ಸವಾಲನ್ನು ಒಡ್ಡಿತು ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಹಿಂದೆ ಬುಡಕಟ್ಟು ಕಾಲದಲ್ಲಿ ಮೆಲ್ಲಗೆ ಚಲನೆಗೆ ಬಂದ ಪ್ರಜಾಪ್ರಭುತ್ವವು ಬುದ್ಧನ ಕಾಲದಲ್ಲಿ ಬಿಕ್ಕುಗಳ ಮೂಲಕ ಮತ್ತು 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದ ರೂಪದಲ್ಲಿ ಪ್ರಜಾಪ್ರಭುತ್ವವು ಮುನ್ನಲೆಗೆ ಬಂದಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಜನಪ್ರತಿನಿಧಿಗಳಿಗೆ ಅವಕಾಶ ಕೊಟ್ಟು ಅವರು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಮುನ್ನುಡಿ ಬರೆದರು ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.
ಸಂವಿಧಾನದ ಆಶಯಗಳಾದ ಸಮಾನತೆ, ಸೋದರತ್ವ ಮತ್ತು ಭ್ರಾತೃತ್ವದ ಅಡಿಯಲ್ಲಿ ಎಲ್ಲಾ ಜನರು ಬದುಕಬೇಕಿದ್ದು ಇದಕ್ಕೆ ಅಡ್ಡಿಯಾಗಿರುವ ಶಕ್ತಿಗಳನ್ನು ನಾವು ಒಟ್ಟಾಗಿ ಎದುರಿಸಬೇಕಿದೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಇಂದಿರಾ ಗಾಂಧಿ ಅವರ ಕಾಲದಲ್ಲಿ ಪ್ರಸ್ತಾಪಿಸಲಾದ, ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳನ್ನು ಸಂವಿಧಾನದೊಳಗೆ ಅಡಗಿಸಿದ್ದು ಸುಪ್ರಿಂ ಕೋರ್ಟ್ ಈ ತತ್ವಗಳನ್ನು ಎತ್ತಿ ಹಿಡಿದಿದೆ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.
ಇದೇ ವೇಳೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಚಾಲನೆ ನೀಡಲಾಯಿತು ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಇತರೆ ಪ್ರವೇಶ ಪರೀಕ್ಷೆ ದೃಷ್ಟಿಯಿಂದ ಟ್ಯಾಬ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಭೈರತಿ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ಸಂವಿಧಾನ ಸಮರ್ಪಣೆ ಆಗುವಾಗ ‘ಭಾರತೀಯರಾದ ನಾವುಗಳು’ ಎಂದು ನಮೂದಿಸಿದೆಯೇ ಹೊರತು, ಅದರಲ್ಲಿ ಹಿಂದೂಗಳಾದ ನಾವು, ಮುಸ್ಲಿಮರಾದ ನಾವು ಅಥವಾ ಕ್ರೈಸ್ತರಾದ ನಾವು ಎಂದು ಎಲ್ಲೂ ಹೇಳಿಲ್ಲ’
-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ