ಬೆಂಗಳೂರು | ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಹೆಚ್ಚಳ; ಅಧಿಕೃತ ಆದೇಶ ನೀಡಲು ಆಗ್ರಹಿಸಿ ಧರಣಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿರುವಂತೆ ಎಪ್ರಿಲ್ ನಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ಮಾಸಿಕ 10 ಸಾವಿರ ರೂ. ಹಾಗೂ ರಾಜ್ಯ ಬಜೆಟ್‍ನಲ್ಲಿ ಘೋಷಣೆಯಾದ 1,000 ರೂ. ಹೆಚ್ಚಳ ಸೇರಿಸಿ ಅಧಿಕೃತ ಆದೇಶ ಮಾಡಬೇಕು ಎಂದು ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ ಇದೇ ಬಜೆಟ್ ಪೂರ್ವಭಾವಿ ಸಭೆಯನ್ನುಸಂಘದೊಂದಿಗೆ ನಡೆಸಿರುವುದಿಲ್ಲ. ಸಂಘದಿಂದ ಸಾಕಷ್ಟು ಪ್ರಯತ್ನಿಸಿದಾಗ್ಯೂ ಈ ಸಭೆ ನಡೆಸಿರುವುದಿಲ್ಲ. ಈ ಆಯವ್ಯಯದಲ್ಲಿ ರಾಜ್ಯದ ಸುಮಾರು 2,50,000 ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೂ ರೂ. 1000 ಹೆಚ್ಚಿಸಿ, ಇದೇ ಬಜೆಟ್‍ನಲ್ಲಿ ಸೇರಿಸಿ, ಆದೇಶಿಸಬೇಕಾಗಿದೆ ಎಂದು ಧರಣಿ ನಿರತರು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರಿಗೆ ಈ ಬಜೆಟ್‍ನಲ್ಲಿ ತಂಡ ಆಧಾರಿತ 1000 ರೂ. ಹೆಚ್ಚಳ ಎಂದು ಕೇವಲ ಸುಮಾರು 2,2000 ಆಶಾಗಳಿಗೆ 10, 000 ರೂ. ನೀಡಲು ಬೇಕಿದ್ದ ಹೆಚ್ಚುವರಿ ಬಜೆಟ್ ನೀಡಿರುತ್ತಾರೆ. ಈ ತಂಡ ಆಧಾರಿತ ಹಣ ಈಗಾಗಲೇ ಸುಮಾರು 20,000 ಆಶಾಗಳಿಗೆ ಇತ್ತು. ಇನ್ನುಳಿದ 22,000 ಆಶಾಗಳಿಗೆ ಅಗತ್ಯ ಇದ್ದ ಹಣ ಬಜೆಟ್‍ನಲ್ಲಿ ಘೋಷಿಸಲಾಗಿದೆ ಎಂದು ತಿಳಿಸಿದರು.
ಕೂಡಲೇ ಆರೋಗ್ಯ ಸಚಿವರ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಮಾಡಿ ಇನ್ನುಳಿದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ ಯಾದಗಿರಿ, ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ರಾಜ್ಯ ಉಪಾಧ್ಯಕ್ಷೆ ರಮಾ.ಟಿ.ಸಿ ಮತ್ತಿತರರು ಹಾಜರಿದ್ದರು.