ʼವಿಪಕ್ಷ ನಾಯಕನಾಗಿ ಅಶೋಕ್ ವಿಫಲʼ : ಸ್ವಪಕ್ಷೀಯರಿಂದಲೇ ಅಸಮಾಧಾನ
ಬೆಳಗಾವಿ (ಸುವರ್ಣ ವಿಧಾನಸೌಧ): ಸರಕಾರದ ವೈಫಲ್ಯ, ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳನ್ನು ಸದನದಲ್ಲಿ ಪ್ರಸ್ತಾವಿಸುವ ಮೂಲಕ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬೇಕಿದ್ದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂಬ ಆರೋಪ ಬಿಜೆಪಿ ಸದಸ್ಯರಿಂದಲೇ ಕೇಳಿ ಬಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ, ವಕ್ಸ್ ಆಸ್ತಿ ಗೊಂದಲ, ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ನಡೆದ ಹೋರಾಟದ ಸಂದರ್ಭದಲ್ಲಿ ಆಗಿದ್ದ ಲಾಠಿ ಚಾರ್ಜ್, ಅಭಿವೃದ್ಧಿ ವಿಚಾರಗಳು ಸೇರಿದಂತೆ ಸರಕಾರದ ಲೋಪದೋಷಗಳನ್ನು ಎತ್ತಿ ಹಿಡಿದು ಬಿಸಿ ಮುಟ್ಟಿಸಬೇಕಾದ ಆರ್.ಅಶೋಕ್, ಪರಿಣಾಮಕಾರಿಯಾಗಿ ದಾಖಲೆಗಳು ಮತ್ತು ಅಂಕಿ-ಅಂಶಗಳ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸ್ವಪಕ್ಷದ ಶಾಸಕರೇ ದೂರಿದ್ದಾರೆ.
ಯಾವುದೇ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. ಈ ಅಧಿವೇಶನದ ಆರಂಭದಿಂದಲೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅನೇಕ ಅಸ್ತ್ರಗಳಿದ್ದವು. ಮುಡಾ, ವಾಲ್ಮೀಕಿ ನಿಗಮದ ಅಕ್ರಮ, ವಕ್ಸ್ ಆಸ್ತಿ ಗೊಂದಲ, ಪಂಚಮಸಾಲಿ ಮೀಸಲಾತಿ ವಿವಾದ ಸೇರಿದಂತೆ ಹಲವು ವಿಚಾರಗಳಿದ್ದರೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಪ್ರತಿಪಕ್ಷ ನಾಯಕ ಅಶೋಕ್ ವಿಫಲರಾಗುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಸದಸ್ಯರು ಟೀಕಿಸಿದ್ದಾರೆ.
ಪ್ರತಿಪಕ್ಷದ ನಾಯಕನಾಗಿ ಆರ್.ಅಶೋಕ್ ಅವರಿಗೆ ಇರಬೇಕಾದ ಗಂಭೀರತೆ ಇಲ್ಲ. ಹಾಗೆ ನೋಡಿದರೆ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಯಾವುದೇ ವಿಷಯದಲ್ಲಿ ರಾಜಿಯಾಗದೆ ಅವರು ನೇರವಾಗಿ ಹೇಳಬೇಕಾದ್ದುದನ್ನು ಹೇಳುತ್ತಾರೆ. ಒಬ್ಬ ಪ್ರತಿಪಕ್ಷದ ನಾಯಕ ಹೀಗೇ ಇರಬೇಕೆಂಬುದು ಶಾಸಕರ ಆಗ್ರಹ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿಯೂ ಅಶೋಕ್ ವಿಫಲರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲೇ ಬಣ ರಾಜಕೀಯದಿಂದ ಸೊರಗಿರುವ ಬಿಜೆಪಿಯಲ್ಲಿ ಇದೀಗ, ಪ್ರತಿಪಕ್ಷದ ನಾಯಕರ ವಿರುದ್ದವೇ ಅಸಮಾಧಾನವೂ ವ್ಯಕ್ತವಾಗುತ್ತಿದೆ