ದಿಲ್ಲಿ ಪೊಲೀಸರಿಂದ ಮಾನವ ಹಕ್ಕುಗಳ ಕಾರ್ಯಕರ್ತ ನದೀಮ್ ಖಾನ್ ಅಕ್ರಮ ಬಂಧನಕ್ಕೆ ಯತ್ನ: APCR ಖಂಡನೆ
ಬೆಂಗಳೂರು: ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಅವರ ಸಹೋದರ ಕಾಶಿಫ್ ಖಾನ್ ಅವರ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಿವಾಸಕ್ಕೆ ಅಕ್ರಮ ದಾಳಿ, ಕಿರುಕುಳ ಮತ್ತು ನದೀಮ್ ಖಾನ್ ಅವರನ್ನು ಅಕ್ರಮ ಬಂಧನಕ್ಕೆ ಯತ್ನಿಸಿರುವುದನ್ನು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಕರ್ನಾಟಕ ಘಟಕ ತೀವ್ರವಾಗಿ ಖಂಡಿಸಿದೆ.
APCR ಕರ್ನಾಟಕ ಘಟಕದ ಅಧ್ಯಕ್ಷ ಪಿ. ಉಸ್ಮಾನ್ ಮತ್ತು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಿಯಾಝ್ ಅವರು ದಿಲ್ಲಿ ಪೊಲೀಸರ ಕ್ರಮಗಳನ್ನು ಕಾನೂನುಬಾಹಿರ, ಅಕ್ರಮ ಮತ್ತು ಸಂವಿಧಾನದ 14,19 ಮತ್ತು 21ನೇ ವಿಧಿಗಳಲ್ಲಿನ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಟೀಕಿಸಿದ್ದಾರೆ. ಖಾನ್ ಅವರು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಕಾರಣ ಪೊಲೀಸರು ಅವರನ್ನು ಗುರಿಯಾಗಿಸಿದ್ದಾರೆ. ಕರ್ನಾಟಕ ಸರ್ಕಾರವು ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಿಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಥಳೀಯ ಪೊಲೀಸರಿಗೆ ಯಾವುದೇ ಸೂಚನೆ ನೀಡದೆ ನಡೆಸಿದ ದಾಳಿಯು ʼಅರ್ನೇಶ್ ಕುಮಾರ್ vs ಬಿಹಾರʼ ಮತ್ತು ʼಸಿದ್ಧಾರ್ಥ್ vs ಉತ್ತರಪ್ರದೇಶʼ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಶಾಹೀನ್ ಬಾಗ್ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ದಿಲ್ಲಿ ಪೊಲೀಸ್ ಅಧಿಕಾರಿಗಳು ಮನೆಗೆ ಅಕ್ರಮವಾಗಿ ಪ್ರವೇಶಿಸಿ ನದೀಮ್ ಖಾನ್ ಕುಟುಂಬವನ್ನು ಬೆದರಿಸಿದ್ದಾರೆ ಎಂದು APCR ಆರೋಪಿಸಿದೆ.
ದಿಲ್ಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯಲ್ಲಿ ನದೀಮ್ ಖಾನ್ ವಿರುದ್ಧ BNS ಕಾಯ್ದೆಯ ಸೆಕ್ಷನ್ 196, 353(2) ಮತ್ತು 61ರ ಅಡಿಯಲ್ಲಿ ದಾಖಲಾದ ಪ್ರಕರಣವು ಕಟ್ಟುಕಥೆಯಾಗಿದೆ. ಕ್ರಿಮಿನಲ್ ತನಿಖೆಯ ನೆಪದಲ್ಲಿ ಉತ್ತರಪ್ರದೇಶ, ಸೇರಿದಂತೆ ಇತರ ರಾಜ್ಯಗಳಲ್ಲಿ ಆರೋಪಿಗಳ ಮನೆಗಳನ್ನು ಅಕ್ರಮವಾಗಿ ಕೆಡವುದನ್ನು ವಿರೋಧಿಸಿದ್ದರಿಂದ ಈ ರೀತಿ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು APCR ಹೇಳಿಕೊಂಡಿದೆ.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ನದೀಮ್ ಖಾನ್ ದಿಲ್ಲಿ ಪೊಲೀಸರು ಆಗಮಿಸಿದಾಗ ತನ್ನ ಸಹೋದರನ ನಿವಾಸದಲ್ಲಿದ್ದರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಮಧ್ಯಪ್ರವೇಶದ ಹೊರತಾಗಿಯೂ, ಅಧಿಕಾರಿಗಳು ಸರಿಯಾದ ದಾಖಲೆಗಳನ್ನು ಪ್ರಸ್ತುತಪಡಿಸದೆ, ಸ್ಥಳೀಯ ಪೊಲೀಸರ ಅನುಮತಿಯನ್ನು ಪಡೆಯದೆ ನದೀಮ್ ಖಾನ್ ಅವರನ್ನು ಅಕ್ರಮವಾಗಿ ಬಂಧಿಸಲು ಮುಂದಾಗಿದ್ದಾರೆ. ದಿಲ್ಲಿ ಪೊಲೀಸರ ವಿರುದ್ಧ ಕಾಶಿಫ್ ಖಾನ್ ಅತಿಕ್ರಮಣ, ಕಿರುಕುಳ ಮತ್ತು ಬೆದರಿಕೆ ಆರೋಪದಲ್ಲಿ ಪ್ರಕರಣವನ್ನು ಕೂಡ ದಾಖಲಿಸಿದ್ದಾರೆ ಎಂದು APCR ಹೇಳಿದೆ.