ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಹತ್ಯೆ: ಮೂವರ ಬಂಧನ
ಬೆಂಗಳೂರು: 2020ರಲ್ಲಿ ನಡೆದಿದ್ದ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಇರ್ಫಾನ್ ಹತ್ಯೆ ಪ್ರಕರಣ ಸಂಬಂಧ ಮೂವರನ್ನು ಇಲ್ಲಿನ ಗೋವಿಂದಪುರ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಉವೈಸ್, ಅಬ್ದುಲ್ ಅಲೀಮ್ ಹಾಗೂ ಹನೀಫ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯಾದ ಇರ್ಫಾನ್ ಎ.22ರ ರಾತ್ರಿ ಪತ್ನಿಯನ್ನು ಮನೆಗೆ ಬಿಟ್ಟು ಎಚ್‍ಬಿಆರ್ ಲೇಔಟ್ ಬಳಿ ವಾಪಸ್ ನಡೆದುಕೊಂಡು ಬರುವಾಗ ಏಕಾಏಕಿ ಮೂವರು ಆರೋಪಿಗಳು ಆಟೊದಲ್ಲಿ ಬಂದು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿ ಆಗಿದ್ದರು. ಈ ಸಂಬಂಧ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಮೃತ ಇರ್ಫಾನ್ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದ ಸಂದರ್ಭದಲ್ಲಿ ಅಬ್ಬಾಸ್ ಎಂಬಾತನೊಂದಿಗೆ ಪರಪ್ಪನ ಅಗ್ರಹಾರದಲ್ಲಿ ಸ್ನೇಹ ಬೆಳೆಸಿದ್ದ. ಕೆಲ ತಿಂಗಳ ಹಿಂದೆ ಇರ್ಫಾನ್ ಜಾಮೀನು ಪಡೆದು ಹೊರಬಂದಿದ್ದು, ಅಬ್ಬಾಸ್ ಪತ್ನಿಯೊಂದಿಗೆ ಇರ್ಫಾನ್ ಸ್ನೇಹ ಬೆಳೆಸಿಕೊಂಡಿದ್ದ. ಇದೇ ವಿಚಾರವಾಗಿ ಅಬ್ಬಾಸ್ ತನ್ನ ಸಹಚರರೊಂದಿಗೆ ಸೇರಿ ಕೃತ್ಯವೆಸಗಿರುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.