ಗ್ರ್ಯಾಚುಟಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಧರಣಿ

ಬೆಂಗಳೂರು : 2022ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರ್ಯಾಚುಟಿ ಸೌಲಭ್ಯ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಧರಣಿ ಆರಂಭಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಹಾಗೂ ಖಾನಾಪೂರದಲ್ಲಿ ಪ್ರಿಯಾಂಕ ಗಾಂಧಿ ಅವರು ನೀಡಿರುವ ಭರವಸೆಯೆಂತೆ ಅಂಗನವಾಡಿ ಸಹಾಯಕಿಯರಿಗೆ 15 ಸಾವಿರ ರೂ., ಕಾರ್ಯಕರ್ತೆಯರಿಗೆ 10 ಸಾವಿರ ರೂ. ಗೌರವ ಧನ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಗುಜರಾತ್ ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ನಾಗರಿಕ ಸೇವೆಯೆಂದು ಪರಿಗಣಿಸಬೇಕು ಎಂಬ ನಿರ್ದೇಶನ ನೀಡಿದೆ. ಕ್ರಮವಾಗಿ ಸಿ ಮತ್ತು ಡಿ ದರ್ಜೆಯ ನೌಕರರ ಸ್ಥಾನಮಾನವನ್ನು ನೀಡುವ ಮೂಲಕ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸರಕಾರ ಸರಕಾರ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 1975ರಲ್ಲಿ ರೂಪಿಸಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ (ಐಸಿಡಿಎಸ್) 50 ವರ್ಷವಾಗಿದೆ ಆದರೂ ಕೂಡ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಪಡಿಸಿಲ್ಲ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಪ್ರಧಾನಕಾರ್ಯದರ್ಶಿ ಎಂ.ಜಯಮ್ಮ, ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್, ಡಿ.ಎ.ವಿಜಯ ಭಾಸ್ಕರ್, ಗಿರಿಜಾ ಮತ್ತಿತರರು ಭಾಗವಹಿಸಿದ್ದರು.
ಧರಣಿ ಸ್ಥಳಕ್ಕೆ ಗುಂಡೂರಾವ್ ಭೇಟಿ: ಧರಣಿ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಮನವಿ ಸ್ವೀಕರಿಸಿದ್ದು, ಬಜೆಟ್‍ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಚಿವರ ಭರವಸೆಯಂತೆ ಧರಣಿಯನ್ನು ಹಿಂಪಡೆಯಲಾಯಿತು. ಬಜೆಟ್‍ನಲ್ಲಿ ಕನಿಷ್ಠ ವೇತನ ನಿಗದಿಯಾಗದಿದ್ದರೆ ಬಜೆಟ್ ಮಂಡನೆಯಾದ ಮರುದಿನದಿಂದ ಪ್ರತಿಭಟನೆ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷ ಬಿ.ಅಮ್ಜದ್ ತಿಳಿಸಿದ್ದಾರೆ.