ಅಬಕಾರಿ ಇಲಾಖೆಯ ಭ್ರಷ್ಟ ಅಧಿಕಾರಿ, ನೌಕರರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿ.ಎಂಗೆ ಮನವಿ
ಸಿದ್ದರಾಮಯ್ಯ
ಬೆಂಗಳೂರು : ಅಬಕಾರಿ ಸನ್ನದುದಾರುಗಳಿಗೆ ಇಲಾಖೆಯ ಅಧಿಕಾರಿ, ನೌಕರರು ಅನಾವಶ್ಯಕವಾಗಿ ತೊಂದರೆಗಳನ್ನು ನೀಡುತ್ತಿದ್ದು, ಭ್ರಷ್ಟ ಅಧಿಕಾರಿ, ನೌಕರರುಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 'ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ಸ್ ಡೆವಲಪ್ಮೆಂಟ್ ಕೋ-ಆಪರೇಟಿವ್ ಸೊಸೈಟಿ'ಯು ಮನವಿ ಮಾಡಿದೆ.
ಸೋಮವಾರ ಈ ಸಂಬಂಧ ಸೊಸೈಟಿ ಪದಾಧಿಕಾರಿಗಳು ಸಿ.ಎಂರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಮದ್ಯ ಮಾರಾಟಗಾರರಿಗೆ ಹಾಲಿ ಇರುವಂತಹ ಶೇ.10 ಲಾಭಂಶದಲ್ಲಿ ಖರ್ಚು ವೆಚ್ಚವನ್ನೆಲ್ಲ ಕಳೆದರೆ ವ್ಯವಹಾರ ನಿರ್ವಹಿಸುವುದು ಕಷ್ಟಕರವಾಗಿರುತ್ತದೆ. ಹಾಗಾಗಿ ಹಾಲಿ ಇರುವಂತಹ ಶೇ.10ರ ಬದಲಾಗಿ ಲಾಭಂಶವನ್ನು ಶೇ.15ಕ್ಕೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದೆ.
ಒಂದು ಸನ್ನದಿಗೆ ಮೂರು ಮೊಕ್ಕದಮೆಗಳು ದಾಖಲಾದರೆ ಅಂತಹ ಸಂದರ್ಭಗಳಲ್ಲಿ ಸನ್ನದುಗಳನ್ನು ಅಮಾನತ್ತು ಪಡಿಸುವುದರ ಸುತ್ತೋಲೆಯನ್ನು ಮಾರ್ಪಡಿಸಿ ಪ್ರಕರಣದ ಸ್ವರೂಪ ಮತ್ತು ನ್ಯೂನ್ಯತೆಗಳನ್ನು ಪರಿಶೀಲಿಸಿ ಅಬಕಾರಿ ನಿಯಮಗಳಡಿಯಲ್ಲಿ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿದೆ.
ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿ ಇರುವ ಕಟ್ಟು ನಿಟ್ಟಿನ ಅಬಕಾರಿ ನಿಯಮಗಳು ಇತರೆ ರಾಜ್ಯಗಳು ಅನುಸರಿಸುತ್ತಿದೆ. ಹೀಗಾಗಿ ಈಗಿರುವ ನಿಯಮಗಳನ್ನೇ ಅನುಸರಿಸಬೇಕು ಎಂದು ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ಸ್ ಡೆವಲಪ್ಮೆಂಟ್ ಕೋ-ಆಪರೇಟಿವ್ ಸೊಸೈಟಿಯು ಹೇಳಿದೆ.