ಆಡಳಿತ-ವಿಪಕ್ಷ ಸದಸ್ಯರ ನಡುವೆ ವಾಗ್ವಾದ: 10 ನಿಮಿಷ ಮೈಕ್ ಆಫ್ ಮಾಡಿದ ಸ್ಪೀಕರ್!
ವಿಧಾನ ಮಂಡಲ ಅಧಿವೇಶನ
ಬೆಂಗಳೂರು, ಜು.16: ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷ ಮತ್ತು ಆಡಳಿತ ಸದಸ್ಯರ ನಡುವೆ ವಾಗ್ವಾದ ತೀವ್ರಗೊಂಡಾಗ ಸ್ಪೀಕರ್ ಯು.ಟಿ.ಖಾದರ್ ಅವರು ಸುಮಾರು 10 ನಿಮಿಷಗಳ ಮೈಕ್ ಆಫ್ ಮಾಡಿದ ಘಟನೆ ಇಂದು ನಡೆಯಿತು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಅಧಿವೇಶನದ 2ನೇ ದಿನವಾದ ವಿಪಕ್ಷ ನಾಯಕ ಆರ್.ಅಶೋಕ್ ಇಂದು ಕೂಡಾ ಚರ್ಚೆ ಮುಂದುವರಿಸಿದರು. ಚರ್ಚೆ ಮುಗಿಸಿದ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ ನಡೆದಿರುವುದರಿಂದ ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಸಿದರು.
ಇದನ್ನು ಆಕ್ಷೇಪಿಸಿದ ಸಚಿವ ಎಂ.ಬಿ.ಪಾಟೀಲ್ ಕೋವಿಡ್ ಅವಧಿಯಲ್ಲಿ ಎಷ್ಟು ಹಗರಣ ನಡೆದಿಲ್ಲ? ಆಗ ಎಷ್ಟು ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೂಡಾ ಧ್ವನಿಗೂಡಿಸಿದರು. ಇದು ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದಕ್ಕೆ ನಾಂದಿಯಾಯಿತು.
ಬಸನಗೌಡ ಪಾಟೀಲ್ ಯತ್ನಾಳ್, ಪ್ರಿಯಾಂಕ್ ಖರ್ಗೆ, ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥನಾರಾಯಣ ಮೊದಲಾದವರ ನಡುವೆ ವಾಗ್ವಾದ ತೀವ್ರಗೊಂಡು ಸದನದ ಗೊಂದಲದ ಗೂಡಾಯಿತು. ಈ ನಡುವೆ ಮುಖ್ಯಮಂತ್ರಿ ಹೇಳಿಕೆ ನೀಡಲಿದ್ದಾರೆ, ಸುಮ್ಮನಿರಿ ಎಂದು ಸ್ಪೀಕರ್ ಯು.ಟಿ.ಖಾದರ್ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಮೈಕ್ ಗಳನ್ನು ಸ್ಪೀಕರ್ ಆಫ್ ಮಾಡಿಸಿದರು. ಸುಮಾರು 10 ನಿಮಿಷಗಳ ಕಾಲ ಮೈಕ್ ಆಫ್ ಇದ್ದರೂ ಆಡಳಿತ-ವಿಪಕ್ಷ ಸದಸ್ಯರ ವಾಗ್ವಾದ ಕೆಲಹೊತ್ತು ಮುಂದುವರಿದಿತ್ತು.