ಸಿದ್ದರಾಮಯ್ಯ ವಿರುದ್ಧ ಹೂಡಿದ ಷಡ್ಯಂತ್ರಕ್ಕೆ ಉತ್ತರ ಸಿಕ್ಕಿದೆ : ಎ.ಎಸ್.ಪೊನ್ನಣ್ಣ

ಎ.ಎಸ್.ಪೊನ್ನಣ್ಣ
ಬೆಂಗಳೂರು : ಯಾವುದೇ ಕಪ್ಪುಚುಕ್ಕೆಯಿಲ್ಲದೆ 40 ವರ್ಷಗಳಿಂದ ರಾಜಕೀಯ ಜೀವನದಲ್ಲಿರುವ ಸಿದ್ದರಾಮಯ್ಯರ ತಲೆಗೆ ಮುಡಾ ಹಗರಣ ಕಟ್ಟಿ ಷಡ್ಯಂತ್ರ ಹೂಡಲು, ಇಲ್ಲಸಲ್ಲದ ಆರೋಪಗಳ ಹೊರಿಸಲು ಮುಂದಾಗಿದ್ದ ವಿರೋಧಿಗಳಿಗೆ ಹೈಕೋರ್ಟ್ ತೀರ್ಪಿನಿಂದ ಉತ್ತರ ಸಿಕ್ಕಂತಾಗಿದೆ ಎಂದು ಸಿಎಂ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಬಂದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಮುಡಾ ಹಗರಣದಲ್ಲಿ ನ್ಯಾಯಾಲಯ ಮೂರು ಅಂಶಗಳನ್ನು ಉಲ್ಲೇಖಿಸಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದ್ದು, ಸಿಬಿಐಗೆ ವಹಿಸಲು ಕಾರಣವಾದ ಅಂಶಗಳು ಈ ಪ್ರಕರಣದಲ್ಲಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದರು.
ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿರುವಾಗ ಸಿಬಿಐಗೆ ಹಸ್ತಾಂತರ ಮಾಡುವಂತಹ ಅಂಶಗಳು ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ. ನಾನು ಇನ್ನೂ ತೀರ್ಪಿನ ಪ್ರತಿ ಓದಿಲ್ಲ. ಈ.ಡಿ.ಯವರ ಎರಡೂ ನೋಟಿಸ್ಗಳು ನ್ಯಾಯಾಲಯದಲ್ಲಿವೆ. ಯಾವುದೇ ತನಿಖೆಗೂ ನಾವು ಸಹಕಾರ ಕೊಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಹೋರಾಡುತ್ತೇವೆ ಎಂದು ಎ.ಎಸ್.ಪೊನ್ನಣ್ಣ ಹೇಳಿದರು.
ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ. ಸಿಬಿಐ, ಈ.ಡಿ. ನಂತಹ ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸುವುದನ್ನು ನಾವು ಮೊದಲಿನಿಂದಲೂ ಖಂಡಿಸುತ್ತಾ ಬಂದಿದ್ದೇವೆ. ಉಳಿದಂತೆ ಯಾವುದೇ ತನಿಖೆಯಲ್ಲಿ ಅಥವಾ ಕಾನೂನು ಪ್ರಕ್ರಿಯೆಯಲ್ಲಿ ಯಾರು ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಎ.ಎಸ್.ಪೊನ್ನಣ್ಣ ತಿಳಿಸಿದರು.
ಮುಡಾ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರು ನೀಡಿರುವ ಪೂರ್ವಾನುಮತಿಯನ್ನು ಪ್ರಶ್ನಿಸಿ, ಸಲ್ಲಿಸಲಾಗಿರುವ ಮೇಲ್ಮನವಿ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ಇನ್ನು ತೀರ್ಪು ನೀಡಿಲ್ಲ. ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಮಾತ್ರ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದೆ. ಲೋಕಾಯುಕ್ತ ತನಿಖೆ ಕೂಡ ಇನ್ನು ಪೂರ್ಣಗೊಂಡಿಲ್ಲ ಎಂದು ಎ.ಎಸ್.ಪೊನ್ನಣ್ಣ ವಿವರಿಸಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲವೆಂದು ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ನೈಜ್ಯ ಕಾನೂನು ಹೋರಾಟ ನಡೆಯುತ್ತಿಲ್ಲ. ಯಾವ ಅಪರಾಧ ಕೂಡ ನಡೆದಿಲ್ಲ. ಯಾವುದೇ ಅಪರಾಧೀಕರಣಕ್ಕೆ ಕಾಲಮಿತಿ ಎಂಬುದಿರುತ್ತದೆ. 1996ರ ಪ್ರಕರಣವನ್ನು ಈಗ ವಿಚಾರಣೆ ನಡೆಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದರಲ್ಲಿ ರಾಜಕೀಯ ಕಾರಣ ಬಿಟ್ಟರೇ ಬೇರೇನೂ ಇಲ್ಲ ಎಂದು ಎ.ಎಸ್.ಪೊನ್ನಣ್ಣ ಖಂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅಮಾಯಕ ಹೆಣ್ಣು ಮಗಳು. ದುರದ್ದೇಶಪೂರ್ವಕವಾಗಿ ಅವರಿಗೆ ಮುಜುಗರ ಉಂಟು ಮಾಡಲಾಗುತ್ತಿದೆ ಎಂದು ಎ.ಎಸ್.ಪೊನ್ನಣ್ಣ ಆಕ್ಷೇಪಿಸಿದರು.
ಸ್ನೇಹಮಯಿ ಕೃಷ್ಣ ಹಿಂದೆ ವಿಪಕ್ಷಗಳ ಕೈವಾಡ: ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುತ್ತೇನೆ ಎಂದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಎ.ಎಸ್.ಪೊನ್ನಣ್ಣ, ಇಲ್ಲಿ ಸ್ನೇಹಮಯಿ ಕೃಷ್ಣ ಎಂಬುದು ಕೇವಲ ನೆಪ ಮಾತ್ರ. ಇದರ ಹಿಂದೆ ವಿರೋಧ ಪಕ್ಷಗಳ ಕೈವಾಡವಿದೆ. ಸ್ನೇಹಮಯಿ ಕೃಷ್ಣ ಅವರ ಪರವಾಗಿ ದೊಡ್ಡ ದೊಡ್ಡ ವಕೀಲರು ಬಂದು ವಾದ ಮಾಡುತ್ತಿದ್ದಾರೆ. ಹಿರಿಯ ವಕೀಲರಿಗೆ ಹಣ ನೀಡಲು ಸ್ನೇಹಮಯಿ ಕೃಷ್ಣ ಅವರಿಗೆ ಸಾಧ್ಯವೇ?, ವಾಸ್ತವ ಏನು ಎಂದು ಎಲ್ಲರಿಗೂ ಗೊತ್ತಿದೆ. ಸರಕಾರಕ್ಕೆ ಗುಪ್ತಚರ ಮಾಹಿತಿ ಇದೆ. ಕೆಲವರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಎ.ಎಸ್.ಪೊನ್ನಣ್ಣ ಹೇಳಿದರು.