ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಎಲ್ಲಾ ಅವ್ಯವಹಾರಗಳ ತನಿಖೆ ನಡೆಯಲಿದೆ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಿಜೆಪಿ ಸರಕಾರದ ಶೇ.40ರಷ್ಟು ಕಮಿಷನ್ ಅಷ್ಟೇ ಅಲ್ಲ, ಪರಶುರಾಮ ಪ್ರತಿಮೆ ನಿರ್ಮಾಣದ ಅವ್ಯವಹಾರದಿಂದ ಹಿಡಿದು ಎಲ್ಲದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿ ಬಿಜೆಪಿ ಸರಕಾರದ ಶೇ.40ರಷ್ಟು ಕಮೀಷನ್ ತನಿಖೆ ಏನಾಯಿತೋ ಗೊತ್ತಿಲ್ಲ. 9 ತಿಂಗಳಾದರೂ ತನಿಖಾ ವರದಿ ಬಂದಿಲ್ಲ. ಹಾಗೆಯೇ ಪಿಎಸ್‍ಐ ಹಗರಣದ ತನಿಖೆಯೂ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಆಗ ಉತ್ತರಿಸಿದ ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿ ಸರಕಾರದ ಶೇ.40 ರಷ್ಟು ಕಮೀಷನ್ ತನಿಖೆ ನಡೆದಿದೆ. ಈ ಹಗರಣದ ಆಳ, ಆಗಲ ಎಲ್ಲವೂ ಬಯಲಾಗಲಿದೆ. ವರದಿ ಬಂದ ನಂತರ ಸದನದಲ್ಲೇ ಈ ಬಗ್ಗೆ ಚರ್ಚೆಯಾಗುತ್ತದೆ ಎಂದು ಹೇಳಿ, ಈ ತನಿಖೆಗೆ ನಿಮ್ಮ ಸಹಕಾರ ಬೇಕು. ನೀವು ಸಹಕಾರ ಕೊಡಿ, ನೀವು ತನಿಖಾ ಆಯೋಗದ ಮುಂದೆ ಹೋಗಿ ಏಕೆ ಸಾಕ್ಷಿ ಹೇಳಿಲ್ಲ ಎಂದು ಯತ್ನಾಳ್ ಅವರನ್ನು ಪ್ರಶ್ನಿಸಿದರು.
ಆಗ ಯತ್ನಾಳ್ ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ. ಹಾಗೆಯೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಸರಕಾರದ ಮೇಲೂ ಕಮೀಷನ್ ಆರೋಪ ಮಾಡಿದ್ದಾರೆ. ಅದನ್ನು ತನಿಖೆ ಮಾಡಿಸಿ. ನಾನು ಸರ್ವಪಕ್ಷದ ಅಧಿಕೃತ ವಿರೋಧಿ ನಾಯಕ ಎಂದು ಹೇಳಿದರು.
ಆಗ ಮತ್ತೆ ಮಾತನಾಡಿದ ಪ್ರಿಯಾಂಕ ಖರ್ಗೆ ಅವರು ಶೇ.40 ರಷ್ಟು ಕಮೀಷನ್ ತನಿಖೆ ಅಷ್ಟೇ ಅಲ್ಲ, ಪರಶುರಾಮ ಪ್ರತಿಮೆ ನಿರ್ಮಾಣದ ಅವ್ಯವಹಾರ ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತದೆ. ನೀವು ಸಹಕರಿಸಿ ಎಂದು ಯತ್ನಾಳ್ ಅವರಿಗೆ ಹೇಳಿದರು.