ನಾಲ್ಕನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ 25 ಸಾವಿರ ರೂ. ಹಾಗೂ ಸಹಾಯಕಿಯರಿಗೆ 12 ಸಾವಿರ ರೂ. ಕನಿಷ್ಠ ವೇತನವನ್ನು ನಿಗದಿಮಾಡಬೇಕು ಎಂದು ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ- ಸಹಾಯಕಿಯರ ಸಂಘದ ವತಿಯಿಂದ ಜ.28ರಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಮಂಗಳವಾರ ತಮ್ಮ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲಿಸಿದ್ದು, ಅಂಗನವಾಡಿ ಕಾರ್ಯಕರ್ತೆರ ಬೇಡಿಕೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು ಸಿಎಂ ಭರವಸೆ ನೀಡಿದರೂ ಕೂಡ ಧರಣಿಯನ್ನು ಮುಂದುವರಿಸಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರನ್ನು ಸಿ ದರ್ಜೆ ಮತ್ತು ಸಹಾಯಕಿಯರನ್ನು ಡಿ ದರ್ಜೆ ನೌಕರರು ಎಂದು ಪರಿಗಣಿಸಿ, ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಕರ್ನಾಟಕದಲ್ಲಿಯೂ ಜಾರಿ ಮಾಡಿ ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ- ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷೆ ಬಿ.ಪ್ರೇಮ, ಗೌರವಾಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್, ಕಾರ್ಯದರ್ಶಿ ಉಮಾಮಣಿ, ಖಜಾಂಚಿ ವಿಶಾಲಾಕ್ಷ್ಮೀ, ಉಪಾಧ್ಯಕ್ಷೆ ನಿರ್ಮಲಾ ಬಿ.ಎಸ್, ಸಹಕಾರ್ಯದರ್ಶಿ ಶಾಂತ, ರಾಜ್ಯ ಸಲಹೆಗಾರ್ತಿ ಭಾರತಿ ಎನ್.ಪಿ ಮತ್ತಿತರರು ಹಾಜರಿದ್ದರು.