‘ಪ್ರಧಾನಿ ಮೋದಿ’ ಅಮಿತ್ ಶಾರನ್ನು ವಜಾಗೊಳಿಸಬೇಕು : ದಸಂಸ ಒಕ್ಕೂಟ ಎಚ್ಚರಿಕೆ

ಬೆಂಗಳೂರು : ‘ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಮಂಡಿಯೂರಿ ಕ್ಷಮೆ ಕೇಳಬೇಕು. ಜತೆಗೆ ಪ್ರಧಾನಿ ಮೋದಿಗೆ ಕನಿಷ್ಟ ಜವಾಬ್ದಾರಿ ಇದ್ದರೆ ಅಂಬೇಡ್ಕರ್‌ಗೆ ಅಪಮಾನ ಮಾಡಿದ ಅಮಿತ್‍ರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ನಿಮ್ಮನ್ನೇ ಮನೆಗೆ ಕಳಿಸಬೇಕಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಯನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ- ಮನುವಾದ’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ‘ಸಂವಿಧಾನದ ಆಧಾರದಲ್ಲಿ ರಚನೆಯಾದ ಸದನದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಸಿದರು.
ಗುಜರಾತ್‍ನಲ್ಲಿ ಕೊಲೆ ಆರೋಪದಡಿಯಲ್ಲಿ ಗಡಿಪಾರಾದ, ಗೋದ್ರಾ ನರಮೇಧದ ರೂವಾರಿಗಳಲ್ಲಿ ಒಬ್ಬರಾದ ಅಮಿತ್ ಶಾ, ದುಷ್ಟ ಮನಸ್ಥಿತಿಯ ಮನುಷ್ಯ. ಅದಕ್ಕಾಗಿಯೇ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ದೇಶದ ಕೋಮುವಾದದ ರುವಾರಿಯಾದ, ದೇಶದಲ್ಲಿ ಅರಾಜಕತೆಯನ್ನು ಉಂಟುಮಾಡುವ ನರೇಂದ್ರ ಮೋದಿ ಅವರು ಅಮಿತ್ ಶಾ ಹೇಳಿರುವುದು ಸರಿಯಾಗಿದೆ ಎಂಬ ವಾದವನ್ನು ಮಾಡುತ್ತಿರುವುದು ಕೂಡ ಖಂಡನೀಯ ಎಂದು ಅವರು ಟೀಕಿಸಿದರು.
ಮೋದಿ ನೇತೃತ್ವದ ಸರಕಾರದ ಮಾಡುತ್ತಿರುವ ಅನ್ಯಾಯವನ್ನು ಮಲ್ಲಿಕಾರ್ಜುನ ಖರ್ಗೆಯವರು ಬಯಲಿಗೆಳೆಯುತ್ತಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿ ಅನೇಕ ಆಪಾದನೆಯನ್ನು ಮಾಡಿ, ಅವರನ್ನು ಜೈಲಿಗೆ ಕಳಿಸುವ ಪಿತೂರಿಯನ್ನು ಮಾಡಲಾಗುತ್ತಿದೆ ಎಂದು ಇಂದೂಧರ ಹೊನ್ನಾಪುರ ತಿಳಿಸಿದರು.
ಅಂಬೇಡ್ಕರ್ ಅವರು ನಮಗೆ ಅರಿವು, ತಿಳವಳಿಕೆಯನ್ನು ಕೊಟ್ಟಿದ್ದಾರೆ. ಕೋಮುವಾದದ ಸಂಚುಗಳನ್ನು ಬಯಲು ಮಾಡುವ ಚೈತನ್ಯ ದೇಶದ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಹಿಂದೆ ಮನುಸ್ಮೃತಿ ದೇಶದ ದುಡಿಯುವ ಜನರನ್ನು, ಶೂದ್ರರನ್ನು ಸಾವಿರಾರು ವರ್ಷ ತುಳಿದಿದೆ. ಆ ಕಾಲನ್ನು ಮುರಿದಿದ್ದು ನಮ್ಮ ದೇಶದ ಸಂವಿಧಾನ. ನಾವು ಉಸಿರಾಡಲು ಮೂಲ ಕಾರಣ ಕೂಡ ಸಂವಿಧಾನವಾಗಿದೆ. ಅಂಬೇಡ್ಕರ್ ಅವರ ಅನುಯಾಯಿಗಳು, ವಂಶಸ್ಥರು ಜೇನುಗೂಡು ಇದ್ದಂಗೆ ಅದಕ್ಕೆ ಕೈಯಿಟ್ಟರೆ ನಿಮ್ಮನ್ನು ಸರ್ವನಾಶ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ, ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ವಿ. ನಾಗರಾಜ್, ಎನ್.ಮುನಿಸ್ವಾಮಿ, ಜೀವನಹಳ್ಳಿ ವೆಂಕಟೇಶ್, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರದಾನ ಸಂಚಾಲಕ ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.